Advertisement

ಕೆಎಂಎಫ್ ಹಾಲು ಹಾಗೂ ಮೊಸರು ದರ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳ

09:55 AM Jan 31, 2020 | Sriram |

ಬೆಂಗಳೂರು:ಕೆಎಂಎಫ್ ಹಾಲು ಹಾಗೂ ಮೊಸರು ದರ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳಕ್ಕೆ ತೀರ್ಮಾನಿಸಲಾಗಿದ್ದು ಫೆ.1 ರಿಂದಲೇ ಹೊಸ ದರ ಅನ್ವಯವಾಗಲಿದೆ.

Advertisement

ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳ ಮಾಡಲು ರಾಜ್ಯ ಸರ್ಕಾರಕ್ಕೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, 2 ರೂ. ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ಗ್ರಾಹಕರಿಗೆ ಪ್ರಸ್ತುತ ಪ್ರತಿ ಲೀಟರ್‌ 35 ರೂ. ಇದ್ದು ಇದೀಗ ಬೆಲೆ ಹೆಚ್ಚಳದ ನಂತರ 37 ರೂ. ಆಗಲಿದೆ.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದೆಹಲಿಗೆ ತೆರಳುವ ಮುನ್ನ ಭೇಟಿ ಮಾಡಿ ದರ ಹೆಚ್ಚಳಕ್ಕೆ ಅನುಮತಿ ಪಡೆದುಕೊಂಡರು.

ಇತ್ತೀಚೆಗೆ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ದರ ಹೆಚ್ಚಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಇದೀಗ ಸರ್ಕಾರದ ಒಪ್ಪಿಗೆ ಸಿಕ್ಕಿದ್ದು ಫೆ.1 ರಿಂದ ದರ ಜಾರಿಗೆ ಬರಲಿದೆ.

ಪ್ರತಿ ಲೀಟರ್‌ಗೆ ಹೆಚ್ಚಿಸಲಾಗಿರುವ 2 ರೂ. ಪೈಕಿ ಒಂದು ರೂ. ರೈತರಿಗೆ, 40 ಪೈಸೆ ರೈತರು ಸಾಕುವ ಹಸುಗಳ ವಿಮೆಗೆ, 20 ಪೈಸೆ ಹಾಲು ಉತ್ಪಾದಕರ ಸಂಘಗಳ ನೌಕರರಿಗೆ ಇನ್ಸೆಂಟೀವ್‌, ಉಳಿದ 40 ಪೈಸೆ ಹಾಲು ಮಾರಾಟ ಮಾಡುವ ಏಜೆಂಟರಿಗೆ ಹಂಚಿಕೆಯಾಗಲಿದೆ.

Advertisement

ಗ್ರಾಹಕರಿಂದ ಪಡೆಯುವ ಹೆಚ್ಚುವರಿ ದರ ಕೆಎಂಎಫ್ ಇಟ್ಟುಕೊಳ್ಳುವುದಿಲ್ಲ ಬದಲಿಗೆ ಹಾಲು ಉತ್ಪಾದಕರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಲುಪಲಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್‌ “ಉದಯವಾಣಿ’ಗೆ ತಿಳಿಸಿದರು.

ಪ್ರಸ್ತುತ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 24 ರಿಂದ 28 ರೂ.ವರೆಗೆ (ಎಸ್‌ಎನ್‌ಎಫ್ ಆಧಾರದಲ್ಲಿ) ನೀಡಲಾಗುತ್ತಿದೆ. ಇದರ ಜತೆಗೆ ಸರ್ಕಾರದ ವತಿಯಿಂದ ಪ್ರತಿ ಲೀಟರ್‌ಗೆ 5 ರೂ. ಪ್ರೋತ್ಸಾಹ ಧನ ನೀಡುತ್ತದೆ. ಈಗ ದರ ಹೆಚ್ಚಳದಿಂದ ಮತ್ತೂಂದು ರೂಪಾಯಿ ರೈತರಿಗೆ ದೊರೆಯಲಿದೆ. ಆಯಾ ಜಿಲ್ಲಾ ಯೂನಿಯನ್‌ಗಳು ರೈತರಿಗೆ ನೀಡುವ ಹಾಲಿನ ದರ ನಿಗದಿಮಾಡುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next