ಧಾರವಾಡ: ಅಂದುಕೊಂಡಂತೆ ನಡೆದಿದ್ದರೆ ಇಷ್ಟು ಹೊತ್ತಿಗಾಗಲೇ ಕಿತ್ತೂರು ಕಿಲ್ಲಾದ ಪಕ್ಕದ ಲ್ಲಿಯೇ ರಾಣಿ ಚನ್ನಮ್ಮ ತಾಯಿಗೆ ಒಂದು ಚೆಂದದ ಅರಮನೆ ನಿರ್ಮಾಣ ಕಾರ್ಯ ಶುರು ವಾಗಬೇಕಿತ್ತು. ಕಾಲಮಿತಿಯಲ್ಲಿಯೇ ಕಿತ್ತೂರು ಪ್ರವಾಸಿ ತಾಣವಾಗಬೇಕಿತ್ತು.
ಕೋಟೆ ಅಭಿವೃದ್ಧಿ ಯಾಗಬೇಕಿತ್ತು. ಚನ್ನಮ್ಮನ ಖಡ್ಗ ಮರಳಿ ಕಿತ್ತೂರು ವಸ್ತು ಸಂಗ್ರಹಾಲಯ ಸೇರಬೇಕಿತ್ತು. ಇಡೀ ಕಿತ್ತೂರು ದೇಶಗತಿಯ ಎಲ್ಲಾ ದಾಖಲೆಗಳು ಓದಲು, ನೋಡಲು ಸಿಗಬೇಕಿತ್ತು. ಆದರೆ ಎಲ್ಲವೂ ಬರೀ ಮಾತಾಗಿ ಬಿಟ್ಟಿದೆ ಅಷ್ಟೇ.
ಹೌದು. ದೇಶದಲ್ಲಿಯೇ ಮೊದಲು ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕಿತ್ತೂರು ರಾಣಿ ಚನ್ನಮ್ಮನಿಗೆ ಸರ್ಕಾರಗಳು ಕೊಡುತ್ತಿರುವ ಮರ್ಯಾದೆಗೆ ನಿಜಕ್ಕೂ ಚನ್ನಮ್ಮನ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಪ್ರತಿವರ್ಷ ಅ.23ಕ್ಕೆ ನಡೆಯುವ ಕಿತ್ತೂರು ಯುದ್ಧದ ವಿಜಯೋತ್ಸವದ ಕಿತ್ತೂರು ಉತ್ಸವ ಬಂದಾಗ ಮಾತ್ರ ಸರ್ಕಾರದ ಮುಖ್ಯಸ್ಥರು ಇತ್ತ ತಿರುಗಿ ನೋಡುತ್ತಾರೆ. ಇದು ಮುಗಿದ ಮೇಲೆ ಮತ್ತೆ ಕಿತ್ತೂರನ್ನು ಮರೆತು ಬಿಡುತ್ತಾರೆ. ಇದಕ್ಕೆ ಯಾವ ಸರ್ಕಾರಗಳೂ ಹೊರತಾಗಿಲ್ಲ. ಅಧಿಕಾರಿಗಳೂ ಹೊರತಾಗಿಲ್ಲ.
ನೂತನ ಅರಮನೆ ಎಲ್ಲಿ?: ಕಿತ್ತೂರು ಕೋಟೆಗೆ ಹೊಂದಿಕೊಂಡಂತೆ ಪೂರ್ವ ಭಾಗದ 15 ಎಕರೆ ಯಲ್ಲಿ ಮಾದರಿ ಅರಮನೆ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಪ್ರವಾಸಿಗರಿಗೆ ರಾಷ್ಟ್ರೀಯ ಹೆದ್ದಾರಿಯಿಂದ ಕಿತ್ತೂರು ಕೋಟೆ ಮತ್ತು ಅರಮನೆಗೆ ಪ್ರತ್ಯೇಕ ಸುಂದರ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ. ಮಾಜಿ ಸಿಎಂ ಬಿಎಸ್‌ವೈ ಕಿತ್ತೂರು ಮಾದರಿ ಅರಮನೆ ನಿರ್ಮಾಣಕ್ಕೆ 200 ಕೋಟಿ ರೂ. ಕಾಯ್ದಿರಿಸಿದ್ದರು. ಸದ್ಯಕ್ಕೆ 50 ಕೋಟಿ ರೂ. ಬಿಡುಗಡೆ ಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅಗತ್ಯ ಸಹ ಕಾರದ ಭರವಸೆ ನೀಡಿದ್ದಾರೆ.
ಕಿತ್ತೂರು ಮಾದರಿ ಅರಮನೆ ನಿರ್ಮಿಸುವಾಗ ಯಾವುದೇ ಕಾರಣಕ್ಕೂ ಈ ಭಾಗದ ಶಿಲ್ಪಕಲಾ ಸಂಸ್ಕೃತಿಗೆ ಧಕ್ಕೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಗುತ್ತಿಗೆ ನೀಡು ವಾಗಲೇ ಈ ಕಠಿಣ ಒಪ್ಪಂದಗಳನ್ನು ಗುತ್ತಿಗೆ ಕಂಪನಿಗೆ ವಿಧಿಸಬೇಕು.
-ಡಾ| ಷಡಕ್ಷರಯ್ಯ, ಇತಿಹಾಸ ತಜ್ಞ,
-ಬಸವರಾಜ ಹೊಂಗಲ್