ಕಿನ್ನಿಗೋಳಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಶಾಲಾ ಮಕ್ಕಳಿಗೆ, ನಾಗರಿಕರಿಗೆ ತೊಂದರೆಯಾಗುತ್ತಿದೆ.
ಕಿನ್ನಿಗೋಳಿ ಬಸ್‌ನಿಲ್ದಾಣ, ಮೀನು ಮಾರುಕಟ್ಟೆ, ಉಲ್ಲಂಜೆ ಸಮೀಪದಲ್ಲಿ ನಾಯಿಗಳ ದಾಂಧಲೆ ಜೋರಾಗಿದೆ. ಕಳೆದ ಎರಡು ದಿನಗಳ ಹಿಂದೆ ಬಸ್‌ನಿಲ್ದಾಣದ ಪಕ್ಕ ಶಾಲಾ ಬಾಲಕನನ್ನು ಅಟ್ಟಾಟಿಸಿ, ಬಾಲಕ ಬಿದ್ದು ಗಾಯಗೊಂಡ ಘಟನೆ ನಡೆದಿದೆ.
ಉಲ್ಲಂಜೆಯಲ್ಲಿ ದ್ವಿಚಕ್ರ ವಾಹನವನ್ನು ಹಿಂಬಾಳಿಸಿಕೊಂಡು ಹೋಗಿ ವಾಹನಸವಾರ ಬಿದ್ದ ಘಟನೆ ನಡೆದಿದೆ. ಹಿರಿಯ ನಾಗರಿಕರ ತಿಂಡಿಯ ಚೀಲ, ಬೈಕ್ ನಲ್ಲಿ ಇರಿಸಿದ್ದ ಮೀನಿನ ಚೀಲ ಕಸಿದು ಪರಾರಿಯಾಗಿದ್ದು, ಬೈಕ್ ವಾರೀಸುದಾರ ಬಂದು ನೋಡಿದಾಗ ಮೀನು ಇಲ್ಲ, ಚೀಲವೂ ಇಲ್ಲ ಇಂತಹ ಘಟನೆ ದಿನನಿತ್ಯ ನಡೆಯುತ್ತಿದೆ. ಕಳೆದ 8 ತಿಂಗಳ ಹಿಂದೆ ಕಿನ್ನಿಗೋಳಿ ರಾಜರತ್ನಪುರ ಕಾಪಿಕಾಡಿನಲ್ಲಿ ಅಂಚೆ ಪೋಸ್ಟ್ ಮನ್ ಓರ್ವರಿಗೆ ನಾಯಿ ಅಟ್ಟಾಡಿಸಿ ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ನಾಗರಿಕರು ಪಟ್ಟಣ ಪಂ.ದೂರು ನೀಡಿದರೂ ಯಾವ ಪ್ರಯೋಜನವಾಗಿಲ್ಲ.
ಅಧಿಕಾರಿಗಳ ಕಾರುಬಾರು ಕಿನ್ನಿಗೋಳಿ ಪ. ಪಂ.ಆಗಿ 36 ತಿಂಗಳು ಆದರೂ ಬೇರೆ ಬೇರೆ ಕಾರಣಗಳಿಂದ ಚುನಾವಣೆ ನಡೆದಿಲ್ಲ. ನಾಗರಿಕರ ಸಣ್ಣ ಸಮಸ್ಯೆ ಸಮಸ್ಯೆಗೂ ಪರಿಹಾರ ದೊರೆಯುತ್ತಿಲ್ಲ. ಗ್ರಾ. ಪಂ.ಇರುವಾಗ ಸದಸ್ಯರು ತಕ್ಕ ಮಟ್ಟಿನ ಪರಿಹಾರ ಮಾಡುತ್ತಿದ್ದರು. ಆದರೇ ಈಗ ಎಲ್ಲ ಅಧಿಕಾರಿ ವರ್ಗದ ಕಾರುಬಾರು.
–ಮಹಮದ್ ಬಾಶಾ ಸಮಾಜಸೇವಕರು ಕಿನ್ನಿಗೋಳಿ
ಬಸ್‌ನಿಲ್ದಾಣದಲ್ಲಿ ದಿನನಿತ್ಯ ಸಂಜೆ, ಬೆಳಗಿನ ಹೊತ್ತು ಕುಡುಕರ ಕಾಟ ಜೋರಾಗಿದೆ. ಎರಡು ಜನ ಬಸ್ ನಿಲ್ದಾಣದ ದಂಡೆಯಲ್ಲಿ ಮಲಗಿದರೇ ಎರಡು ಜನ ಕೆಳಗೆ ಮಲಗುವುದು ಸಾಮಾನ್ಯವಾಗಿದೆ. ಬಸ್‌ನಿಲ್ದಾನ ಪೂರ್ತಿ ಮೂತ್ರ ಶಂಕೆ ವಾಸನೆ. ಜನರು ಬಸ್ ನಿಲ್ದಾಣಕ್ಕೆ ಹೋಗುವುದು ಬಿಟ್ಟು, ಅಂಗಡಿಯ ಮುಂಭಾಗದಲ್ಲಿ ನಿಲ್ಲುತ್ತಿದ್ದಾರೆ. ಕುಡುಕರ ನೃತ್ಯ ಇಲ್ಲಿನ ಜನರಿಗೆ ಪುಕ್ಕಟ್ಟೆ ಮನೋರಂಜನೆಯಾಗಿದೆ.