ಬೆಂಗಳೂರು: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಕುರಿತು ಸುಪ್ರೀಂ ಕೋರ್ಟ್ ಆದೇಶದಂತೆ ತನಿಖೆ ಆರಂಭಿಸಿರುವ ಸಿಬಿಐ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಂತಿ ಮತ್ತು ಎ.ಎಂ.ಪ್ರಸಾದ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಇದರೊಂದಿಗೆ ಈ ಪ್ರಕರಣದಲ್ಲಿ ಸಿಐಡಿಯಿಂದ ಕ್ಲೀನ್‌ಚಿಟ್ ಪಡೆದ ಸಚಿವ ಜಾರ್ಜ್ ಮತ್ತು ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಂತಿ ಹಾಗೂ ಎ.ಎಂ.ಪ್ರಸಾದ್ ಅವರು ಮತ್ತೆ ತನಿಖೆ ಎದುರಿಸಬೇಕಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ನೀಡಿದ ಮತ್ತು ಒಂದೇ ಉದ್ದೇಶದಿಂದ ಕೆಲವರು ಸೇರಿ ಮಾಡುವ ಸಂಚು (ಐಪಿಸಿ 34) ಆರೋಪವಿದೆ.
ಸಿಬಿಐ ಕೇಂದ್ರ ಕಚೇರಿಯಿಂದ ಬಂದ ನಿರ್ದೇಶನದ ಮೇರೆಗೆ ಸಿಐಡಿ ಪೊಲೀಸರಿಂದ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿ ತರಿಸಿಕೊಂಡ ಬಳಿಕ ಚೆನ್ನೈನ ಸಿಬಿಐ ವಿಶೇಷ ಅಪರಾಧ ವಿಭಾಗದ ಎಸ್‌ಪಿ ಎ.ಶ್ರೀನಿವಾಸನ್ ನೇತೃತ್ವದಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ವಿಶೇಷ ಅಪರಾಧ ವಿಭಾಗದ ಹೆಚ್ಚುವರಿ ಎಸ್ಪಿ ಜಿ.ಕಲೈಮಣಿ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ.
ಎಫ್ಐಆರ್ ಪ್ರತಿಯನ್ನು ಮಡಿಕೇರಿ ಜೆಎಂಎಫ್ಸಿ ನ್ಯಾಯಾಲಯ, ಸಿಬಿಐ ಜಂಟಿ ನಿರ್ದೇಶಕರು, ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಮತ್ತು ತನಿಖೆಯ ನೇತೃತ್ವ ವಹಿಸಿಕೊಂಡಿರುವ ಹೆಚ್ಚುವರಿ ಎಸ್ಪಿ ಜ.ಕಲೈಮಣಿ ಅವರಿಗೆ ಕಳುಹಿಸಲಾಗಿದೆ.ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ಕೋರಿ ಅವರ ತಂದೆ ಕುಶಾಲಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸೆ. 5ರಂದು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ತನಿಖೆ ಆರಂಭಿಸಲಾಗಿದೆ.
Related Articles
ಏನಿದು ಪ್ರಕರಣ?:
ಮಂಗಳೂರಿನಲ್ಲಿ ಡಿವೈಎಸ್ಪಿಯಾಗಿದ್ದ ಎಂ.ಕೆ.ಗಣಪತಿ ಅವರು 2016ರ ಜು. 7ರಂದು ಮಡಿಕೇರಿಯ ವಸತಿಗೃಹವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಅವರು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿ, ತಮಗೇನಾದರೂ ಆದರೆ ಅದಕ್ಕೆ ಸಚಿವ ಕೆ.ಜೆ.ಜಾರ್ಜ್ ಮತ್ತು ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಂತಿ ಮತ್ತು ಎ.ಎಂ.ಪ್ರಸಾದ್ ಕಾರಣ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಪ್ರಕರಣ ರಾಜ್ಯಾದ್ಯಂತ ಭಾರೀ ವಿವಾದ ಸೃಷ್ಟಿಸಿತ್ತು. ವಿಧಾನಸೌಧದ ಒಳಗೆ ಮತ್ತು ಹೊರಗೆ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಇದರ ಮಧ್ಯೆಯೇ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಅಲ್ಲದೆ, ಕೆ.ಜೆ.ಜಾರ್ಜ್ ಸಚಿವ ಸ್ಥಾನ ಕಳೆದುಕೊಳ್ಳುವಂತಾಗಿತ್ತು. ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿತ್ತು.
ತನಿಖೆ ಆರಂಭಿಸಿದ್ದ ಸಚಿವ ಕೆ.ಜೆ.ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಂತಿ ಮತ್ತು ಎ.ಎಂ.ಪ್ರಸಾದ್ ಸೇರಿದಂತೆ ಕೆಲವರನ್ನು ವಿಚಾರಣೆ ನಡೆಸಿದ್ದ ಸಿಐಡಿ, ಗಣಪತಿ ಅವರು ಮಾಡಿದ್ದ ಆಪಾದನೆಗೆ ಸೂಕ್ತ ಸಾûಾ$Âಧಾರಗಳಿಲ್ಲ ಎಂದು ಪರಿಗಣಿಸಿ ಮೂರೂ ಆರೋಪಿತರಿಗೆ ಕ್ಲೀನ್‌ಚಿಟ್ ನೀಡಿತ್ತು. ಇದರಿಂದ ಸಚಿವ ಜಾರ್ಜ್ ಮತ್ತೆ ಸಂಪುಟ ಸೇರಿಕೊಂಡರೆ, ಅಧಿಕಾರಿಗಳಿಬ್ಬರು ಕೆಲಸಕ್ಕೆ ಹಾಜರಾದರು. ಪ್ರಕರಣದ ಕುರಿತು ಸಿಐಡಿ ತನಿಖೆ ಆರಂಭವಾಗುತ್ತಿದ್ದಂತೆ, ಸಿಐಡಿ ತನಿಖೆ ಬೇಡ. ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಎಂ.ಕೆ.ಕುಶಾಲಪ್ಪ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು.
ಅದರಂತೆ ಇತ್ತೀಚೆಗೆ ಕೇಂದ್ರ ಸಿಬಿಐ ನಿರ್ದೇಶಕರು ಕರ್ನಾಟಕ ಅಪರಾಧ ತನಿಖಾ ವಿಭಾಗಕ್ಕೆ (ಸಿಐಡಿ) ಪತ್ರ ಬರೆದು ಪ್ರಕರಣದ ತನಿಖಾ ವರದಿಯನ್ನು ಚೆನ್ನೈನ ಸಿಬಿಐ ಕಚೇರಿಗೆ ಹಸ್ತಾಂತರಿಸುವಂತೆ ಸೂಚಿಸಿದ್ದರು. ಈ ಸೂಚನೆ ಮೇಲೆ ಬುಧವಾರ ಚೆನ್ನೈಗೆ ತೆರಳಿದ್ದ ಸಿಐಡಿ ಅಧಿಕಾರಿಗಳು ತನಿಖೆ ಕುರಿತ ದಾಖಲೆಗಳನ್ನು ಸಿಬಿಐ ವಿಶೇಷ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಿದ್ದು, ಈ ದಾಖಲೆ ಆಧಾರದ ಮೇಲೆ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ.
ಸಾಕ್ಷ್ಯ ನಾಶದ ಬಗ್ಗೆ ಮಾಹಿತಿ ಕೇಳಿದ ಸಿಬಿಐ
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮಧ್ಯೆ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಿಐಡಿ ವಶಕ್ಕೆ ಪಡೆದಿದ್ದ ದಾಖಲೆಗಳ ಪೈಕಿ 2,500 ಫೋಟೋಗಳು, 57 ಸಂದೇಶಗಳು, 100 ಇ-ಮೇಲ್ ಸಂದೇಶಗಳು, 145 ಪಿಡಿಎಫ್ ಫೈಲ್‌ಗಳು, 791 ಟೆಕ್ಸ್ಟ್ ಪೈಲ್‌ಗಳು, 31 ಪಿಪಿಟಿ ಫೈಲ್‌ಗಳು, ಗಣಪತಿ ಮೊಬೈಲ್‌ನಲ್ಲಿದ್ದ 52 ಸಂದೇಶಗಳು, ಶಾಸಕರು, ಸಚಿವರು ಸೇರಿದಂತೆ 352 ಹೆಸರುಗಳು, 16 ಜಿಪಿ ಸಾಮರ್ಥಯದ ಪೆನ್‌ಡ್ರೈವ್‌ನಲ್ಲಿದ್ದ 199 ಫೈಲ್, 8 ಜಿಪಿ ಪೆನ್‌ಡ್ರೈವ್‌ನಲ್ಲಿದ್ದ 185 ಫೈಲ್, 910 ಎಂಎಸ್ ಎಕ್ಲೆಲ್ ಫೈಲ್‌ಗಳು, ಗಣಪತಿ ಮೊಬೈಲ್‌ನಲ್ಲಿದ್ದ 31 ಕರೆಗಳ ಮಾಹಿತಿ, ಸಚಿವರು, ಶಾಸಕರು, ಕೇಂದ್ರ ಸಚಿವರ ಸಂಬಂಧಿಕರ ಕಾಲ್ ಡಿಟೇಲ್ಸ್ ಹಾಗೂ ಆತ್ಮಹತ್ಯೆ ಸ್ಥಳದಲ್ಲಿದ್ದ ಪೆನ್‌ಡ್ರೈವ್ ಕೂಡ ನಾಶವಾಗಿದೆ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಸಾಕ್ಷ್ಯನಾಶದ ಕುರಿತು ಸಿಬಿಐ ಅಧಿಕಾರಿಗಳು ಸಿಐಡಿ ಅಧಿಕಾರಿಗಳ ಬಳಿ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.
ರಾಜೀನಾಮೆಗೆ ಬಿಜೆಪಿ ಆಗ್ರಹ
ಎಫ್ಐಆರ್ ದಾಖಲಾದ ಬೆನ್ನಲ್ಲೇ ಜಾರ್ಜ್ ವಿರುದ್ಧ ಮುಗಿಬಿದ್ದಿರುವ ಬಿಜೆಪಿ ನಾಯಕರು ರಾಜೀನಾಮೆಗೆ ಆಗ್ರಹಿಸಿದ್ದಾರೆ. ರಾತ್ರಿ ತುರ್ತು ಸುದ್ದಿಗೋಷ್ಠಿ ಕರೆದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು, ಜಾರ್ಜ್ ತಕ್ಷಣ ರಾಜೀನಾಮೆ ನೀಡಬೇಕು. ಇಲ್ಲವೇ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.