Advertisement

777 ಚಾರ್ಲಿ ಚಿತ್ರ ವಿಮರ್ಶೆ: ಭಾವ-ಜೀವದ ನವನವೀನ ಪಯಣ

08:36 AM Jun 10, 2022 | Team Udayavani |

ಕೆಲವು ಸಿನಿಮಾಗಳು ಆರಂಭದಿಂದಲೂ ಪ್ರೇಕ್ಷಕರನ್ನು ತನ್ನ ಜೊತೆಯಲ್ಲೇ ಹೆಜ್ಜೆ ಹಾಕಿಸುತ್ತವೆ. ಆ ಸಿನಿಮಾದ ಮೂಲ ಆಶಯಕ್ಕೆ ತಕ್ಕಂತೆ ಪ್ರೇಕ್ಷಕನ ಮನಸ್ಸು ಕೂಡಾ ತುಡಿಯುತ್ತಾ ಸಾಗುತ್ತದೆ. ಆ ತರಹದ ಒಂದು ಭಾವನೆಯೊಂದಿಗೆ ಸಾಗುವ ಸಿನಿಮಾ “777 ಚಾರ್ಲಿ’.

Advertisement

ಚಿತ್ರರಂಗದ ರೆಗ್ಯುಲರ್‌ ಸಿನಿಮಾಗಳ ನಡುವೆ “777 ಚಾರ್ಲಿ’ ಭಿನ್ನವಾಗಿ ನಿಲ್ಲುತ್ತದೆ ಎಂದರೆ ಅದಕ್ಕೆ ಹಲವು ಕಾರಣಗಳಿವೆ. ಮುಖ್ಯವಾಗಿ ಕಥೆಯ ಆಯ್ಕೆ ಹಾಗೂ ಅದರ ನಿರೂಪಣೆ. ಒಂದು ಎಮೋಶನಲ್‌ ಜರ್ನಿ ಸಬ್ಜೆಕ್ಟ್ ಅನ್ನು ಆಯ್ಕೆ ಮಾಡಿಕೊಂಡಿರುವ ತಂಡ ಅದನ್ನು ಅಷ್ಟೇ ಅಚ್ಚುಕಟ್ಟಾಗಿ ಕಟ್ಟಿಕೊಡುವ ಮೂಲಕ ಫ್ಯಾಮಿಲಿ ಎಂಟರ್‌ಟೈನರ್‌ ಆಗಿ ರಂಜಿಸುತ್ತಿದೆ.

ಧರ್ಮ(ನಾಯಕ)ನೊಳಗೆ ಮಡುಗಟ್ಟಿರುವ ನೋವು ಒಂದು ಕಡೆಯಾದರೆ, ಚಾರ್ಲಿ(ನಾಯಿ)ಯ ತರಲೆ, ತುಂಟತನ ಮತ್ತೂಂದು ಕಡೆ… ಈ ಎರಡೂ ಅಂಶಗಳನ್ನು ನಿರ್ದೇಶಕ ಕಿರಣ್‌ ರಾಜ್‌ ಯಾವುದೇ ಗೊಂದಲಗಳಿಲ್ಲದಂತೆ ಕಟ್ಟಿಕೊಟ್ಟಿದ್ದಾರೆ. ಗಂಭೀರ ಸ್ವಭಾವದ, ನೋವು ನುಂಗಿ ಬದುಕುತ್ತಿರುವ ಧರ್ಮನ ಜೀವನದಲ್ಲಿ ಚಾರ್ಲಿಯ ಆಗಮನದ ನಂತರ ಆಗುವ ಬದಲಾವಣೆ ಹಾಗೂ ಧರ್ಮ ಸಿಕ್ಕಿದ ನಂತರ ಚಾರ್ಲಿಯಲ್ಲಾಗುವ “ಬದಲಾವಣೆ’ ಏನೆಂಬುದನ್ನು ನೋಡುವ ಕುತೂಹಲ ನಿಮಗಿದ್ದರೆ ನೀವು “777 ಚಾರ್ಲಿ’ ಚಿತ್ರ ನೋಡಬಹುದು.

ಇದನ್ನೂ ಓದಿ:ಐಪಿಎಲ್‌ ಪಂದ್ಯಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ: ಬಿಸಿಸಿಐ ಯೋಜನೆ 

ಒಂದು ಎಮೋಶನಲ್‌ ಜರ್ನಿ ಸಬ್ಜೆಕ್ಟ್ ಅನ್ನು ಸುಲಭವಾಗಿ ಕಟ್ಟಿಕೊಡಬಹುದು. ಆದರೆ, “777 ಚಾರ್ಲಿ’ ತಂಡಕ್ಕಿದ್ದ ಸವಾಲು ಶ್ವಾನ. ಶ್ವಾನ ಹಾಗೂ ಮನುಷ್ಯನ ನಡುವಿನ ಆತ್ಮೀಯತೆ, ಭಾವನಾತ್ಮಕ ಸಂಬಂಧ ಸೇರಿದಂತೆ ಅನೇಕ ಸೂಕ್ಷ್ಮ ಅಂಶಗಳನ್ನು ಕಟ್ಟಿಕೊಡುವ ಸವಾಲು ಚಿತ್ರತಂಡಕ್ಕಿತ್ತು. ಆದರೆ, ಆ ಸವಾಲನ್ನು ಯಶಸ್ವಿಯಾಗಿ ಗೆದ್ದಿರುವುದು ಇಡೀ ಚಿತ್ರದುದ್ದಕ್ಕೂ ಕಂಡುಬರುತ್ತದೆ. ನಾಯಿಯನ್ನು ಪಳಗಿಸಿ, ಕಥೆಗೆ ಪೂರಕವಾಗಿ ನಟಿಸುವಂತೆ ಮಾಡಿರುವ ಚಿತ್ರತಂಡದ ಪರಿಶ್ರಮವನ್ನು ಮೆಚ್ಚತಕ್ಕದ್ದು.

Advertisement

ಮೊದಲರ್ಧ ನಾಯಕ ನಟ ಹಾಗೂ ಇತರ ಪಾತ್ರ ಪರಿಚಯದ ಜೊತೆಗೆ ಸಾಗುವ ಸಿನಿಮಾದಲ್ಲಿ ನಿಮಗೆ ಕಚಗುಳಿ ಇಡುವ ಸಂಭಾಷಣೆಗಳಿಗೇನೂ ಕೊರತೆಯಿಲ್ಲ. ಧರ್ಮ ಹಾಗೂ ಚಾರ್ಲಿ ತುಂಟಾಟಗಳೇ ನಗುತರಿಸುತ್ತವೆ. ಹಾಗಂತ ಈ ನಗುವಿಗಷ್ಟೇ ಸಿನಿಮಾದ ಕಥೆ ಸೀಮಿತವಾಗಿಲ್ಲ. ನಗುವಿನ ಹಿಂದೆಯೇ ಭಾವನ ಲೋಕವೊಂದು ತೆರೆದುಕೊಳ್ಳುತ್ತದೆ. ದ್ವಿತೀಯಾರ್ಧದಲ್ಲಿ ಆರಂಭವಾಗುವ ಚಾರ್ಲಿಯ ಜರ್ನಿಯಲ್ಲಿ ನಿರ್ದೇಶಕರು, ಪ್ರೇಕ್ಷಕರ ಕಣ್ಣಂಚು ಒದ್ದೆ ಮಾಡುತ್ತಲೇ ಕ್ಲೈಮ್ಯಾಕ್ಸ್‌ವರೆಗೆ ಕರೆದುಕೊಂಡು ಹೋಗಿ ಅಲ್ಲಿ ಕಣ್ಣೀರ ಕಟ್ಟೆ ಒಡೆಯುವಂತೆ ಮಾಡಿದ್ದಾರೆ. ಆ ಮಟ್ಟಿಗೆ ಅವರು ಎಮೋಶನಲ್‌ ದೃಶ್ಯಗಳನ್ನು ಸಣ್ಣ ಸಣ್ಣ ಟ್ವಿಸ್ಟ್‌ ನೊಂದಿಗೆ ಕಟ್ಟಿಕೊಟ್ಟಿದ್ದಾರೆ.

ಹೆಚ್ಚು ಪಾತ್ರಗಳಿಲ್ಲದೇ, ಅತಿಯಾದ ಆರ್ಭಟ, ಅರಚಾಟದ ಡೈಲಾಗ್‌ಗಳಿಲ್ಲದೇ ಒಂದು ಸಿನಿಮಾವನ್ನು ಹೇಗೆ ನೀಟಾಗಿ ಕಟ್ಟಿಕೊಡಬಹುದು ಎಂಬುದಕ್ಕೆ “777 ಚಾರ್ಲಿ’ ಒಂದು ಒಳ್ಳೆಯ ಉದಾಹರಣೆ. ಚಿತ್ರದ ಕಂಟೆಂಟ್‌ ಮಾತನಾಡಿದರೆ ಮಿಕ್ಕವರ ಮಾತಿನ ಅಗತ್ಯವಿಲ್ಲ. ಅದಿಲ್ಲಿ ಆಗಿದೆ ಕೂಡಾ. ಅದು ಈ ಸಿನಿಮಾದ ಪ್ಲಸ್‌ ಕೂಡಾ. ಚಿತ್ರದಲ್ಲಿ ಬರುವ ನಾಯಕನ ಬಾಲ್ಯದ ಫ್ಲ್ಯಾಶ್‌ಬ್ಯಾಕ್‌ ಎಪಿಸೋಡ್‌ ಸೇರಿದಂತೆ ಯಾವುದನ್ನೂ ಅತಿಯಾಗಿ ವಿಜೃಂಭಿಸದ ಕಾರಣ ಸಿನಿಮಾ ಸರಾಗವಾಗಿ ಸಾಗುತ್ತದೆ.

ನಾಯಕ ರಕ್ಷಿತ್‌ ಶೆಟ್ಟಿ ಅವರ ಕೆರಿಯರ್‌ನಲ್ಲಿ ಇದು ವಿಭಿನ್ನವಾದ ಪಾತ್ರ. ಅದನ್ನು ಅವರು ಅಷ್ಟೇ ನೀಟಾಗಿ ನಿರ್ವಹಿಸಿದ್ದಾರೆ. ನೋವು, ಸಣ್ಣ ಖುಷಿ, ಚಡಪಡಿಕೆ… ಎಲ್ಲಾ ಭಾವನೆಗಳು ತುಂಬಿದ ಪಾತ್ರಕ್ಕೆ ರಕ್ಷಿತ್‌ ಜೀವ ತುಂಬಿದ್ದಾರೆ. ಇಡೀ ಸಿನಿಮಾದ ಹೈಲೈಟ್‌ ಎಂದರೆ ಚಾರ್ಲಿಯ ನಟನೆ. ಸಣ್ಣ ಸಣ್ಣ ಅಂಶಗಳಿಗೂ ಚಾರ್ಲಿ ಪ್ರತಿಕ್ರಿಯಿಸುತ್ತಾ, ಪ್ರೇಕ್ಷಕರ ಮೊಗದಲ್ಲಿ ಖುಷಿ, ದುಃಖ ಎಲ್ಲದಕ್ಕೂ ಕಾರಣಳಾಗುತ್ತಾಳೆ. ಅಷ್ಟರ ಮಟ್ಟಿಗೆ ಆ ಶ್ವಾನವನ್ನು ಪಳಗಿಸಲಾಗಿದೆ.

ನಾಯಕಿ ಸಂಗೀತಾ ಶೃಂಗೇರಿ ಇದ್ದಷ್ಟು ಹೊತ್ತು ಚೆಂದ. ನಾಯಕಿ ಎಂದಾಕ್ಷಣ ಸಾಮಾನ್ಯವಾಗಿ ಬರುವ ಕಲ್ಪನೆಗಳಿಂದ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಶುವೈದ್ಯರಾಗಿ ಕಾಣಿಸಿಕೊಂಡಿರುವ ರಾಜ್‌ ಬಿ ಶೆಟ್ಟಿ ತಮ್ಮ ಮ್ಯಾನರಿಸಂನಿಂದ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿನ ಹಾಡು, ಹಿನ್ನೆಲೆ ಸಂಗೀತ ಚಾರ್ಲಿಯ ಹಾದಿಯನ್ನು ಮತ್ತಷ್ಟು ಸುಂದರವಾಗಿಸಿದೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next