Advertisement

ಏಕದಿನ ಸರಣಿ: ಎಲ್ಲರ ಕಣ್ಣು ಕೊಹ್ಲಿ ಮೇಲೆ

11:18 PM Jan 18, 2022 | Team Udayavani |

ಪಾರ್ಲ: ಕಳೆದ 7 ವರ್ಷಗಳ ಬಳಿಕ ವಿರಾಟ್‌ ಕೊಹ್ಲಿ ಓರ್ವ ಸಾಮಾನ್ಯ ಬ್ಯಾಟ್ಸ್‌ಮನ್‌ ಆಗಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ತನಗಿಂತ ಕಿರಿಯನ ನಾಯಕತ್ವದಲ್ಲಿ ಆಡಲಿದ್ದಾರೆ ಎಂಬ ನಂಬಲೇಬೇಕಾದ ವಾಸ್ತವದೊಂದಿಗೆ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ ಬುಧವಾರ ಪಾರ್ಲ್ ನಲ್ಲಿ ಆರಂಭವಾಗಲಿದೆ.

Advertisement

ಟೆಸ್ಟ್‌ ಸರಣಿಯಲ್ಲಿ 1-0 ಮೇಲುಗೈ ಸಾಧಿಸಿದ ಬಳಿಕ ಹರಿಣಗಳ ನಾಡಿನಲ್ಲಿ ಸಂಪೂರ್ಣವಾಗಿ ಹಳಿ ತಪ್ಪಿರುವ ಭಾರತವನ್ನು ಏಕದಿನದಲ್ಲಿ ರಾಹುಲ್‌ ಪಡೆ ಹಳಿಗೆ ತಂದು ನಿಲ್ಲಿಸೀತೇ, ಅಲ್ಲಿ ಕೈ ಜಾರಿದ ಸರಣಿ ಇಲ್ಲಿ ನಮ್ಮವರ ವಶವಾದೀತೇ ಎಂಬುದೆಲ್ಲ ಈ ಸರಣಿಯ ಕೌತುಕಗಳು.

ಭಾರತ ಕಳೆದ ಮಾರ್ಚ್‌ನಲ್ಲಿ ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಪೂರ್ಣ ಸಾಮರ್ಥ್ಯದ ತಂಡದೊಂದಿಗೆ ಕೊನೆಯ ಏಕದಿನ ಸರಣಿ ಆಡಿತ್ತು. ದ್ವಿತೀಯ ದರ್ಜೆಯ ತಂಡ ಶ್ರೀಲಂಕಾ ಪ್ರವಾಸಗೈದಿತ್ತು. 2023ರ ವಿಶ್ವಕಪ್‌ ದೃಷ್ಟಿಯಿಂದ ಭಾರತದ ಟೀಮ್‌ ಕಾಂಬಿನೇಶನ್‌ಗೆ ದಕ್ಷಿಣ ಆಫ್ರಿಕಾ ಎದುರಿನ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ.

ಕಾಡಲಿದೆ ರೋಹಿತ್‌ ಗೈರು
ನಿಜಕ್ಕಾದರೆ ಇಲ್ಲಿ ರೋಹಿತ್‌ ಶರ್ಮ ಭಾರತವನ್ನು ಮುನ್ನಡೆಸಬೇಕಿತ್ತು. ಆದರೆ ಅವರ ಗೈರಲ್ಲಿ ರಾಹುಲ್‌ಗೆ ಈ ಜವಾಬ್ದಾರಿ ಸಿಕ್ಕಿದೆ. ಟೆಸ್ಟ್‌ ಸರಣಿಯ ದ್ವಿತೀಯ ಪಂದ್ಯದಲ್ಲೂ ರಾಹುಲ್‌ಗೆ ಅನಿರೀಕ್ಷಿತವಾಗಿ ನಾಯಕನ ಹೊಣೆಗಾರಿಕೆ ಲಭಿಸಿತ್ತು. ಆದರೆ ಇದರಲ್ಲಿ ಅವರು ಯಶಸ್ಸು ಕಾಣಲಿಲ್ಲ. ಹೀಗಾಗಿ ಏಕದಿನ ಸರಣಿಯನ್ನು ಅವರು ದೊಡ್ಡ ಸವಾಲಾಗಿ ತೆಗೆದುಕೊಳ್ಳಬೇಕಿದೆ. ಸ್ವತಃ ಮುಂಚೂಣಿಯಲ್ಲಿ ನಿಂತು ತಂಡವನ್ನು ಗೆಲುವಿನ ಪಥದಲ್ಲಿ ಮುನ್ನಡೆಸಬೇಕಿದೆ. ರೋಹಿತ್‌ ಗೈರು ಖಂಡಿತವಾಗಿಯೂ ಕಾಡಲಿದೆ.

ರಾಹುಲ್‌ ಮತ್ತೆ ಓಪನಿಂಗ್‌
ವಿಶೇಷವೆಂದರೆ, ಕೆ.ಎಲ್‌. ರಾಹುಲ್‌ ಇಲ್ಲಿ ಮರಳಿ ಆರಂಭಿಕನಾಗಿ ಕಣಕ್ಕಿಳಿಯುವುದು. ರೋಹಿತ್‌ ಶರ್ಮ -ಶಿಖರ್‌ಧವನ್‌ ಜೋಡಿ ಇನ್ನಿಂಗ್ಸ್‌ ಆರಂಭಿಸುತ್ತಿದ್ದಾಗ ರಾಹುಲ್‌ ಮಧ್ಯಮ ಕ್ರಮಾಂಕದಲ್ಲೆಲ್ಲಾದರೂ ಬ್ಯಾಟ್‌ ಹಿಡಿದು ಬರುತ್ತಿದ್ದರು. ಇಲ್ಲಿ ರೋಹಿತ್‌ ಗೈರಲ್ಲಿ ಓಪನಿಂಗ್‌ ಕ್ರಮಾಂಕವೇ ಲಭಿಸಲಿದೆ.

Advertisement

ರಾಹುಲ್‌ ಜತೆ ಧವನ್‌ ಇನ್ನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ. ಹೀಗಾಗಿ ಪ್ರಚಂಡ ಫಾರ್ಮನಲ್ಲಿರುವ ಋತುರಾಜ್‌ ಗಾಯಕ್ವಾಡ್‌ ತಮ್ಮ ಏಕದಿನ ಪದಾರ್ಪಣೆಗೆ ತುಸು ಕಾಯಬೇಕಾದುದು ಅನಿವಾರ್ಯ.

ಒನ್‌ಡೌನ್‌ನಲ್ಲಿ ಕೊಹ್ಲಿ ಕಣಕ್ಕಿಳಿಯುವುದೂ ಇದಕ್ಕೆ ಕಾರಣ. ಒತ್ತಡ ಮುಕ್ತರಾದ ಕೊಹ್ಲಿ ಭಾರತದ ಇನ್ನಿಂಗ್ಸ್‌ ಬೆಳವಣಿಗೆಯಲ್ಲಿ ಹಾಗೂ ಕಿರಿಯರಿಗೆ ಮಾರ್ಗದರ್ಶನ ನೀಡುವಲ್ಲಿ ಮಹತ್ವದ ಪಾತ್ರ ವಹಿಸಬೇಕಿದೆ.

ಅಯ್ಯರ್‌ ಅಥವಾ ಸೂರ್ಯಕುಮಾರ್‌?
ತಂಡದ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ ಮತ್ತು ಸೂರ್ಯಕುಮಾರ್‌ ಯಾದವ್‌ ನಡುವೆ ಪೈಪೋಟಿ ಇದೆ. ಕೀಪರ್‌ ರಿಷಭ್‌ ಪಂತ್‌ 5ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

ನ್ಯೂಜಿಲ್ಯಾಂಡ್‌ ಎದುರಿನ ಟಿ20 ಸರಣಿಯಲ್ಲಿ ಮಿಂಚಿದ ಹಾರ್ಡ್‌ ಹಿಟ್ಟಿಂಗ್‌ ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌ 6ನೇ ಕ್ರಮಾಂಕದಲ್ಲಿ ಅವಕಾಶ ಪಡೆಯಬಹುದು.

ಬುಮ್ರಾ-ಭುವನೇಶ್ವರ್‌ ಪ್ರಧಾನ ವೇಗಿಗಳಾಗ ಬಹುದು. ಇನ್ನೊಂದು ಸ್ಥಾನಕ್ಕೆ ಠಾಕೂರ್‌, ಚಹರ್‌, ಪ್ರಸಿದ್ಧ್ ಕೃಷ್ಣ ನಡುವೆ ಪೈಪೋಟಿ ಇದೆ. ಸಿರಾಜ್‌ ಕೂಡ ಚೇತರಿಸಿಕೊಂಡಿರುವುದರಿಂದ ಸ್ಪರ್ಧೆ ತೀವ್ರ ಗೊಳ್ಳುವುದರಲ್ಲಿ ಅನುಮಾನವಿಲ್ಲ.

ಅಶ್ವಿ‌ನ್‌-ಚಹಲ್‌ ಜೋಡಿಯ ಅವಳಿ ಸ್ಪಿನ್‌ ಪ್ರಯೋಗ ಸಾಧ್ಯತೆ ಇದೆ. ಇಲ್ಲವಾದರೆ ಹೆಚ್ಚುವರಿ ಬ್ಯಾಟ್ಸ್‌ಮನ್‌ ಅಥವಾ ಆಲ್‌ರೌಂಡರ್‌ ಒಬ್ಬರನ್ನು ಆಯ್ದುಕೊಳ್ಳುವುದು ಜಾಣ ನಡೆಯಲಾಗಲಿದೆ.

ಉತ್ಸಾಹದಲ್ಲಿ ಬವುಮ ಪಡೆ
ಆತಿಥೇಯ ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿ ಗೆದ್ದ ಹುಮ್ಮಸ್ಸಿನಲ್ಲಿದೆ. ಇಲ್ಲಿ ಟೆಂಬ ಬವುಮ ತಂಡವನ್ನು ಮುನ್ನಡೆಸಲಿದ್ದಾರೆ. ಟೆಸ್ಟ್‌ ನಿವೃತ್ತಿ ಘೋಷಿಸಿದ ಕ್ವಿಂಟನ್‌ ಡಿ ಕಾಕ್‌, ಯುವ ವೇಗಿ ಮಾರ್ಕೊ ಜಾನ್ಸೆನ್‌, ಮಾರ್ಕ್‌ರಮ್‌, ಮಿಲ್ಲರ್‌, ಶಮಿÕ ಅವರೆಲ್ಲ ಭಾರತಕ್ಕೆ ಅಪಾಯಕಾರಿಯಾಗಿ ಗೋಚರಿಸಬಲ್ಲರು.

ಸಂಭಾವ್ಯ ತಂಡಗಳು
ಭಾರತ: ಕೆ.ಎಲ್‌. ರಾಹುಲ್‌ (ನಾಯಕ), ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌, ವೆಂಕಟೇಶ್‌ ಅಯ್ಯರ್‌, ದೀಪಕ್‌ ಚಹರ್‌, ಶಾರ್ದೂಲ್ ಠಾಕೂರ್/ಭುವನೇಶ್ವರ್‌ ಕುಮಾರ್‌, ಆರ್‌. ಅಶ್ವಿ‌ನ್‌, ಜಸ್‌ಪ್ರೀತ್‌ ಬುಮ್ರಾ, ಚಹಲ್‌.

ದಕ್ಷಿಣ ಆಫ್ರಿಕಾ: ಕ್ವಿಂಟನ್‌ ಡಿ ಕಾಕ್‌, ಜಾನೆಮನ್‌ ಮಲಾನ್‌, ಟೆಂಬ ಬವುಮ (ನಾಯಕ), ಐಡನ್‌ ಮಾರ್ಕ್‌ರಮ್‌, ರಸ್ಸಿ ವಾನ್‌ಡರ್‌ ಡುಸೆನ್‌, ಡೇವಿಡ್‌ ಮಿಲ್ಲರ್‌, ಡ್ವೇನ್‌ ಪ್ರಿಟೋರಿಯಸ್‌/ಜಾರ್ಜ್‌ ಲಿಂಡೆ, ಆ್ಯಂಡಿಲ್‌ ಫೆಲುಕ್ವಾಯೊ, ಮಾರ್ಕೊ ಜಾನ್ಸೆನ್‌, ಲುಂಗಿ ಎನ್‌ಗಿಡಿ, ತಬ್ರೇಜ್‌ ಶಮ್ಸಿ.

ಪಾರ್ಲ್ ನಲ್ಲಿ 4ನೇ, ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯ
ಪಾರ್ಲ್ ನಲ್ಲಿ ಭಾರತ ಈವರೆಗೆ 3 ಏಕದಿನ ಪಂದ್ಯಗಳನ್ನಾಡಿದೆ. ಆದರೆ ದಕ್ಷಿಣ ಆಫ್ರಿಕಾವನ್ನು ಇನ್ನೂ ಎದುರಿಸಿಲ್ಲ!ಇಲ್ಲಿ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಏರ್ಪಟ್ಟಿದ್ದೇ ಭಾರತ-ಜಿಂಬಾಬ್ವೆ ನಡುವೆ. 1997ರ ಸರಣಿಯ ಈ ಪಂದ್ಯ ಟೈ ಆಗಿತ್ತು. ಜಿಂಬಾಬ್ವೆ 8ಕ್ಕೆ 236 ರನ್‌ ಗಳಿಸಿದರೆ, ಸಚಿನ್‌ ತೆಂಡುಲ್ಕರ್‌ ನಾಯಕತ್ವದ ಭಾರತ 49.5 ಓವರ್‌ಗಳಲ್ಲಿ 236ಕ್ಕೆ ಆಲೌಟ್‌ ಆಗಿತ್ತು.

ಭಾರತವಿಲ್ಲಿ ದ್ವಿತೀಯ ಪಂದ್ಯವಾಡಿದ್ದು ಕೀನ್ಯಾ ವಿರುದ್ಧ. ಅದು ತ್ರಿಕೋನ ಸರಣಿಯಾಗಿತ್ತು. ಸೌರವ್‌ ಗಂಗೂಲಿ ಪಡೆಯಿಲ್ಲಿ 186 ರನ್ನುಗಳ ಭರ್ಜರಿ ಗೆಲುವು ದಾಖಲಿಸಿತ್ತು. ತೆಂಡುಲ್ಕರ್‌ ಅವರ ಅಮೋಘ 146 ರನ್‌ ನೆರವಿನಿಂದ ಭಾರತ 3ಕ್ಕೆ 351 ರನ್‌ ಪೇರಿಸಿದರೆ, ಕೀನ್ಯಾ ಗಳಿಸಿದ್ದು 5ಕ್ಕೆ 165 ರನ್‌ ಮಾತ್ರ!

ಟೀಮ್‌ ಇಂಡಿಯಾ ಕೊನೆಯ ಸಲ ಪಾರ್ಲ್ ಅಂಗಳದಲ್ಲಿ ಆಡಿದ್ದು 2003ರ ವಿಶ್ವಕಪ್‌ನಲ್ಲಿ. ಎದುರಾಳಿ ನೆದರ್ಲೆಂಡ್ಸ್‌. ಫಲಿತಾಂಶ, ಭಾರತಕ್ಕೆ 68 ರನ್‌ ಜಯ. ಇಲ್ಲಿ ಗಂಗೂಲಿ ತಂಡದಿಂದ ಗಳಿಸಲು ಸಾಧ್ಯವಾದದ್ದು 204 ರನ್‌ ಮಾತ್ರ. ಆದರೆ ಶ್ರೀನಾಥ್‌ ಮತ್ತು ಕುಂಬ್ಳೆ ದಾಳಿಗೆ (ತಲಾ 4 ವಿಕೆಟ್‌) ಕುಸಿದ ಡಚ್‌ ಪಡೆ 136ಕ್ಕೆ ಆಲೌಟ್‌ ಆಯಿತು.

ಸರಿಸುಮಾರು 2 ದಶಕಗಳ ಬಳಿಕ ಭಾರತ ಈ ಅಂಗಳದಲ್ಲಿ ಆಡಲಿಳಿಯುತ್ತಿದೆ. ಮೊದಲ ಸಲ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಎದುರಿಸುತ್ತಿದೆ. ಸಹಜವಾಗಿಯೇ ಕುತೂಹಲ ಮೇರೆ ಮೀರಿದೆ.

Advertisement

Udayavani is now on Telegram. Click here to join our channel and stay updated with the latest news.

Next