Advertisement

Kodagu; ದೇವಸ್ಥಾನ ಪ್ರವೇಶ ನಿರಾಕರಣೆ: ವಿವಿಧೆಡೆ ಕೊಡವರಿಂದ ರಸ್ತೆ ತಡೆ

11:38 PM Dec 30, 2024 | Team Udayavani |

ಮಡಿಕೇರಿ: ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾ ಮೃತ್ಯುಂಜಯ ದೇವಾಲಯದ ಜಾತ್ರೆಯ ಸಂದರ್ಭ ಸಾಂಪ್ರದಾಯಿಕ ಕೊಡವ ಉಡುಪು ಕುಪ್ಯಚೇಲೆ ತೊಟ್ಟವರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡದಿರುವುದನ್ನು ಖಂಡಿಸಿ ಜಿಲ್ಲೆಯ ವಿವಿಧೆಡೆ ಕೊಡವ ಸಮುದಾಯದವರು ರಸ್ತೆತಡೆ ಪ್ರತಿಭಟನೆ ನಡೆಸಿದರು.

Advertisement

ದೇವಸ್ಥಾನ ಸಮಿತಿಯ ನಿಲುವಿನ ವಿರುದ್ಧ ಕೊಡವ ಸಮುದಾಯದ ವಿವಿಧ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದವು. ದಕ್ಷಿಣ ಕೊಡಗಿನ ವಿರಾಜಪೇಟೆ, ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ, ಟಿ.ಶೆಟ್ಟಿಗೇರಿ, ಮಡಿಕೆೇರಿ ತಾಲೂಕಿನ ಮೂರ್ನಾಡು, ನಾಪೋಕ್ಲಿನಲ್ಲಿ ತೀವ್ರ ಪ್ರತಿಭಟನೆ ನಡೆಯಿತು. ಕಟ್ಟೆಮಾಡು ಭಾಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪೊನ್ನಂಪೇಟೆಯಿಂದ ಕಟ್ಟೆಮಾಡು ದೇವಾಲಯಕ್ಕೆ ಬೈಕ್‌ ಜಾಥಾ ನಡೆಸಲು ಮುಂದಾದವರನ್ನು ಪೊಲೀಸರು ವಶಕ್ಕೆ ಪಡೆದರು.

ಬೈಕ್‌ ಜಾಥಾಕ್ಕೆ ಸಜ್ಜಾಗಿದ್ದ ಕೊಡವ ರೈಡರ್ಸ್‌ ಕ್ಲಬ್‌ ಅಧ್ಯಕ್ಷ ಅಜ್ಜಿಕುಟ್ಟಿàರ ಪ್ರಥ್ವಿ ಸುಬ್ಬಯ್ಯ, ಚಮ್ಮಟಿರ ಪ್ರವೀಣ್‌ ಉತ್ತಪ್ಪ ಹಾಗೂ ಸಣ್ಣುವಂಡ ದರ್ಶನ್‌ ಕಾವೇರಪ್ಪ ಅವರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು, ಅವರನ್ನು ಸ್ವಲ್ಪ ಹೊತ್ತು ಠಾಣೆಯಲ್ಲಿ ಇರಿಸಿಕೊಂಡು ಜಾಥಾ ಹೊರಡದಂತೆ ಮನವೊಲಿಸುವ ಪ್ರಯತ್ನಗಳನ್ನು ಮಾಡಿದರು. ಈ ಹಂತದಲ್ಲಿ ಪೊನ್ನಂಪೇಟೆ ಠಾಣೆಯ ಮುಂಭಾಗ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿ ಪ್ರತಿಭಟನೆ ನಡೆಸಿದರು.

ದೇಗುಲದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
ಈಗಾಗಲೇ ದೇವಾಲಯದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಯಾರಾದರೂ ಶಾಂತಿಭಂಗ ಮಾಡಲು ಯತ್ನಿಸಿದರೆ ಕಠಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ರಾಮರಾಜನ್‌ ಎಚ್ಚರಿಕೆ ನೀಡಿದ್ದಾರೆ.

5 ಕಿ.ಮೀ. ಪೊಲೀಸ್‌ ಸರ್ಪಗಾವಲು
ಮಡಿಕೇರಿ ತಾಲೂಕಿನ ಕಟ್ಟೆಮಾಡು ಶ್ರೀ ಮಹಾ ಮೃತ್ಯುಂಜಯ ದೇವಾಲಯದ 5 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜಾಥಾ ನಡೆಸುವ ಸಾಧ್ಯತೆ ಗಳಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು.

Advertisement

ಜಿಲ್ಲಾಡಳಿತದಿಂದ ಶಾಂತಿಸಭೆ
ಎರಡು ಜನಾಂಗಗಳ ನಡುವೆ ನಡೆದ ಸಂಘರ್ಷವನ್ನು ಶಮನ ಮಾಡಲು ಕೊಡಗು ಜಿಲ್ಲಾಡಳಿತ ಸೋಮವಾರ ಉಭಯ ಕಡೆಗಳ ಶಾಂತಿ ಸಭೆ ನಡೆಸಿತು.

ಸುಮಾರು ಮೂರು ಗಂಟೆಗಳ ಸಭೆಯಲ್ಲಿ ಕೊಡವ ಸಮಾಜಗಳ ಒಕ್ಕೂಟ, ಗೌಡ ಸಮಾಜಗಳ ಒಕ್ಕೂಟ ಹಾಗೂ ಶ್ರೀ ಮಹಾಮೃತ್ಯುಂಜಯ ದೇವಾಲಯ ಆಡಳಿತ ಮಂಡಳಿಯ ಅಭಿಪ್ರಾಯಗಳನ್ನು ಜಿಲ್ಲಾಡಳಿತ ಆಲಿಸಿತು. ಸಭೆಯಯಲ್ಲಿ ಜಿಲ್ಲಾಧಿಕಾರಿ ವೆಂಕಟ್‌ ರಾಜಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ಉಪಸ್ಥಿತರಿದ್ದು, ಯಶಸ್ವಿಯಾಗಿ ಶಾಂತಿ ಸಭೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next