ಪ್ರತಿವರ್ಷ ಡಿಸೆಂಬರ್ ತಿಂಗಳು ಬಂತೆಂದರೆ ಬ್ರಹ್ಮಾವರ ಮತ್ತು ಉಡುಪಿಯ ಯಕ್ಷಗಾನ ಪ್ರಿಯರಿಗೆ ಹಬ್ಬದ ಅನುಭವ. ಪ್ರೌಢಶಾಲೆಯ ವಿದ್ಯಾರ್ಥಿಗಳು “ಕಿಶೋರ ಯಕ್ಷ’ ಸಂಭ್ರಮದಲ್ಲಿ ತಮ್ಮ ಯಕ್ಷಕಲಾ ಪ್ರತಿಭೆ ಪ್ರದರ್ಶಿಸುತ್ತಾರೆ. ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಎರಡು ವಾರ, ಬ್ರಹ್ಮಾವರದ ಬಂಟರ ಭವನದ ಆವರಣದಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಒಂದು ವಾರ ಈ ಸಾಂಸ್ಕೃತಿಕ ಕಲೋತ್ಸವ ನಿರಂತರ ಹತ್ತು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದೇನೂ ಸ್ಪರ್ಧೆಯಲ್ಲ; ಒಂದೂವರೆ ಗಂಟೆಯ ನಿಗದಿತ ಅವಧಿಯಲ್ಲಿ ನಡೆಯುವ ಶಿಸ್ತುಬದ್ಧ ಕಾರ್ಯಕ್ರಮ. ಪ್ರತೀವರ್ಷ ಇದನ್ನು ಕಾತರದಿಂದ ನಿರೀಕ್ಷಿಸುವ ಒಂದು ಪ್ರೇಕ್ಷಕ ವರ್ಗ ನಿರ್ಮಾಣವಾಗಿದೆ.
ಉಡುಪಿ ಶಾಸಕರಾಗಿದ್ದ ಕೆ. ರಘುಪತಿ ಭಟ್ ಹತ್ತು ವರ್ಷಗಳ ಹಿಂದೆ ತಮ್ಮ “ಪರಿವಾರ ಟ್ರಸ್ಟ್’ ಮೂಲಕ ತನ್ನ ವಿಧಾನಸಭಾ ವ್ಯಾಪ್ತಿಯ ಪ್ರೌಢಶಾಲೆಗಳಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುವ ಯೋಜನೆಯ ಕನಸು ಕಂಡರು. ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಉಡುಪಿಯ ಕ್ರಿಯಾಶೀಲ ಸಾಂಸ್ಕೃತಿಕ-ಸಾಮಾಜಿಕ ಸಂಘಟನೆ ಯಕ್ಷಗಾನ ಕಲಾರಂಗದ ಸಹಯೋಗ ಅಪೇಕ್ಷಿಸಿ ದರು. ಯಕ್ಷಗಾನ ಕಲೆ-ಕಲಾವಿದರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಕಲಾರಂಗದ ಕಾರ್ಯಕರ್ತರು ಸಂತೋಷದಿಂದ ಕೈಜೋಡಿಸಿದರು. ಇದರ ಯಶಸ್ಸನ್ನು ಗುರುತಿಸಿದ ರಘುಪತಿ ಭಟ್ ಮತ್ತು ಕಲಾರಂಗದ ಸದಸ್ಯರು ಇದು ನಿರಂತರ ಮುಂದುವರಿಯಬೇಕೆಂಬ ಉದ್ದೇಶದಿಂದ ಯಕ್ಷಶಿಕ್ಷಣ ಟ್ರಸ್ಟ್’ ರಚಿಸಿದರು. ಶ್ರೀಕೃಷ್ಣ ಮಠದ ಪರ್ಯಾಯ ಸ್ವಾಮಿಗಳು ಗೌರವ ಅಧ್ಯಕ್ಷರಾಗಿ, ಉಡುಪಿಯ ಶಾಸಕರು ಕಾರ್ಯಾಧ್ಯಕ್ಷರಾಗಿ, ಅಂಬಲಪಾಡಿ ದೇವಳದ ಧರ್ಮದರ್ಶಿಗಳು, ಪರ್ಯಾಯ ಮಠದ ದಿವಾನರು ಉಪಾಧ್ಯಕ್ಷರಾಗಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಟ್ರಸ್ಟ್‌ನ ಕಾರ್ಯದರ್ಶಿಯಾಗಿ- ಹೀಗೆ ಪದ ನಿಮಿತ್ತ ಪದಾಧಿಕಾರಿಗಳು ಹಾಗೂ ಏಳು ಜನ ವಿಶ್ವಸ್ಥ ಮಂಡಳಿಯೊಂದಿಗೆ ಟ್ರಸ್ಟನ್ನು ನೋಂದಾಯಿಸಲಾಯಿತು.
ಹಿಂದೆ ಕೆಲವು ಶಾಲೆಗಳಲ್ಲಿ ವಾರ್ಷಿಕೋತ್ಸವದಲ್ಲಿ ಪ್ರದರ್ಶನ ನಡೆಯುತ್ತಿತ್ತು. ಪ್ರದರ್ಶನಕ್ಕಾಗಿ ಮಕ್ಕಳನ್ನು ತರಬೇತಿಗೊಳಿಸಲಾಗುತ್ತಿತ್ತು. ಯಕ್ಷ ಶಿಕ್ಷಣ ಟ್ರಸ್ಟ್‌ನ ಉದ್ದೇಶ ಅದಕ್ಕಿಂತ ಭಿನ್ನ. ಇಲ್ಲಿ ಯಕ್ಷಗಾನ ಮೂಲ ಹೆಜ್ಜೆಗಳ ತರಬೇತಿ ನೀಡಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಯಕ್ಷಗಾನ ಗುರುಗಳು ಶಾಲೆಗಳಿಗೆ ಹೋಗಿ ಶಾಲೆಯ ದೈನಂದಿನ ಶಿಕ್ಷಣಕ್ಕೆ ತೊಡಕಾಗದಂತೆ ವಾರದಲ್ಲಿ ಎರಡು ಅಥವಾ ಮೂರು ತರಗತಿ ತೆಗೆದುಕೊಳ್ಳುತ್ತಾರೆ. ಜೂನ್‌ನಲ್ಲಿ ಆರಂಭವಾದ ಯಕ್ಷಗಾನ ತರಗತಿಗಳು ಡಿಸೆಂಬರ್‌ವರೆಗೆ ಮುಂದುವರಿಯುತ್ತವೆ. ಈ ಆರು ತಿಂಗಳಲ್ಲಿ ಮಕ್ಕಳು ಪೂರ್ವ ರಂಗವು ಸೇರಿದಂತೆ ಒಂದೂವರೆ ಗಂಟೆ ಅವಧಿಯ ಪ್ರದರ್ಶನಕ್ಕೆ ಸಿದ್ಧರಾಗುತ್ತಾರೆ. ಈ ಎಲ್ಲ ಶಾಲೆಗಳ ಪ್ರದರ್ಶನ ಶಾಲೆಯ ವಾರ್ಷಿಕೋತ್ಸವ ಮತ್ತು “ಕಿಶೋರ ಯಕ್ಷ ಸಂಭ್ರಮ’ದಲ್ಲಿ ಜರಗುತ್ತದೆ.
ಹತ್ತು ವರ್ಷಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ. ಜಾತಿ, ಮತ, ಲಿಂಗ ಭೇದವಿಲ್ಲದೆ ಯಕ್ಷ ಶಿಕ್ಷಣ ಪಡೆಯುತ್ತಿದ್ದಾರೆ. ಹುಡುಗಿ ಯರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಇನ್ನೊಂದು ವಿಶೇಷ. ಇಲ್ಲಿ ಬಂದು ನೆಲೆಸಿರುವ ಹೊರ ಜಿಲ್ಲೆಯ ಬೇರೆ ರಾಜ್ಯದ ಮಕ್ಕಳು ಭಾಗಿಯಾಗಿ ದ್ದಾರೆ. ಇವರೆಲ್ಲ ಯಕ್ಷಗಾನ ಕಲಾವಿದ ರಾಗದಿದ್ದರೂ ಯಕ್ಷಗಾನದ ಅಭಿಮಾನಿ ಪ್ರೇಕ್ಷಕರಾಗುವಲ್ಲಿ ಅನುಮಾನವಿಲ್ಲ. ಪ್ರಸಕ್ತ ವರ್ಷ 17 ಯಕ್ಷ ಗುರುಗಳು 43 ಶಾಲೆಗಳಲ್ಲಿ ಯಕ್ಷಶಿಕ್ಷಣ ನೀಡುತ್ತಿದ್ದಾರೆ. 1,000ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯ, ಪುರಾಣಜ್ಞಾನ, ಭಾಷಾ ಶುದ್ಧಿ, ವಾಕ್ ಕೌಶಲ ಸಾಧ್ಯವಾಗಿದೆ. ಪರೀಕ್ಷಾ ಫಲಿತಾಂಶದ ಮೇಲೂ ಇದು ಧನಾತ್ಮಕ ಪರಿಣಾಮ ಬೀರಿದೆ.
ಯಕ್ಷಶಿಕ್ಷಣದ ಗುರುಗಳ ನೇಮಕ, ಅವರಿಗೆ ಗೌರವ ಸಂಭಾವನೆ, ಪ್ರದರ್ಶನ ವ್ಯವಸ್ಥೆಯೂ ಸೇರಿದಂತೆ ಎಲ್ಲ ಮೇಲುಸ್ತುವಾರಿಯನ್ನು ಯಕ್ಷಗಾನ ಕಲಾರಂಗ ನಿರ್ವಹಿಸುತ್ತಿದೆ. ಬ್ರಹ್ಮಾವರದ ಪ್ರದರ್ಶನದ ವ್ಯವಸ್ಥೆಯನ್ನು ಅಲ್ಲಿಯ ಪ್ರದರ್ಶನ ಸಂಘಟನಾ ಸಮಿತಿ ಅಚ್ಚುಕಟ್ಟಾಗಿ ನೇರವೇರಿಸುತ್ತಾ ಬಂದಿದೆ. ಅವರೂ ಅಭಿನಂದನಾರ್ಹರು. ಯಕ್ಷಗಾನದ ಈ ಮಹಾಭಿಯಾನ ಸಂಸ್ಕೃತಿಯ ಸಂವರ್ಧನೆಗೆ ಪ್ರೇರಕವಾಗಿ ಒದಗಿ ಬಂದಿದೆ.
ಈ ವರ್ಷದ ಕಿಶೋರ ಯಕ್ಷಸಂಭ್ರಮ ಡಿಸೆಂಬರ್ 2ರಿಂದ 16ರವರೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮತ್ತು ಡಿಸೆಂಬರ್ 17ರಿಂದ 29ರ ವರೆಗೆ ಬ್ರಹ್ಮಾವರದಲ್ಲಿ ಸಂಪನ್ನಗೊಳ್ಳಲಿದೆ.
ದಿನಮಣಿ ಶಾಸ್ತ್ರಿ