Advertisement
ಮಳೆಯ ತೀವ್ರತೆಗೆ ನದಿ ತೊರೆಗಳು ತುಂಬಿ ಹರಿಯುತ್ತಿದ್ದು, ಹಾರಂಗಿ ಜಲಾಶಯದಿಂದ ನೀರನ್ನು ಹೊರ ಬಿಡಲಾಗಿದೆ.
Related Articles
Advertisement
ಮಡಿಕೇರಿ ನಗರದಲ್ಲಿ ಮಳೆಯೊಂದಿಗೆ ಮೈಕೊರೆಯುವ ಚಳಿ ಇದೆ. ಮಂಗಳಾದೇವಿ ನಗರದಲ್ಲಿ ಬರೆ ಕುಸಿದಿದ್ದು, ವಿದ್ಯುತ್ ಕಂಬಗಳು ನೆಲಕಚ್ಚಿವೆ. ಉಳಿದ ಬಡಾವಣೆಗಳಲ್ಲೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ. ಓಂಕಾರೇಶ್ವರ ದೇವಾಲಯದ ಕೆರೆ ತುಂಬಿ ಹರಿಯುತ್ತಿದ್ದು, ಆವರಣ ಜಲಾವೃತಗೊಂಡಿದೆ. ಅಬ್ಬಿ ಜಲಪಾತ ತುಂಬಿ ಹರಿಯುತ್ತಿದ್ದು, ನಗರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.
ಕಾರ್ಮಿಕರಿಗೆ ರಜೆ ಸುಂಟಿಕೊಪ್ಪ ಹೋಬಳಿಯಲ್ಲಿ ಪನರ್ವಸು ಮಳೆಯ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಜು.6 ರಂದು ಸಂಜೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರಿಗೆ ರಜೆ ನೀಡಲಾಗಿದೆ. ಹಟ್ಟಿಹೊಳೆಗೆ ಒಂದೇ ದಿನದಲ್ಲಿ 8 ಇಂಚು, ಮಾದಾಪುರಕ್ಕೆ 5 ಇಂಚು,ಐಗೂರಿಗೆ 7 ಇಂಚು, ಹರದೂರಿಗೆ 6 ಇಂಚು, ಸುಂಟಿಕೊಪ್ಪಕ್ಕೆ 5 ಇಂಚು, ಮಳೆಯಾಗಿದೆ. ಹಟ್ಟಿಹೊಳೆ, ಮಾದಾಪು, ಐಗೂರು, ಚೋರನಹೊಳೆ, ಹರದೂರು ಹೊಳೆ ತುಂಬಿ ಹರಿಯುತ್ತಿದ್ದು ನಾಲೆ, ತೊರೆಗಳು ತುಂಬಿ ಹರಿಯುತ್ತಿವೆ. ವಿರಾಜಪೇಟೆ ತಾಲೂಕಿನಲ್ಲೂ ಭಾರೀ ಮಳೆಯಾಗುತ್ತಿದ್ದು, ಕೆರೆ, ತೋಡುಗಳು, ಕಾವೇರಿ ಹೊಳೆಯ ನೀರಿನ ಮಟ್ಟ ಏರಿಕೆಯಾಗಿದೆ. ಕದನೂರು, ಬಿಟ್ಟಂಗಾಲ ಹಾಗೂ ಆರ್ಜಿ ಗ್ರಾಮಗಳಲ್ಲಿ ಗದ್ದೆ ಹಾಗೂ ಬಾಣೆ ಜಾಗಗಳು ಜಲಾವೃತ್ತಗೊಳ್ಳಲು ಆರಂಭಗೊಂಡಿವೆ.
ಆರ್ಜಿ ಗ್ರಾಮದಲ್ಲಿಯೂ ಭಾರೀ ಮಳೆ ಯಾಗುತ್ತಿದ್ದು ಅನ್ವಾರುಲ್‌ಹುದಾ ವಿದ್ಯಾ ಸಂಸ್ಥೆಯ ಮುಂಭಾಗದ ಕೊಡಗು ಕೇರಳ ರಾಜ್ಯ ಹೆದ್ದಾರಿಯ ಸೇತುವೆಯ ಮೇಲೆ ಒಂದಡಿಯಷ್ಟು ನೀರು ಹರಿದಿದ್ದರೂ ಸಂಚಾರಕ್ಕೆ ಅಡಚಣೆ ಯಾಗಿಲ್ಲ. ಬಲಮುರಿಯಲ್ಲೂ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲೂ ಧಾರಾಕಾರ ಮಳೆಯಾಗುತ್ತಿದೆ.