ಮಂಗಳೂರು: ಡಾ| ಬಿ.ಆರ್. ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆ ಮತ್ತು ಅತ್ತಾವರದ ಕೆಎಂಸಿ ಆಸ್ಪತ್ರೆ ಜಂಟಿಯಾಗಿ ರಚಿಸಿದ ಎಮರ್ಜೆನ್ಸಿ ಮೆಡಿಸಿನ್ ಕ್ಲಬ್ ಮಂಗಳೂರು’ (ಇಎಂಸಿಎಂ) ಬುಧವಾರ ಉದ್ಘಾಟನೆಗೊಂಡಿತು.
ತುರ್ತು ವೈದ್ಯಕೀಯ ತಜ್ಞರು, ವೈದ್ಯರು ಮತ್ತು ಸಂಶೋಧಕರು ಜ್ಞಾನ ವಿನಿಮಯ ಮಾಡಿಕೊಳ್ಳಲು, ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಮತ್ತು ಕ್ಷೇತ್ರದಲ್ಲಿನ ನವೀನ ವಿಧಾನಗಳನ್ನು ಚರ್ಚಿಸಲು ವೇದಿಕೆ ರೂಪಿಸುವುದು ಕ್ಲಬ್‌ನ ಮುಖ್ಯ ಉದ್ದೇಶವಾಗಿದೆ.
ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್.ಆರ್. ತಿಮ್ಮಯ್ಯ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಹೇಗೆ ಉತ್ತಮವಾಗಿ ನಿಭಾಯಿಸಬಹುದು ಎನ್ನುವ ಕುರಿತಂತೆ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು. ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮತ್ತು ಆಸ್ಪತ್ರೆಗಳಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ನಡೆಸುವಂತೆ ಅವರು ಸೂಚಿಸಿದರು.
ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ| ಜಿ.ಕೆ. ಭಟ್ ಸಂಕಬಿತ್ತಿಲು ಮುಖ್ಯ ಅತಿಥಿಯಾಗಿದ್ದರು.
ತುರ್ತು ವೈದ್ಯಕೀಯ ವಿಭಾಗದ ಡಾ| ಜೀಧು ರಾಧಾಕೃಷ್ಣನ್ ಮಾತನಾಡಿ, ಪ್ರಮಾಣೀಕೃತ ಏಕರೂಪದ ತುರ್ತು ಆರೈಕೆ ವ್ಯವಸ್ಥೆ ಅಭಿವೃದ್ಧಿಪಡಿಸಲು, ಇತರ ವಿಶೇಷಗಳ ಬಗ್ಗೆ ಜಾಗೃತಿ ಹೆಚ್ಚಿಸಲು ಮತ್ತು ತುರ್ತು ನಿಗಾ ತಜ್ಞರ ನಡುವೆ ಸಹಯೋಗ ಹೆಚ್ಚಿಸಲು ಕ್ಲಬ್ ರಚಿಸಲಾಗಿದೆ. ಎಮರ್ಜೆನ್ಸಿ ಮೆಡಿಸಿನ್ ಕ್ಲಬ್ ಮಂಗಳೂರು ವೃತ್ತಿಪರ ಬೆಳವಣಿಗೆಯನ್ನು ಪೋಷಿಸುವುದು ಮಾತ್ರವಲ್ಲದೆ ಅಂತರ್ ವಿಭಾಗೀಯ ಸಹಯೋಗ ಮತ್ತು ಜ್ಞಾನ ನಿಮಯವನ್ನು ಪ್ರೋತ್ಸಾಹಿಸುತ್ತದೆ ಎಂದರು.
ಮಂಗಳೂರಿನ ಕೆಎಂಸಿ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಘೀರ್ ಸಿದ್ದಿಕಿ ಮಾತನಾಡಿ, ಕೆಎಂಸಿ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ಕ್ಲಬ್ಬನ್ನು ಆರೋಗ್ಯ ರಕ್ಷಣೆಯ ಎಲ್ಲ ಅಗತ್ಯಗಳನ್ನು ಒಂದೇ ಸೂರಿನಡಿ ಪೂರೈಸುವ ತಾಣವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ವಿವರಿಸಿದರು.