ಉಪ್ಪಾಲಂ(ಪುದುಚೇರಿ):ಮಹಾತ್ಮಗಾಂಧಿಯ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ವೇದಿಕೆಯಲ್ಲಿಯೇ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹಾಗೂ ಎಐಎಡಿಎಂಕೆ ಶಾಸಕ ಅನ್ಬಾಲಗನ್ ನಡುವೆ ಮಾತಿನ ಚಕಮಕಿ ನಡೆದು, ಕೊನೆಗೆ ಶಾಸಕ ವೇದಿಕೆಯಿಂದಲೇ ಕೆಳಗೆ ಇಳಿದು ಹೋದ ಪ್ರಸಂಗ ಮಂಗಳವಾರ ನಡೆಯಿತು.
ಏನಿದು ಜಟಾಪಟಿ?
ಪುದುಚೇರಿಯ ಉಪ್ಪಾಲಂನಲ್ಲಿ ಗಾಂಧಿ ಜಯಂತಿಯ ಕಾರ್ಯಕ್ರಮ ನಡೆಯುತ್ತಿತ್ತು. ವೇದಿಕೆಯಲ್ಲಿ ರಾಜ್ಯಪಾಲರಾದ ಕಿರಣ್ ಬೇಡಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅನ್ಬಾಲಗನ್, ಬೇಡಿ ಅವರ ಆಡಳಿತದಿಂದಾಗಿ ನನ್ನ ಕ್ಷೇತ್ರದಲ್ಲಿ ಯಾವ ಕೆಲಸವೂ ಆಗಿಲ್ಲ ಎಂದು ಆರೋಪಿಸಿದ್ದರು.
ಅದಾದ ಬಳಿಕ ತಾನು ಕ್ಷೇತ್ರಕ್ಕಾಗಿ ಏನೆಲ್ಲಾ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದೇನೆ ಎಂಬ ಪಟ್ಟಿಯನ್ನೂ ಓದಿದರು..ಆದರೆ ಯಾವ ಕೆಲಸವೂ ಆರಂಭವಾಗಿಲ್ಲ ಎಂದು ದೂರಿದರು. ತನ್ನ ವಿರುದ್ಧದ ಆಕ್ಷೇಪಣೆ ಕೇಳಿಸಿಕೊಂಡ ಕಿರಣ್ ಬೇಡಿ ಶಾಸಕರ ಬಳಿ ಹೋಗಿ ನಿಮ್ಮ ಕ್ಷೇತ್ರದ ಕೆಲಸ ಆಗುತ್ತೆ ಎಂದು ಭರವಸೆ ನೀಡಿ ಸಮಾಧಾನ ಪಡಿಸಲು ಯತ್ನಿಸಿದರು. ಆದರೆ ಶಾಸಕ ಅನ್ಬಾಲಗನ್ ಭಾಷಣ ನಿಲ್ಲಿಸಲು ನಿರಾಕರಿಸಿದರು. ನಂತರ ಮತ್ತೆ ವಾಗ್ದಾಳಿ ಮುಂದುವರಿಸಿದ್ದರು.
ಏತನ್ಮಧ್ಯೆ ಭಾಷಣ ನಿಲ್ಲಿಸುವ ಲಕ್ಷಣ ಕಾಣಿಸದಿದ್ದಾಗ ಗವರ್ನರ್ ಬೇಡಿ ಅವರು ಅಧಿಕಾರಿಗಳನ್ನು ಕರೆದು ಮೈಕ್ ನ ಸ್ವಿಚ್ ಆಫ್ ಮಾಡುವಂತೆ ಸೂಚಿಸಿದ್ದರು. ಇದರಿಂದ ಆಕ್ರೋಶಗೊಂಡ ಶಾಸಕ ಬೇಡಿ ವಿರುದ್ಧ ವೇದಿಕೆ ಮೇಲೆಯೇ ಕೂಗಾಡಲು ಆರಂಭಿಸಿಬಿಟ್ಟಿದ್ದರು!
ಶಾಸಕ ಹಾಗೂ ಕಿರಣ್ ಬೇಡಿ ನಡುವಿನ ವಾಕ್ಸಮರದ ವಿಡಿಯೋ ತುಣುಕಿನಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ, ಶಾಸಕ ಅನ್ಬಾಲಗನ್ ಗೆ ವೇದಿಕೆಯಿಂದ ಇಳಿದು ಹೋಗುವಂತೆ ಖಡಕ್ ಸೂಚನೆ ಕೊಡುತ್ತಿರುವುದು ದಾಖಲಾಗಿದೆ. ಆದರೆ ಮತ್ತೆ, ಮತ್ತೆ ಹಿಂದಕ್ಕೆ ಬಂದು ಆಕ್ಷೇಪ ಎತ್ತುತ್ತಿದ್ದರೆ, ಬೇಡಿ ಮೊದಲು ಸ್ಟೇಜ್ ನಿಂದ ಕೆಳಗೆ ಇಳಿಯಿರಿ ಎಂದು ಪಟ್ಟು ಹಿಡಿದಿರುವುದು ವಿಡಿಯೋದಲ್ಲಿದೆ. ಏತನ್ಮಧ್ಯೆ ಶಾಸಕರಿಗೆ ಇಬ್ಬರು ಸಮಾಧಾನಪಡಿಸಲು ಬಂದರೂ ಅದಕ್ಕೆ ಸೊಪ್ಪು ಹಾಕದೆ ಕೊನೆಗೆ ತಾನೇ ವೇದಿಕೆ ಇಳಿದು ಹೋದ ಘಟನೆ ನಡೆಯಿತು.