Advertisement

ಸರಕಾರಿ ಜಾಗವಿದ್ದರೂ ನಿವೇಶನಕ್ಕಾಗಿ ಅಲೆದಾಟ ತಪ್ಪಿಲ್ಲ!

11:16 AM Jul 19, 2022 | Team Udayavani |

ಕಿನ್ನಿಗೋಳಿ: ಮೂಲ್ಕಿ ತಾಲೂಕಿನ ಏಳಿಂಜೆ ಗ್ರಾಮವು ಶಾಂಭವಿ ನದಿ ಪಾತ್ರದಲ್ಲಿದ್ದು, ಹಚ್ಚ ಹಸುರಿನಿಂದ ನಳನಳಿಸುತ್ತಿದೆ. ಐಕಳ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಇಲ್ಲಿ ಅಡಿಕೆ, ತೆಂಗು ಇದ್ದರೂ ಭತ್ತವೇ ಪ್ರಧಾನ ಕೃಷಿ. ಕೃಷಿಯ ಹಿಂದೆ ನೂರಾರು ಮಂದಿ ಕೃಷಿ ಕಾರ್ಮಿಕರಿದ್ದಾರೆ. ಆದರೆ ಇವರಿಗೆ ವಸತಿಯದ್ದೇ ಸಮಸ್ಯೆಯಾಗಿದೆ.

Advertisement

ಗ್ರಾಮದಲ್ಲಿ ನಿವೇಶನ ರಹಿತರಿಗೆ ವಸತಿ ಯೋಜನೆಗಾಗಿ 4 ಎಕರೆ ಸರಕಾರಿ ಭೂಮಿಯನ್ನು ಮೀಸರಿಸಿದ್ದರೂ ಅದು ಫ‌ಲಾನುಭವಿಗಳ ಕೈಸೇರಿಲ್ಲ. ನಾಲ್ಕು ವರ್ಷದ ಹಿಂದೆಯೇ ಇದಕ್ಕೆ ಯೋಜನೆ ರೂಪಿಸಿ ಸರಕಾರದಿಂದ ಮಂಜೂರಾತಿಗೆ ಪ್ರಯತ್ನ ನಡೆಸುತ್ತಿದ್ದರೂ ಯಾವುದೇ ಫ‌ಲ ಸಿಕ್ಕಿಲ್ಲ.

ತಾಂತ್ರಿಕ ಕಾರಣ ನೀಡಿ ಯೋಜನೆ ಬಾಕಿ ಇರಿಸಲಾಗಿದೆ. ಅರ್ಜಿ ಹಾಕಿದವರಂತೂ ಪ್ರತಿನಿತ್ಯ ಎಂಬಂತೆ ಓಡಾಡುವುದೇ ಆಗಿದೆ. ಇದಕ್ಕೊಂದು ಪರಿಹಾರ ಸಿಕ್ಕಿದರೆ ಹಲವಾರು ಮಂದಿಯ ಪ್ರಮುಖ ಸಮಸ್ಯೆಯೊಂದು ಬಗೆಹರಿಯಲಿದೆ.

ದಶಕದ ಸಮಸ್ಯೆ

ಏಳಿಂಜೆ ಗ್ರಾಮದ ಹೆಚ್ಚಿನ ಭಾಗದಲ್ಲಿ ಕೃಷಿ ಕಾರ್ಯ ನಡೆಯುತ್ತಿದೆ. ಶಾಂಭವಿ ನದಿಗೆ ಸೇರುವ ಚಿಕ್ಕ ತೊರೆ, ತೋಡುಗಳು ಇದ್ದು ಹೆಚ್ಚಿನವುಗಳಲ್ಲಿ ಹೂಳು ತುಂಬಿದೆ. ಇಲ್ಲಿನ ಬಾಲಕಟ್ಟ ಕಿಂಡಿಅಣೆಕಟ್ಟು ನಾದುರಸ್ತಿಯಲ್ಲಿದೆ. ಇದನ್ನು ಸರಿಮಾಡಿ ಎತ್ತರಿಸಿ, ತಡೆಗೋಡೆ ನಿರ್ಮಿಸಿದರೆ ಇನ್ನಷ್ಟು ಪ್ರದೇಶದ ಜನರು ನೀರಿನ ಆಶ್ರಯ ಪಡೆದು ಕೃಷಿ ನಡೆಸಲು ಅನುಕೂಲಕರವಾಗಲಿದೆ.

Advertisement

ತುರ್ತಾಗಿ ಆಗಬೇಕಾಗಿರುವುದು

„ ಏಳಿಂಜೆ ಗ್ರಾಮದಲ್ಲಿ ಸಾರ್ವಜನಿಕ ರುದ್ರಭೂಮಿ ಇಲ್ಲ ಈ ಹಿಂದೆ ಜಾಗ ಮಾಂಜೂರು ಆಗಿದ್ದರೂ ಅನುಷ್ಠಾನ ಗೊಂಡಿಲ್ಲ.

„ಏಳಿಂಜೆ ಕೊಲ್ಯೂಟ್ಟುವಿನಿಂದ ತಿಟ್ಟಿಂಜೆ ಮೂಲಕವಾಗಿ ಆಗಿಂದಾಕಾಡು ಬಸ್‌ನಿಲ್ದಾಣ ಸಂಪರ್ಕಿಸುವ ರಸ್ತೆ ಅತೀ ಅಗತ್ಯವಾಗಿ ನಿರ್ಮಾಣವಾಗಬೇಕಾಗಿದೆ.

„ ಐಕಳ ತಾಮಣಿ ಗುತ್ತುವಿನಿಂದ ಏಳಿಂಜೆ ಕಿನ್ನಿ ಮುಂಡಾ ಮೂಲಕ ಹಾದು ಹೋಗುವ ಶಾಂಭವಿ ಸಂರ್ಪಕಿಸುವ ಸಣ್ಣ ನದಿಯಲ್ಲಿ ಹೂಳು ಎತ್ತದೆ ಇರುವುದರಿಂದ ನೆರೆ ಹಾವಳಿ ಜಾಸ್ತಿಯಾಗಿದೆ ಹಾಗೂ ನದಿಯಲ್ಲಿ ಹೆಚ್ಚು ಮರಳು ಹೂಳು ಇರುವುದರಿಂದ ಅಣೆಕಟ್ಟುವಿನಲ್ಲಿ ನೀರು ಶೇಖರಣೆ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ.

„ ಪಟ್ಟೆ ಕ್ರಾಸ್‌ ಬಳಿ ಶೌಚಾಲಯ ಅತೀ ಅಗತ್ಯವಾಗಿ ನಿರ್ಮಾಣವಾಗಬೇಕು ಹಾಗೂ ಅಲ್ಲಿನ ಪ್ರದೇಶದಲ್ಲಿ ಸಿಸಿ ಕೆಮರಾ ಅಳವಡಿಸಬೇಕಾಗಿದೆ.

ಗ್ರಾಮ ವಿಶೇಷ

ಸುಮಾರು 800 ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಕಾಡು ಕೋಣ ಹಾಗೂ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದರಿಂದ ಅದನ್ನು ಓಡಿಸುವ ಸಲುವಾಗಿ ಏಳಿ (ಎದ್ದೇಳಿ)ಎಂಬ ಪದ ವಾಡಿಕೆ ಬಂತು. ಬಳಿಕ ಅದೇ ಏಳಿಂಜೆ ಆಗಿ ಪ್ರಚಲಿತವಾಯಿತು ಎನ್ನಲಾಗುತ್ತಿದೆ. ಇಲ್ಲಿನ ಶ್ರೀ ಲಕ್ಷ್ಮೀ ಜನಾರ್ದನ ಮಹಾಗಣಪತಿ ದೇವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ.

ಆದಾಯ ಕೊರತೆ: ಐಕಳ, ಏಳಿಂಜೆ ಗ್ರಾಮಗಳು ಗ್ರಾಮೀಣ ಪ್ರದೇಶವಾಗಿರುವುದರಿಂದ ಆದಾಯದ ಕೊರತೆ ಇದ್ದು, ಸರಕಾರದ ಅನುದಾನದ ಮೂಲಕವೇ ಗ್ರಾಮದ ಅಭಿವೃದ್ಧಿ ಕೆಲಸಗಳು ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಶಾಸಕರ ಮತ್ತು ಜಿ.ಪಂ. ಅನುದಾನಕ್ಕೆ ಬೇಡಿಕೆ ಇರಿಸಲಾಗಿದೆ. –ಸುಗುಣಾ ಪೂಜಾರ್ತಿ, ಅಧ್ಯಕ್ಷರು ಐಕಳ ಗ್ರಾಮ ಪಂಚಾಯತ್‌

ಕಾರ್ಯಪ್ರವೃತ್ತರಾಗಬೇಕು: ಏಳಿಂಜೆ ಗ್ರಾಮ ತೀರ ಗ್ರಾಮೀಣ ಪ್ರದೇಶವಾಗಿದ್ದು ಸರಕಾರಿ ಆಸ್ಪತ್ರೆ, ಪಶು ಆಸ್ಪತ್ರೆ, ಆರೋಗ್ಯ ಉಪ ಕೇಂದ್ರ ಯಾವುದೂ ಈ ಗ್ರಾಮದಲ್ಲಿ ಇಲ್ಲ ಅನುದಾನಿತ ಖಾಸಗಿ ಶಾಲೆ, ಅಂಚೆ ಕಚೇರಿ ಬಿಟ್ಟರೆ ಬೇರೆ ಸರಕಾರಿ ಕಚೇರಿಗಳೇ ಇಲ್ಲ. ಗ್ರಾಮೀಣ ಭಾಗದ ರಸ್ತೆಗಳು ಸಹಿತ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‌ ಮುತುವರ್ಜಿ ಮಾಡಬೇಕಾಗಿದೆ, ಉಪ ನದಿಗಳ, ತೋಡುಗಳ ಹೂಳು ಎತ್ತುವಿಕೆ, ನಿವೇಶನ ಹಂಚುವಿಕೆಯಲ್ಲಿ ಕಾರ್ಯಪ್ರವೃತ್ತರಾಗಬೇಕು. –ಸುಧಾಕರ್‌ ಸಾಲ್ಯಾನ್‌, ಕೃಷಿಕ  

-ರಘುನಾಥ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next