ಮಣಿಪಾಲ: ಅಪಘಾತ ದಿಂದ ಗಂಭೀರ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡಿದ್ದ ಮಹಿಳೆಯು 6 ರೋಗಿಗಳಿಗೆ ಬೆಳಕಾಗಿದ್ದಾರೆ.
ಬೈಂದೂರು ತಾಲೂಕಿನ ಉಪ್ಪುಂದದ ಶಿಲ್ಪಾ ಮಾಧವ ಕೊಡೇರಿ ಅವರು ಫೆ.25ರಂದು ಮರವಂತೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ತಜ್ಞ ವೈದ್ಯರ ತಂಡ ಶಿಲ್ಪಾ ಅವರನ್ನು ರಕ್ಷಿಸಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಿದ್ದರೂ, ಚೇತರಿಸಿಕೊಳ್ಳುವ ಲಕ್ಷಣಗಳು ಕಂಡುಬರಲಿಲ್ಲ.
ಮಾನವ ಅಂಗಾಂಗ ಕಸಿ ಕಾಯ್ದೆ ಅನುಸಾರ ಶಿಲ್ಪಾ ಅವರನ್ನು ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದರು. ಅವರ ಪತಿ ಪ್ರಸನ್ನ ಕುಮಾರ್ ಮತ್ತು ಕುಟುಂಬದ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಅಂಗಾಂಗಳನ್ನು ದಾನ ಮಾಡಲು ಇಚ್ಛೆ ವ್ಯಕ್ತಪಡಿಸಿದರು. ಅವರು ದಾನ ಮಾಡಿದ ಎರಡು ಮೂತ್ರಪಿಂಡಗಳು, ಯಕೃತ್, ಚರ್ಮ ಮತ್ತು ಎರಡು ಕಾರ್ನಿಯಾಗಳು 6 ಜನರ ಜೀವ ಉಳಿಸಲು ಸಹಾಯವಾಗಿದೆ.
ನಿರ್ದಿಷ್ಟ ಮಾರ್ಗಸೂಚಿ ಅನುಸರಿಸಿ ಯಕೃತ್‌ನ್ನು ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆ, ಒಂದು ಮೂತ್ರಪಿಂಡವನ್ನು ಮಂಗಳೂರು ಎಜೆ ಆಸ್ಪತ್ರೆ, ಎರಡು ಕಾರ್ನಿಯ, ಒಂದು ಮೂತ್ರಪಿಂಡ ಮತ್ತು ಚರ್ಮವನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿನ ನೋಂದಾಯಿತ ರೋಗಿಗಳಿಗೆ ಬಳಸಲಾಯಿತು. ದಾನ ಮಾಡಿದ ಅಂಗಾಂಗಗಳನ್ನು ಉಡುಪಿ ಮತ್ತು ದ.ಕ. ಪೊಲೀಸ್ ಇಲಾಖೆ ಸಹಕಾರದಲ್ಲಿ ಮಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ವರ್ಗಾಯಿಸಲಾಯಿತು ಎಂದು ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದರು.