Advertisement
ಸಾಮಾನ್ಯ ಜನರಲ್ಲಿ ಉಳಿತಾಯ ಮನೋಭಾವವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಕಿಸಾನ್ ವಿಕಾಸ್ ಪತ್ರ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಸಣ್ಣ ಮಟ್ಟದ ಉಳಿತಾಯದಿಂದ ಜನರು ದ್ವಿಗುಣ ಲಾಭ ಪಡೆಯಬಹುದು. ಇದು ಸರಕಾರ ಬೆಂಬಲಿತ ಯೋಜನೆಯಾಗಿದ್ದು, ಹೆಚ್ಚು ಸುರಕ್ಷಿತ ಕೂಡ. ಅಂಚೆ ಕಚೇರಿಯಲ್ಲಿ ಚಾಲ್ತಿಯಲ್ಲಿರುವ ಈ ಸೇವೆ ಬಗ್ಗೆ ಅನೇಕರಿಗೆ ಅರಿವಿಲ್ಲ. 1988ರಲ್ಲಿಯೇ ಈ ಯೋಜನೆ ಜಾರಿಗೆ ಬಂದಿತ್ತು. 2011ರಲ್ಲಿ ಸ್ಥಗಿತಗೊಂಡಿತಾದರೂ ಇದರ ಮಹತ್ವ ಅರಿತ ಸಮಿತಿಗಳು ಇದನ್ನು ಮತ್ತೆ ಜಾರಿಗೆ ತರುವಂತೆ ಶಿಫಾರಸು ಮಾಡಿದವು. ಇದರ ಪರಿಣಾಮ 2014ರಿಂದ ಈ ಯೋಜನೆ ಮತ್ತೆ ಚಾಲ್ತಿಗೆ ಬಂದಿತು.
ತ್ತೈಮಾಸಿಕ ಹಣಕಾಸಿನ ಆಧಾರದ ಮೇಲೆ ಈ ಉಳಿತಾಯಕ್ಕೆ ಬಡ್ಡಿದರವನ್ನು ಹಣಕಾಸು ಇಲಾಖೆ ಅನುಸರಿಸುತ್ತದೆ. ಸದ್ಯ ಈ ಉಳಿತಾಯ ಖಾತೆ ಹೊಂದುವವರು ಶೇ.6.9ರಷ್ಟು ಬಡ್ಡಿಯನ್ನು ಪಡೆಯಬಹುದು. ಜಂಟಿಯಾಗಿ ಖಾತೆ ತೆರೆಯಬಹುದು 18 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ಪ್ರಜೆ ಕಿಸಾನ್ ವಿಕಾಸ್ ಪ್ರಮಾಣ ಪತ್ರ ಪಡೆಯಬಹುದು. ಇಬ್ಬರು ವಯಸ್ಕರು ಜಂಟಿಯಾಗಿ ಮಾಡಿಸಬಹುದು. ಜತೆಗೆ 18 ವರ್ಷಕ್ಕಿಂತ ಕೆಳ ಹರೆಯದವರ ಪರವಾಗಿ ಹೆತ್ತವರು ಅಥವಾ ಪೋಷಕರು ಅದರ ಜವಾಬ್ದಾರರಾಗಿರುತ್ತಾರೆ. ಕನಿಷ್ಠ 1 ಸಾವಿರ ಹೂಡಿಕೆ
ಇದರಲ್ಲಿ ಕನಿಷ್ಠ 1,000 ರೂ.ಗಳಿಂದ ಎಷ್ಟಾದರೂ ಹಣ ಉಳಿತಾಯ ಮಾಡಬಹುದು. ಗರಿಷ್ಠ ಮೊತ್ತಕ್ಕೆ ಮಿತಿ ಇಲ್ಲ. ಜತೆಗೆ ಹೂಡಿಕೆ ಮಾಡಿದ ಮೊತ್ತ ಮೆಚ್ಯುರಿಟಿಗೆ ಬರಲು 10 ವರ್ಷ 4 (124)ತಿಂಗಳುಗಳು ಬೇಕಾಗಿದ್ದು , ಅಗತ್ಯಬಿದ್ದರೆ ಯೋಜನೆ ಪ್ರಾರಂಭಿಸಿದ ದಿನಾಂಕದಿಂದ ಎರಡು ಅಥವಾ ಒಂದೂವರೆ ವರ್ಷದಲ್ಲಿ ಹಣ ಹಿಂಪಡೆಯಬಹುದು. ಇದಕ್ಕೆ ನಾಮ ನಿರ್ದೇಶನ ಮಾಡುವ ಆಯ್ಕೆ ಇದ್ದು, ವ್ಯಕ್ತಿಯೊಬ್ಬರು ಕುಟುಂಬದ ಇತರ ವ್ಯಕ್ತಿಗಳಿಗೆ ಕೂಡ ನಾಮ ನಿರ್ದೇಶನ ಮಾಡಬಹುದಾಗಿದೆ.