ಒಂದು ಕಾಡಿನಲ್ಲಿ ಗುಬ್ಬಿ ದಂಪತಿ ವಾಸವಾಗಿತ್ತು. ಅವು ದೊಡ್ಡದಾದ ಅತ್ತಿ ಮರವೊಂದರಲ್ಲಿ ಸುಂದರವಾದ ಗೂಡನ್ನು ಕಟ್ಟಿಕೊಂಡು ಸಂತೋಷವಾಗಿದ್ದವು. ಸ್ವಲ್ಪ ಸಮಯದ ನಂತರ ಹೆಣ್ಣು ಗುಬ್ಬಿ ಮೊಟ್ಟೆಯನ್ನು ಇಟ್ಟಿತು. ಮೊಟ್ಟೆಯೊಡೆದು ಮರಿ ಹೊರಬರುವ ಘಳಿಗೆಯನ್ನು ಅವೆರಡೂ ಕಾತರದಿಂದ ಎದುರು ನೋಡುತ್ತಿದ್ದವು. ಹೀಗಿರುವಾಗ ಬಲಶಾಲಿ ಆನೆಯೊಂದು ಕಾಡಿನಲ್ಲಿ ಸುತ್ತಾಡುತ್ತಾ ಅತ್ತಿಯ ಮರದ ಬಳಿಗೆ ಬಂದಿತು. ಸೊಂಡಿಲು ತುರಿಸಿತೆಂದು ಮರದ ಕೊಂಬೆಯನ್ನು ಹಿಡಿದು ಜಗ್ಗತೊಡಗಿತು. ಮರದಲ್ಲಿದ್ದ ಗುಬ್ಬಿ ಗೂಡು ಅಲುಗಾಡತೊಡಗಿತು. ಇದರಿಂದ ಮೊಟ್ಟೆಗೆ ಅಪಾಯ ಒದಗೀತೆಂಬ ಭಯದಿಂದ ತಾಯಿ ಗುಬ್ಬಿ ಆನೆಯ ಬಳಿ ತೆರಳಿ “ಗೂಡಿನಲ್ಲಿ ಮೊಟ್ಟೆಯಿದೆ. ನೀನು ಹೀಗೆ ಕೊಂಬೆಯನ್ನು ಜಗ್ಗುತ್ತಿದ್ದರೆ ಮೊಟ್ಟೆ ಕೆಳಕ್ಕೆ ಬಿದ್ದು ಹೋಗುತ್ತದೆ. ದಯವಿಟ್ಟು ಜಗ್ಗುವುದನ್ನು ನಿಲ್ಲಿಸು’ ಎಂದು ಮನವಿ ಮಾಡಿತು.
ಗುಬ್ಬಿಯ ದುರಾದೃಷ್ಟಕ್ಕೆ ಆ ಆನೆ ತುಂಬಾ ದುರಹಂಕಾರಿಯಾಗಿತ್ತು. ಅದು ಗುಬ್ಬಿ ಮಾತು ಕೇಳಿಯೂ ಕೇಳದಂತೆ ಮಾಡಿ ಕೊಂಬೆಯನ್ನು ಜಗ್ಗಾಡತೊಡಗಿತು. ಸ್ವಲ್ಪ ಹೊತ್ತಿನ ನಂತರ ಆನೆ ಹೊರಟುಹೋಯಿತು. ಗುಬ್ಬಿಗಳು ನಿಟ್ಟುಸಿರು ಬಿಟ್ಟವು. ಆದರೆ ಗುಬ್ಬಿಗಳನ್ನು ಗೋಳು ಹುಯ್ದುಕೊಳ್ಳುವುದರಲ್ಲಿ ಆನೆಗೆ ಕೆಟ್ಟ ಆನಂದ ಸಿಗುತ್ತಿತ್ತು. ಹೀಗಾಗಿ ಪ್ರತಿದಿನ ಆ ಅತ್ತಿ ಮರದ ಬಳಿ ಬಂದು ಕೊಂಬೆಯನ್ನು ಜಗ್ಗಾಡಿ ಗುಬ್ಬಿಗಳಿಗೆ ತೊಂದರೆ ಕೊಟ್ಟು ಹೋಗುತ್ತಿತ್ತು. ಇತರೆ ಪ್ರಾಣಿಗಳ ಮೂಲಕ ಮಾಡಿದ ಮನವಿಗಳೂ ವ್ಯರ್ಥವಾದವು. ಕಡೆಗೆ ಗುಬ್ಬಿ ದಂಪತಿಗಳು ಈ ಸಮಸ್ಯೆಗೆ ತಾವೇ ಏನಾದರೂ ಪರಿಹಾರ ಕಂಡುಕೊಳ್ಳಬೇಕು ಎಂದು ನಿರ್ಧರಿಸಿದವು.
ಎಂದಿನಂತೆ ಒಂದು ಬೆಳಗ್ಗೆ ಆನೆ ಮರದ ಬಳಿ ಕೊಂಬೆ ಹಿಡಿದು ಜಗ್ಗತೊಡಗಿತು. ತಾಯಿ ಗುಬ್ಬಿ ಆನೆಯ ಬಳಿ ಬಂದು “ಮೊಟ್ಟೆ ಗೂಡಿನಿಂದ ಹೊರಕ್ಕೆ ಬೀಳುವುದರಲ್ಲಿದೆ. ದಯವಿಟ್ಟು ಜಗ್ಗಾಡುವುದನ್ನು ನಿಲ್ಲಿಸು.’ ಎಂದು ಕೇಳಿಕೊಂಡಿತು. ಆದರೆ ಆನೆ ಹೆಚ್ಚಿನ ಉತ್ಸಾಹದಿಂದ ಕೊಂಬೆಯನ್ನು ಜಗ್ಗತೊಡಗಿತು. ಗುಬ್ಬಿ ದಂಪತಿಗಳಿಗೂ ಅದೇ ಬೇಕಿತ್ತು. ಹಿಂದಿನ ದಿನ ಗುಬ್ಬಿ ದಂಪತಿಗಳು ತಮ್ಮ ಗೂಡನ್ನು ತಾತ್ಕಾಲಿಕವಾಗಿ ಪಕ್ಕದ ಮರಕ್ಕೆ ಬದಲಾಯಿಸಿಕೊಂಡಿದ್ದವು. ಹಳೆಯ ಗೂಡಿನಲ್ಲಿ ಖಾರದ ಪುಡಿ ಡಬ್ಬಗಳನ್ನು ಇರಿಸಿದ್ದವು. ಈ ವಿಷಯ ತಿಳಿಯದ ಆನೆ ಮೊಟ್ಟೆಯನ್ನು ಕೇಳಕ್ಕೆ ಬೀಳಿಸಿಯೇ ತೀರುವ ಹಟದಲ್ಲಿ ಕೊಂಬೆಯನ್ನು ಅಲುಗಾಡಿಸತೊಡಗಿತು. ಪರಿಣಾಮವಾಗಿ ಖಾರದ ಪುಡಿ ಡಬ್ಬಗಳು ಅದರ ತಲೆ ಮೇಲೆ ಬಿದ್ದವು. ಖಾರದ ಪುಡಿ ಕಣ್ಣಿಗೆ ಬಿದ್ದು ಉರಿ ಉರಿ ಎಂದು àಳಿಡುತ್ತಾ ಆನೆ ಕೊಳದತ್ತ ಓಡಿ ಹೋಯಿತು. ಇನ್ಯಾವತ್ತೂ ಆನೆ ಅತ್ತಿ ಮರದ ಹತ್ತಿರ ಸುಳಿಯಲಿಲ್ಲ. ಗುಬ್ಬಿಗಳು ಸಂತೋಷದಿಂದ ತಮ್ಮ ಹಳೆಯ ಗೂಡಿನಲ್ಲಿ ಸುಖವಾಗಿ ಜೀವಿಸಿದವು.
ವೇದಾವತಿ ಹೆಚ್. ಎಸ್