ಕಿರಿಕ್ ಪಾರ್ಟಿ ನಿರ್ದೇಶಕ ರಿಷಭ್ ಶೆಟ್ಟಿಗೆ ಸುದೀಪ್ ಆಹ್ವಾನ
“ಕಿರಿಕ್ ಪಾರ್ಟಿ’ ಚಿತ್ರವನ್ನು ನೋಡಿ ಖುಷಿಯಾಗಿ ರುವ ನಟ ಸುದೀಪ್, ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಕರೆದು ಒಂದು ಸಿನಿಮಾ ಮಾಡುವುದಕ್ಕೆ ಹೇಳಿದ್ದಾರೆ. ಈ ಚಿತ್ರವನ್ನು ಎಸ್.ಆರ್.ವಿ ಪ್ರೊಡಕ್ಷನ್ಸ್ ನಡಿ ರಘುನಾಥ್ ನಿರ್ಮಿಸುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ ಚಿತ್ರ ಪ್ರಾರಂಭವಾಗಲಿದೆ.
ಅಷ್ಟರಲ್ಲಿ ರಿಷಬ್ ಶೆಟ್ಟಿ ಇನ್ನೂ ಒಂದು ಚಿತ್ರ ನಿರ್ದೇಶಿಸಲಿದ್ದಾರೆ. “ಕಿರಿಕ್ ಪಾರ್ಟಿ’ ಚಿತ್ರದ ನಂತರ ತಾವೊಂದು ಮಕ್ಕಳ ಚಿತ್ರ ಮಾಡುವುದಾಗಿ ರಿಷಬ್ ಶೆಟ್ಟಿ ಈ ಹಿಂದೆಯೇ ಹೇಳಿಕೊಂಡಿದ್ದರು. ಅದಕ್ಕೆ ಸರಿಯಾಗಿ, ಅವರು ಈಗ ಆ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಹೆಸರೇನು ಗೊತ್ತಾ? “ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು, ಕೊಡುಗೆ: ರಾಮಣ್ಣ ರೈ’. ಹೆಸರು ವಿಚಿತ್ರವಾಗಿದೆಯೋ ಅಥವಾ ಮಜವಾಗಿದೆಯೋ ಎಂದು ಓದುಗರೇ ತೀರ್ಮಾನಿಸಬೇಕು. ಹೆಸರಿಗೆ ತಕ್ಕಂತೆ ಕನ್ನಡ ಶಾಲೆಗಳ ಬಗ್ಗೆ ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ ರಿಷಬ್.
ಕಾಸರಗೋಡಿನಲ್ಲಿ ಕನ್ನಡ ಶಾಲೆ ಎಂದರೆ, ಕಥೆ ಏನಿರಬಹುದು ಎಂಬ ಯೋಚನೆ ಒಂದು ಕ್ಷಣ ಬರಬಹುದು. ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿರೋದನ್ನು ಸಂಪೂರ್ಣ ಹಾಸ್ಯಮಯವಾಗಿ ಹೇಳುವುದಕ್ಕೆ ಹೊರಟಿದ್ದಾರಂತೆ ರಿಷಬ್. ಅದರಲ್ಲೂ ಕಾಸರಗೋಡು ಹಿನ್ನೆಲೆಯಲ್ಲಿ ಕಥೆ ಸಾಗುತ್ತದಂತೆ. “ಸರಿಯಾಗಿ ಹೇಳಬೇಕೆಂದರೆ, ಇದು “ಕಿರಿಕ್ ಪಾರ್ಟಿ’ಯ ಮಕ್ಕಳ ವರ್ಷನ್ ಎಂದರೆ ತಪ್ಪಿಲ್ಲ. ಸಂಪೂರ್ಣ ಹಾಸ್ಯಮಯವಾಗಿರುತ್ತದೆ. “ಡ್ರಾಮಾ ಜೂನಿಯರ್ಸ್’ ಮಕ್ಕಳನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಬೇಕೆಂದಿದ್ದೇನೆ. ಅನಂತ್ ನಾಗ್, ಅಚ್ಯುತ್ ಕುಮಾರ್ ಮುಂತಾದ ಹಿರಿಯರು ಇದ್ದರೆ ಚೆನ್ನ. ಸದ್ಯಕ್ಕೆ ಯಾರನ್ನೂ ಕೇಳಿಲ್ಲ. ಕಥೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಚಿತ್ರವನ್ನು ಎರಡು ದೊಡ್ಡ ನಿರ್ಮಾಣ ಸಂಸ್ಥೆಗಳ ಜೊತೆಗೆ ಸೇರಿ ಮಾಡುತ್ತಿದ್ದೀನಿ. ಸದ್ಯದಲ್ಲೇ ಎಲ್ಲಾ ವಿಷಯಗಳು ಹೊರಬೀಳಲಿವೆ’ ಎನ್ನುತ್ತಾರೆ ರಿಷಬ್.
ಇನ್ನು ಸುದೀಪ್ ಚಿತ್ರದ ಬಗ್ಗೆ ಹೇಳಬೇಕಾದರೆ, ಅದು ಪ್ರಾರಂಭವಾಗುವುದೇನಿದ್ದರೂಈ ವರ್ಷದ ಕೊನೆಗೆ “ಅದೊಂದು ಫಿàಲ್ ಗುಡ್ ಫಿಲ್ಮ್ ಆಗಿರುತ್ತದೆ. ಒಂದು ಮನರಂಜನಾತ್ಮಕ ಚಿತ್ರವಾಗಬೇಕೆಂಬ ದೃಷ್ಟಿಯಲ್ಲಿ ಕೆಲಸ ಮಾಡುತ್ತಿದ್ದೇವೆ.
ಸುದೀಪ್ ಸಾರ್ ಮೊದಲು “ದಿ ವಿಲನ್’ ಚಿತ್ರದಲ್ಲಿ ನಟಿಸಲಿದ್ದಾರೆ. ಅದು ಮುಗಿದ ನಂತರ “ಥಗ್ಸ್ ಆಫ್ ಮಾಲ್ಗುಡಿ’ ಚಿತ್ರ ಶುರುವಾಗಲಿದೆ. ಅದು ಮುಗಿಯುತ್ತಿದ್ದಂತೆ ನಮ್ಮ ಚಿತ್ರ ಶುರುವಾಗಲಿದೆ. ರಘುನಾಥ್ ಅವರು ಈ ಚಿತ್ರವನ್ನು ನಿರ್ಮಿಸಲಿದ್ದಾರೆ’ ಎನ್ನುತ್ತಾರೆ ರಿಷಬ್.