Advertisement

ಕೆಎಲ್‌ಇ ಕೋವಿಡ್ ಪರೀಕ್ಷಾ ಲ್ಯಾಬ್‌ಗ ಚಾಲನೆ

01:46 PM May 14, 2020 | mahesh |

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ| ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನೂತನ ಕೆಎಲ್‌ಇ ಕೋವಿಡ್ ಪರೀಕ್ಷಾ ಲ್ಯಾಬ್‌ಗ ಚಾಲನೆ ವೈರಸ್‌ ಕೋವಿಡ್‌ -19 ಪರೀಕ್ಷಾ ಪ್ರಯೋಗಾಲಯವನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಬುಧವಾರ ಜನರ ಸೇವೆಗೆ ಸಮರ್ಪಿಸಿದರು. ಈ ಪ್ರಯೋಗಾಲಯವು ವಿಶ್ವ ಆರೋಗ್ಯ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ, ಅಮೇರಿಕದ ಆಹಾರ ಮತ್ತು ಔಷಧ ಸಂಸ್ಥೆ ಮಾನ್ಯತೆ ಪಡೆದಿದ್ದು, ಅತ್ಯಾಧುನಿಕ ವೈದ್ಯಕೀಯ ಪ್ರಯೋಗಾಲಯ ಸಾಮಗ್ರಿಗಳನ್ನು ಹೊಂದಿದೆ.

Advertisement

ಇದರಲ್ಲಿ, ಟಿಬಿ, ಹೆಚ್‌1ಎನ್‌1, ಹೆಪಟೈಟಿಸ್‌ (ಬಿಳಿಕಾಮಾಲೆ) ವೈರಸ್‌ ಪರೀಕ್ಷಿಸಬಹುದಾಗಿದೆ.  ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಸುರೇಶ ಅಂಗಡಿ ಅವರು, ದೇಶವಷ್ಟೇ ಅಲ್ಲ, ಇಡೀ ವಿಶ್ವವೇ ಇಂದು ಕೊರೊನಾ ವೈರಸ್‌ ಕೋವಿಡ್‌ -19ಗೆ ತಲೆಬಾಗಿ ನಿಂತಿದೆ. ಅದನ್ನು ಹಿಮ್ಮೆಟ್ಟಿಸಲು ಕೇಂದ್ರ ಸರಕಾರವು ಸಕಲ ಕಾರ್ಯ ಹಾಗೂ ಮುಂಜಾಗ್ರತಾ
ಕ್ರಮಗಳನ್ನು ಕೈಕೊಂಡಿದೆ. ಆರೋಗ್ಯವನ್ನು ಕಾಪಾಡಲು ಅಗತ್ಯ ಸೇವಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದರು.

ಲಾಕ್‌ಡೌನ್‌ ಪರಿಸ್ಥಿತಿಯಲ್ಲಿ ಯಾರಿಗೂ ತೊಂದರೆಯಾಗದಂತೆ ಸಾಮಾಜಿಕ, ಆರ್ಥಿಕ ಹಾಗೂ ವೈದ್ಯಕೀಯ ಸೌಲತ್ತುಗಳನ್ನು ಸರಕಾರವೇ ಭರಿಸುತ್ತಿದೆ. ವೈದ್ಯಕೀಯ ಸಿಬ್ಬಂದಿಗಳು ಸಾರ್ವಜನಿಕರ ಆರೋಗ್ಯ ಕಾಪಾಡಲು ಶ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೊರೊನಾ ಸೈನಿಕರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಅಕಾಡೆಮಿ ಆಫ್‌ ಹೈಯರ್‌ ಎಜ್ಯೂಕೇಶನ್‌ ಆ್ಯಂಡ್‌ ರಿಸರ್ಚನ ಕುಲಾಧಿಪತಿ ಡಾ| ಪ್ರಭಾಕರ ಕೋರೆ ಮಾತನಾಡಿ, ಕೊರೊನಾ ವೈರಸ್‌ ಕಂಡು ಬಂದ ತಕ್ಷಣ ಕೆಎಲ್‌ಇ ಸಂಸ್ಥೆಯು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿತು. ಕೊವಿಡ್‌ ಅಲ್ಲದ ರೋಗಿಗಳ ಚಿಕಿತ್ಸೆಗೆ ತೊಂದರೆಯಾಗದಂತೆ ಎಚ್ಚರಿಕೆ ಕ್ರಮ ಕೈಕೊಂಡು ನಿರಂತರವಾಗಿ ರೋಗಿಗಳ ಆರೈಕೆಯಲ್ಲಿ ತೊಡಗಿಕೊಂಡಿದೆ ಎಂದು ಹೇಳಿದರು.

ಆಸ್ಪತ್ರೆಯಲ್ಲಿ ಫ್ಲ್ಯೂ ಕ್ಲೀನಿಕ್‌, ಉಚಿತ ಆಂಬ್ಯುಲೆನ್ಸ್‌, ಪರಿಹಾರ ನಿಧಿಗೆ 2 ಕೋಟಿ ದೇಣಿಗೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳನ್ನು ಸಂಸ್ಥೆಯು ಮಾಡುತ್ತಿದೆ. ಜಿಲ್ಲಾಡಳಿತ ಹಾಗೂ ಸರಕಾರದ ಕಾರ್ಯಕ್ಕೆ ಕೆಎಲ್‌ಇ ಸಂಸ್ಥೆ ಸದಾ ಬೆನ್ನೆಲುಬಾಗಿ ನಿಲ್ಲಲಿದೆ. ಕೊರೊನಾ ವೈರಸ್‌ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತ ಸದಾ ಮಾಸ್ಕ್ ಧರಿಸಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ| ವಿ.ಎಸ್‌ ಸಾಧುನವರ, ಕಾಹೆರನ ಕುಲಪತಿ ಡಾ| ವಿವೇಕ ಸಾವೋಜಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಎಂ ವಿ ಜಾಲಿ, ಜೆಎನ್‌ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್‌.ಎಸ್‌ ಮಹಾಂತಶೆಟ್ಟಿ, ಕಾಹೆರನ ಕುಲಸಚಿವ ಡಾ|  ವಿ.ಎ ಕೋಠಿವಾಲೆ, ಡಾ| ವಿ ಡಿ ಪಾಟೀಲ, ಡಾ|ಎಚ್‌
ಬಿ ರಾಜಶೇಖರ, ಡಾ| ಪ್ರೀತಿ ಮಾಸ್ತೆ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next