Advertisement
ಕೊಡಚಾದ್ರಿ ಗಿರಿಶೃಂಗವನ್ನು ತಲುಪುವುದು ಅಷ್ಟು ಸುಲಭದ ಮಾತಲ್ಲ. ಇದು ಹೇಳಿಕೇಳಿ ಪಶ್ವಿಮಘಟ್ಟಗಳ ಶ್ರೇಣಿಯಾದ್ದರಿಂದ ಕೊಡಚಾದ್ರಿ ಹಾದಿ ಸವಾಲಿನಿಂದ ಕೂಡಿರುತ್ತದೆ. 12 ಕಿ.ಮೀ ದೂರದ ಮಣ್ಣಿನ ರಸ್ತೆಯನ್ನು, ದಟ್ಟಾರಣ್ಯದ ನಡುವೆ ನಡೆದುಕೊಂಡು ಅಥವಾ ಸಿಂಗಲ್ ರೈಡಿಂಗ್ ಬೈಕ್ ಮೂಲಕ ಸಾಗಬೇಕು. ಕಾರುಗಳ ಮೂಲಕ ಇಲ್ಲಿನ ರಸ್ತೆಯಲ್ಲಿ ಸಾಗುವುದು ಅಸಾಧ್ಯ. ಅಪಾಯಕಾರಿ ಮತ್ತು ಏರು ತಗ್ಗುಗಳಿಂದ ಕೂಡಿದ ಕಚ್ಛಾ ರಸ್ತೆಯೇ ಇದಕ್ಕೆ ಪ್ರಮುಖ ಕಾರಣ. ಸವಾಲಿನ ರಸ್ತೆಯ ಮೂಲಕ ಪ್ರವಾಸಿಗರನ್ನು ಬೆಟ್ಟದ ತುದಿಗೆ ಇಲ್ಲಿನ ಬಾಡಿಗೆ ಜೀಪ್‌ಗ್ಳ ಚಾಲಕರು ತಲುಪಿಸುತ್ತಾರೆ.
Related Articles
Advertisement
ಮಳೆಗಾಲದಲ್ಲಿ ಕೊಡಚಾದ್ರಿಯು ಅಪ್ಸರೆಯಂತೆ ಕಾಣುತ್ತದೆ. ಎಲ್ಲೆಲ್ಲೂ ಮಂಜು ಮುಸುಕಿದ ವಾತಾವರಣ, ತಂಪು, ಹಸಿರಾದ ಪರಿಸರ, ಧುಮ್ಮಿಕ್ಕಿ ಹರಿಯುವ ತೊರೆ ಹಾಗೂ ಝರಿಗಳಿಂದ ತುಂಬಿ ಭೂಲೋಕದ ಸ್ವರ್ಗದಂತೆ ಕಾಣಿಸುತ್ತದೆ. ಈ ಗಿರಿಯು ‘ಮೂಕಾಂಬಿಕಾ ರಾಷ್ಟ್ರೀಯ ಉದ್ಯಾನ’ ವ್ಯಾಪ್ತಿಯಲ್ಲಿದ್ದು, ಅನೇಕ ಜೀವ ವೈವಿಧ್ಯತೆಯ, ಅಳಿನಂಚಿನಲ್ಲಿರುವ ಜೀವ ಹಾಗೂ ಸಸ್ಯ ಸಂಪತ್ತುಗಳ ಆಶ್ರಯ ತಾಣವಾಗಿದೆ. ಈ ಪ್ರದೇಶವು ಹುಲಿ, ಚಿರತೆ, ಆನೆ, ಕತ್ತೆ ಕಿರುಬ, ವಿವಿಧ ಜಾತಿಯ ಹಾವುಗಳು ಹಾಗೂ ವೈವಿಧ್ಯಮಯ ಪಕ್ಷಿಗಳ ತವರೂರಾಗಿದೆ. ಕೊಡಚಾದ್ರಿ ಗಿರಿಯು ಕಬ್ಬಿಣ ಹಾಗೂ ಮ್ಯಾಂಗನೀಸ್ ಅದಿರನ್ನು ತನ್ನ ಒಡಲಲ್ಲಿ ಯಥೇತ್ಛವಾಗಿ ಬಚ್ಚಿಟ್ಟುಕೊಂಡಿದೆ. ಈ ಪ್ರದೇಶದಲ್ಲಿ ಐತಿಹಾಸಿಕ ಮಹತ್ವದ ಕಾರಣದಿಂದಾಗಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಧರ್ಮ ಸಂಸ್ಥಾಪಕರಾದ ಆದಿ ಶಂಕರಾಚಾರ್ಯರು ಇದೇ ಬೆಟ್ಟದಲ್ಲಿ ಧ್ಯಾನಸ್ಥರಾಗಿದ್ದರೆಂದು ಹೇಳಲಾಗಿದ್ದು, ಅದಕ್ಕೆ ಸಾಕ್ಷಿಯೆಂಬಂತೆ ಧ್ಯಾನಕ್ಕೆ ಕುಳಿತ ಸ್ಥಳದಲ್ಲಿ ಶಿಲೆಯಿಂದಲೇ ನಿರ್ಮಿಸಲಾದ ‘ಸರ್ವಜ್ಞ ಪೀಠ’ವನ್ನಿಲ್ಲಿ (ಕಲ್ಲಿನ ಮಂಟಪ) ಕಾಣಬಹುದಾಗಿದೆ. ಇದನ್ನು ಶಾರದಾ ಪೀಠವೆಂದೂ ಕರೆಯುತ್ತಾರೆ. ಇಲ್ಲಿ ನಿತ್ಯ ಅರ್ಚಕರು ಒಂದೂವರೆ ಕಿ.ಮೀ ಗುಡ್ಡದಲ್ಲಿ ನಡೆದುಕೊಂಡೇ ಬಂದು ಈ ಪೀಠಕ್ಕೆ ಅರ್ಚನೆ ಮತ್ತು ಅಭಿಷೇಕ ಮಾಡುತ್ತಾರೆ.
ಪುರಾಣಕ್ಕೂ ಸಂಬಂಧ
ಕೊಡಚಾದ್ರಿಯನ್ನು ಪ್ರಾಕೃತಿಕ ಸೌಂದರ್ಯದ ಚಾರಣದ ಪರ್ವತ ಎನ್ನುವುದಕ್ಕಿಂತಲೂ ಪೌರಾಣಿಕ ಗಿರಿಶಿಖರವೆನ್ನಬಹುದು. ಏಕೆಂದರೆ, ಪಕ್ಕದಲ್ಲಿರುವ ಕೊಲ್ಲೂರು ಕ್ಷೇತ್ರಕ್ಕೆ ಮತ್ತು ಧರ್ಮ ಸಂಸ್ಥಾಪನೆಗಾಗಿ ದೇಶ ಪರ್ಯಟನೆಗೈದ ಶಂಕರಾಚಾರ್ಯರ ಹುಟ್ಟೂರಾದ ಕೇರಳದ ಕಾಲಡಿ ಎಂಬ ಊರಿಗೆ ನೇರ ಸಂಬಂಧವಿರುವುದೇ ಇದಕ್ಕೆ ಕಾರಣ. ಆದಿಶಂಕರರು ಕೊಡಚಾದ್ರಿ ಗಿರಿಯಲ್ಲಿ ತಪಸ್ಸು ಮಾಡಿ, ಒಲಿದ ದುರ್ಗಾಮಾತೆಯನ್ನು ತನ್ನೂರು ಕೇರಳದ ಕಾಲಡಿಗೆ ಕರೆದುಕೊಂಡು ಹೋಗ ಬಯಸುತ್ತಾರೆ. ಇದಕ್ಕೊಪ್ಪಿದ ದುರ್ಗೆಯು ‘ನೀನು ನಂಬಿಕೆಯಿಂದ ಮುಂದೆ ನಡೆದರೆ ನಾನು ನಿನ್ನ ಹಿಂದೆ ಬರುವೆನು, ಆದರೆ ಯಾವುದೇ ಕಾರಣಕ್ಕೂ ಹಿಂತಿರುಗಿ ನನ್ನ ನೋಡಬಾರದು’ ಎಂಬ ಷರತ್ತನ್ನು ವಿಧಿಸುತ್ತಾಳೆ. ಇದಕ್ಕೆ ಒಪ್ಪಿಕೊಂಡ ಆದಿಶಂಕರರು ದುರ್ಗಾಮಾತೆಯ ಕಾಲ್ಗೆಜ್ಜೆಯನ್ನು ಅನುಸರಿಸುತ್ತಾ ಮುನ್ನಡೆಯುತ್ತಾರೆ. ಆದರೆ ಕೊಲ್ಲೂರೆಂಬ ಊರು ತಲುಪುತ್ತಿದ್ದಂತೆ ಕಾಲ್ಗೆಜ್ಜೆ ಸದ್ದು ಕೇಳದಾದಾಗ ಅನುಮಾನಗೊಂಡ ಆದಿಶಂಕಕರು ಹಿಂತಿರುಗಿ ನೋಡುತ್ತಾರೆ. ಇದರಿಂದ ಕ್ರೋಧಗೊಂಡ ದೇವಿಯು, ಕೊಲ್ಲೂರು ಕ್ಷೇತ್ರದಲ್ಲೇ ನೆಲೆ ನಿಂತಳೆಂಬ ಪ್ರತೀತಿ ಇದೆ. ಇದರಿಂದಾಗಿಯೇ ಕರ್ನಾಟಕದಿಂದ ಶೇ.20, ಕೇರಳದಿಂದ ಶೇ.80ರಷ್ಟು ಭಕ್ತರು ಕೊಲ್ಲೂರಿಗೆ ಆಗಮಿಸುತ್ತಾರೆ. ಹೀಗೆ ಆಗಮಿಸಿದ ಭಕ್ತರು ವಿಶೇಷವಾಗಿ ಆದಿಶಂಕರರು ತಪಸ್ಸನ್ನಾಚರಿಸಿದ ಕೊಡಚಾದ್ರಿ ಗಿರಿಗೂ ಭೇಟಿ ನೀಡುತ್ತಾರೆ. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡುವುದು ಆನಂದದ ಸಂಗತಿ.
ಸರ್ವಜ್ಞ ಪೀಠದ ಸಮೀಪದಲ್ಲೇ ನೈಸರ್ಗಿಕವಾಗಿ ರೂಪುಗೊಂಡ ಗುಹಾ ದೇವಾಲಯವಾದ ‘ಗಣೇಶ ಗುಹಾ’ ಎಂಬ ಸ್ಥಳವನ್ನೂ ವೀಕ್ಷಿಸಬಹುದು.
ಶಿಲಾರಚನೆಯ ಸೊಬಗುಕೊಡಚಾದ್ರಿಯಲ್ಲಿ ಪುರಾತನ ಕಾಲದಲ್ಲಿ ನಿರ್ಮಿಸಲಾದ ಸುಮಾರು 12 ಅಡಿಗಿಂತಲೂ ಹೆಚ್ಚಿನ ವ್ಯಾಸವುಳ್ಳ ಶಿಲೆಯ ವಿವಿಧ ರಚನೆಗಳನ್ನು ಅಲ್ಲಲ್ಲಿ ಕಾಣಬಹುದು. ಇಲ್ಲಿ ಮೂಕಾಂಬಿಕಾ ದೇವಿಯ ಮಂದಿರವೊಂದಿದೆ.
ಇದೇ, ದೇವಿಯು ಮೂಕಾಸುರನನ್ನು ಸಂಹರಿಸಿದ ಸ್ಥಳವೆಂದು ಹೇಳಲಾಗುತ್ತದೆ. ಈ ಗುಡಿಯ ಪಕ್ಕದಲ್ಲೇ ಸುಮಾರು 40 ಅಡಿ ಎತ್ತರದ ಕಬ್ಬಿಣದ ಐತಿಹಾಸಿಕ ತ್ರಿಶೂಲವೊಂದಿದೆ. ಇದು ಮೂಕಾಸುರನನ್ನು ಸಂಹರಿಸಲು ಬಳಸಿದ ತ್ರಿಶೂಲವೆಂದು ಹೇಳಲಾಗುತ್ತದೆ. ಸಾವಿರಾರು ವರ್ಷಗಳ ಹಿಂದೆಯೇ ಸ್ಥಾಪಿತವಾದ ಈ ತ್ರಿಶೂಲವು ಮಳೆ, ಚಳಿ,ಗಾಳಿ, ಬಿಸಿಲನ್ನೂ ಲೆಕ್ಕಿಸದೆ ಸ್ವಲ್ಪವೂ ತುಕ್ಕು ಹಿಡಿಯದೇ ವಿಜ್ಞಾನಕ್ಕೆ ಸವಾಲಾಗಿದೆ. ಕಲ್ಪಕಂನ ಐ.ಜಿ.ಸಿ.ಎ.ಆರ್ ಮತ್ತು ಮಂಗಳೂರು ಸೂರತ್ಕಲ್‌ನ ಎನ್.ಐ.ಟಿ.ಕೆ ಕಾಲೇಜು ವಿಜಾnನಿಗಳ ತಂಡವು ಕೂಲಂಕಷವಾಗಿ ಈ ತ್ರಿಶೂಲದ ಅಧ್ಯಯನ ನಡೆಸಿ, ಇದನ್ನು ಶುದ್ಧ ಕಬ್ಬಿಣದಿಂದ ಭಾರತದ ಸಾಂಪ್ರದಾಯಿಕ ಲೋಹ ವಿಜಾnನ ಕೌಶಲ್ಯ ಹಾಗೂ ಆಧುನಿಕ ಎರಕ ಪದ್ದತಿಯ ಮಾದರಿಯಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಬೆಟ್ಟದ ಇನ್ನೊಂದು ವಿಶೇಷತೆ ಎಂದರೆ ಅದರ ಮೇಲ್ಭಾಗದಿಂದ ಸುಮಾರು 5 ಕಿ.ಮೀ. ನಡೆದುಕೊಂಡು ಹೋದರೆ ವರ್ಷವಿಡೀ ದುಮ್ಮಿಕ್ಕುವ ‘ಹಿಡ್ಲುಮನೆ’ ಜಲಪಾತ ನೋಡಬಹುದು. ಅದೇ ರೀತಿ ಕೊಲ್ಲೂರಿನಿಂದ ಮೂಕಾಂಬಿಕಾ ಅಭಯಾರಣ್ಯದ ದ್ವಾರವನ್ನು ಪ್ರವೇಶಿಸುತ್ತಿದ್ದಂತೆ ಬಲಭಾಗಕ್ಕೆ ಹೋದರೆ, ಸೌಪರ್ಣಿಕಾ ನದಿಯಲ್ಲಿ ನಿರ್ಮಿತವಾದ 200-250 ಅಡಿ ಆಳಕ್ಕೆ ಕೊರೆದ ಕಲ್ಲು ಬಂಡೆಗಳ ನಡುವೆ ಧುಮುಕುವ ‘ಅರಶಿನಗುಂಡಿ ಜಲಪಾತ’ವನ್ನೂ ಕಾಣಬಹುದು. ಆಗಸ್ಟ್‌ನಿಂದ ಡಿಸೆಂಬರ್, ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಸೂಕ್ತ ಕಾಲ. ಈ ಹೆಸರು ಹೇಗೆ ಬಂತು?
ಪಶ್ಚಿಮಘಟ್ಟಗಳ ಸಾಲಿನಲ್ಲಿರುವ ‘ಕೊಡಚಾದ್ರಿ’ಯು ಸಮುದ್ರ ಮಟ್ಟದಿಂದ ಸುಮಾರು 1343 ಮೀ ಎತ್ತರದಲ್ಲಿದ್ದು, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಮಾನ್ಯತೆ ಪಡೆದಿದೆ. ಕೊಡಚಾದ್ರಿಯೆಂಬ ಹೆಸರು ‘ಕೊಡಚ’ ಹಾಗೂ ‘ಆದ್ರಿ’ ಎಂಬೆರಡು ಪದಗಳಿಂದ ಬಂದಿದ್ದು ಕೊಡಚ ಎಂದರೆ ‘ಕುಟಜ’ (ಗಿರಿಮಲ್ಲಿಗೆ) ಹಾಗೂ ಸಂಸ್ಕೃತದಲ್ಲಿ ಆದ್ರಿ ಎಂದರೆ ‘ಶಿಖರ’ ಎಂದರ್ಥ. ಇಲ್ಲಿ ಯಥೇತ್ಛವಾಗಿ ಕಂಡುಬರುವ ‘ಗಿರಿ ಮಲ್ಲಿಗೆ’ ಹೂವುಗಳ ಕಾರಣದಿಂದಾಗಿ ಈ ಗಿರಿಗೆ ಕೊಡಚಾದ್ರಿ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಹೀಗೆ ಸಾಗಿ
ತೀರ್ಥಹಳ್ಳಿ ಹೊಸನಗರ ಮೂಲಕ ಕೊಲ್ಲೂರಿಗೆ ಸಾಗುವ ದಾರಿ ಮಧ್ಯೆ ನಿಟ್ಟೂರು ಎಂಬಲ್ಲಿ ಬಲತಿರುವು ತೆಗೆದು ಕೊಂಡರೆ ಕಚ್ಚಾ ಮಣ್ಣಿನ ರಸ್ತೆ ಸಿಗುತ್ತದೆ. ನಿಟ್ಟೂರಿನಿಂದ ಕೊಡಚಾದ್ರಿಗೆ 12 ಕಿ.ಮೀ ಕಡಿದಾದ ಮಣ್ಣಿನ ಕೊರಕಲು ರಸ್ತೆಯ ಮೂಲಕವೇ ಸಾಗಬೇಕಾಗಿದೆ. ನಿಟ್ಟೂರಿನಿಂದ ಸುಮಾರು ಒಂದೂವರೆ ಕಿ.ಮೀ ಸಾಗುತ್ತಿದ್ದಂತೆ ಅರಣ್ಯ ಇಲಾಖೆಯ ಗೇಟ್ ಸಿಗುತ್ತದೆ. ಇಲ್ಲಿ ಪ್ರತೀ ವಾಹನಕ್ಕೆ ರೂ.100 ಪ್ರವೇಶ ಶುಲ್ಕ ಪಾವತಿಸಿ ರಶೀದಿ ಪಡೆದುಕೊಂಡು ಪ್ರಯಾಣಿಸಬೇಕು.
ಬೆಳಗ್ಗೆ 6ರಿಂದ ಸಂಜೆ 6.30ರ ತನಕ ಗೇಟ್ ತೆರೆದಿರುತ್ತದೆ. ಸಂತೋಷ್ ರಾವ್ ಪೆರ್ಮುಡ