Advertisement

ಗದುಗಿನ ಬಸ್‌ ನಿಲ್ದಾಣದಲ್ಲೂ ಜ್ಞಾನಾರ್ಜನೆ

02:21 PM Nov 23, 2019 | Suhan S |

ಗದಗ: ಬಸ್‌ ವಿಳಂಬವಾಗಿ ಗಂಟೆಗಳ ಕಾಲ ಬಸ್‌ ಗಾಗಿ ಕಾಯುವುದು ಎಂದರೆ ಎಂತಹವರನ್ನೂ ಪೇಚಿಗೆ ಸಿಲುಕಿಸುತ್ತದೆ. ಕೆಲವೊಮ್ಮೆ ನಿರೀಕ್ಷಿತ ಸಮಯಕ್ಕೆ ಬಾರದೇ ಬೇಸರವನ್ನೂ ತರಿಸುತ್ತದೆ. ಅಂಥವರಿಗಾಗಿ ಇಲ್ಲಿನ ಹೊಸ ಬಸ್‌ ನಿಲ್ದಾಣದಲ್ಲಿರುವ ಶಾಖಾ ಗ್ರಂಥಾಲಯ ಆಕರ್ಷಣೀಯ ಕೇಂದ್ರವಾಗಿದೆ.

Advertisement

ನೂರಾರು ಪುಸ್ತಕ ಹಾಗೂ ಹತ್ತಾರು ಪತ್ರಿಕೆ ಹೊಂದಿರುವ ಶಾಖಾ ಗ್ರಂಥಾಲಯ ಜ್ಞಾನಾರ್ಜನೆಯ ಕೇಂದ್ರವಾಗಿದ್ದು, ಸಾರ್ವಜನಿಕರನ್ನು ಕೈ ಬೀಸಿ ಕರೆಯುತ್ತಿದೆ. ಜಿಲ್ಲಾ ಕೇಂದ್ರವಾದ ಗದಗ ನಗರಕ್ಕೆ ಪ್ರತಿನಿತ್ಯ ನಾನಾ ಕೆಲಸ ಕಾರ್ಯಗಳ ನಿಮಿತ್ತ ಜಿಲ್ಲೆಯ ವಿವಿಧೆ ಡೆಯಿಂದ ಅಸಂಖ್ಯಾತ ಜನರು ಆಗಮಿಸುತ್ತಾರೆ. ಅದರಲ್ಲೂ ತಾಲೂಕಿನ ಲಕ್ಕುಂಡಿ, ಬಿಂಕದಕಟ್ಟಿ, ಹುಲಕೋಟಿ, ಕುರ್ತಕೋ ಟಿ, ಅಸುಂಡಿ, ರೋಣ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ವಿವಿಧೆಡೆಯಿಂದ ಪ್ರತಿನಿತ್ಯ ಸಾರಾರು ಸಂಖ್ಯೆಯಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಆಗಮಿಸುತ್ತಾರೆ.

ಆಸ್ಪತ್ರೆ, ಸರಕಾರದ ವಿವಿಧ ಕಚೇರಿಗಳಿಗೆ ಹಾಗೂ ವಾಣಿಜ್ಯ ಉದ್ದೇಶದಿಂದಲೂ ಗದುಗಿಗೆ ಆಗಮಿಸುವವರ ಸಂಖ್ಯೆ ಹೆಚ್ಚು. ಜೊತೆಗೆ ಹುಬ್ಬಳ್ಳಿ, ಕೊಪ್ಪಳ ಮಾರ್ಗವಾಗಿ ಸಂಚರಿಸುವವರ ಸಂಖ್ಯೆಗೂ ಕಡಿಮೆ ಇಲ್ಲ. ಆದರೆ, ಕೆಲವೊಮ್ಮೆ ನಿರೀಕ್ಷಿತ ಸಮಯಕ್ಕೆ ಬಸ್‌ ಸಿಗದೇ ಕೆಲವೊಮ್ಮೆ ಗಂಟೆಗಳ ಕಾಲ ಬಸ್‌ ಲಭ್ಯವಾಗದೇ ಬಸ್‌ ನಿಲ್ದಾಣದಲ್ಲಿ ಕಾಯುವ ಪರಿಸ್ಥಿತಿ ಎದುರಾಗುತ್ತದೆ. ಅಂಥ ಸಂದರ್ಭದಲ್ಲಿ ಸಮಯ ಸದ್ಬಳಕೆಗೆ ಇದು ವೇದಿಕೆಯಾಗಿದೆ.

 920 ಪುಸ್ತಕ-10 ಪತ್ರಿಕೆ:  ಹೊಸ ಬಸ್‌ ನಿಲ್ದಾಣದ ಲೈಬ್ರರಿಯಲ್ಲಿ ಪುಸ್ತಕಗಳಿಗಿಂತ ಹೆಚ್ಚಾಗಿ ದಿನ ಪತ್ರಿಕೆಗಳು ಹಾಗೂ ಮ್ಯಾಗಜಿನ್‌ಗಳಿಗೆ ಓದುಗರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತದೆ. ಹೀಗಾಗಿ 10 ಕನ್ನಡ, 4 ಆಂಗ್ಲ ದಿನ ಪತ್ರಿಕೆಗಳು ಬರುತ್ತಿವೆ. 3  ಆಂಗ್ಲ ಸೇರಿದಂತೆ 14 ಮಾಸಿಕ ಮ್ಯಾಗಜಿನ್‌ಗಳು ಬರುತ್ತಿವೆ. ಜೊತೆಗೆ ಸ್ಪರ್ಧಾ ಸ್ಪೂರ್ತಿ ಸೇರಿದಂತೆ ಎರಡು ಸ್ಪರ್ಧಾತ್ಮಕ ಪರೀಕ್ಷಾ ಮ್ಯಾಗಜಿನ್‌ಗಳು ಬರುತ್ತಿದ್ದು, ಓದುಗರನ್ನು ಆಕರ್ಷಿಸುತ್ತಿದೆ. ಜೊತೆಗೆ ಕವನ, ಹನಿಗವನ, ಪ್ರವಾಸ ಕಥನ, ಕಥೆ, ಕಾದಂಬರಿ, ನಾಟಕ ಸೇರಿದಂತೆ ಒಟ್ಟು 920 ಪುಸ್ತಕಗಳನ್ನು ಮೂರು ರ್ಯಾಕ್‌ಗಳಲ್ಲಿ ಜೋಡಿಸಲಾಗಿದೆ. ಸುಮಾರು 15 ಜನರಿಗೆ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗಿನ ಸಮಯದಲ್ಲಿ ಬೆರಳೆಣಿಕೆಯಷ್ಟಿರುವ ಓದುಗರ ಸಂಖ್ಯೆ, ಶಾಲಾ- ಕಾಲೇಜು ಸಮಯದ ಬಳಿಕ ಸಂಜೆ 4ರ ವರೆಗೂ ಗ್ರಂಥಾಲಯ ಓದುಗರಿಂದ ತುಂಬಿ ತುಳುಕುತ್ತಿರುತ್ತದೆ. ಈ ಪೈಕಿ ಬಹುತೇಕರು ದಿನಪತ್ರಿಕೆಗಳ ಓದಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ಹೇಳಲಾಗಿದೆ.

 ನಿರುಪಯುಕ್ತ ಕೊಠಡಿ ಸದ್ಬಳಕೆ: ಜಿಲ್ಲಾಡಳಿತ ಭವನದಲ್ಲಿ ಗ್ರಂಥಾಲಯ ಆರಂಭಿಸಿ ಸೈ ಎನಿಸಿಕೊಂಡಿದ್ದ ಗ್ರಂಥಾಲಯ ಇಲಾಖೆ, ಅದರ ಬೆನ್ನಲ್ಲೇ ಹೊಸ ಬಸ್‌ ನಿಲ್ದಾಣದಲ್ಲಿ ಶಾಖೆಯೊಂದನ್ನು ಆರಂಭಿಸಲು ಉದ್ದೇಶಿಸಿತ್ತು. ಅದಕ್ಕಾಗಿ ಕೊಠಡಿಯೊಂದರ ಅಗತ್ಯವಿತ್ತು. ಹೊಸ ಬಸ್‌ ನಿಲ್ದಾಣದ ಪ್ರವೇಶ ದ್ವಾರದ ಎಡ ಭಾಗದಲ್ಲಿ ಪೊಲೀಸ್‌ ಚೌಕಿ, ಮಹಿಳಾ ನಿರೀಕ್ಷಣಾಲಯಗಳಿದ್ದು, ಅದರ ಪಕ್ಕದ 10×12 ಅಳತೆಯ ಪುಟ್ಟ ಕೊಠಡಿಯೊಂದು ನಿರುಪಯುಕ್ತವಾಗಿತ್ತು. ಅದನ್ನೇ ಆಯ್ಕೆ ಮಾಡಿಕೊಂಡ ಅಧಿಕಾರಿಗಳು, ಮಾದರಿ ಲೈಬ್ರರಿ ಎಂಬಂತೆ ಅಭಿವೃದ್ಧಿ ಪಡಿಸಿದ್ದಾರೆ.

Advertisement

ಪ್ರತಿದಿನ ಬೆಳಗ್ಗೆ 10ರಿಂದ 1.30ರ ವರೆಗೆ ಹಾಗೂ ಮಧ್ಯಾಹ್ನ 2.15ರಿಂದ 5.30ರ ವರೆಗೆ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದೆ. ಆದರೆ, ಊಟದ ಸಮಯದಲ್ಲೂ ಗ್ರಂಥಾಲಯವನ್ನು ತೆರೆದಿರುತ್ತವೆ. ದಿನಕ್ಕೆ 200- 300 ಜನರು ಭೇಟಿ ನೀಡುತ್ತಿದ್ದು, ಅದರಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. -ಮಂಜುಳಾ ಕೊಣ್ಣೂರು ಗ್ರಂಥಾಲಯ ಸಿಬ್ಬಂದಿ

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next