Advertisement

ಮುಂಬೈ-ಪಂಜಾಬ್‌: ಇತ್ತಂಡಗಳಿಗೂ “ಸೂಪರ್‌’ಸೋಲಿನ ಅನುಭವ, ಎದ್ದು ನಿಲ್ಲುವವರ್ಯಾರು?

01:37 PM Oct 01, 2020 | keerthan |

ಅಬುಧಾಬಿ: ಹಿಂದಿನ ಪಂದ್ಯದಲ್ಲಿ ಸೂಪರ್‌ ಸೋಲಿನ ಆಘಾತಕ್ಕೆ ಸಿಲುಕಿದ ಮುಂಬೈ ಇಂಡಿಯನ್ಸ್‌ ಮತ್ತು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಗಳು ಗುರುವಾರ ಅಬುಧಾಬಿಯಲ್ಲಿ ಎದ್ದು ನಿಲ್ಲಲು ಪ್ರಯತ್ನಿಸಲಿವೆ. ಈ ನಸೀಬು ಯಾವ ತಂಡಕ್ಕಿದೆ ಎಂಬುದು ಕ್ರಿಕೆಟ್‌ ಅಭಿಮಾನಿಗಳ ಕಾತರಕ್ಕೆ ಕಾರಣವಾಗಿದೆ.

Advertisement

ರೋಹಿತ್‌ ಶರ್ಮ ಮತ್ತು ಕೆ.ಎಲ್‌. ರಾಹುಲ್‌ ನೇತೃತ್ವದ ತಂಡಗಳೆರಡೂ ಒಂದೇ ದೋಣಿಯಲ್ಲಿ ಪಯಣಿಸುತ್ತಿವೆ. ಆಡಿದ 3 ಪಂದ್ಯಗಳಲ್ಲಿ ಒಂದನ್ನಷ್ಟೇ ಗೆದ್ದು ಎರಡರಲ್ಲಿ ಸೋತಿವೆ. ಎರಡೂ ತಂಡಗಳಿಗೆ ಟೈ ಅನುಭವವಾಗಿದೆ, ಸೂಪರ್‌ ಓವರ್‌ ಸೋಲಿನ ಬಿಸಿ ತಟ್ಟಿದೆ. ಹೀಗಾಗಿ ಇದೊಂದು ಬಿಗ್‌ ಮ್ಯಾಚ್‌ ಆಗುವ ಎಲ್ಲ ಸಾಧ್ಯತೆ ಇದೆ.

ಮುಂಬೈಗೆ ಬೌಲಿಂಗ್‌ ಚಿಂತೆ
ಹಾಲಿ ಚಾಂಪಿಯನ್‌ ಮುಂಬೈ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈಗೆ ಸೋತ ಬಳಿಕ ಕೆಕೆಆರ್‌ ವಿರುದ್ಧ ಗೆದ್ದು ಬಂತು. ಬಳಿಕ ಆರ್‌ಸಿಬಿ ವಿರುದ್ಧ ಸೂಪರ್‌ ಓವರ್‌ನಲ್ಲಿ ಎಡವಿತು. ಇನ್ನೊಂದೆಡೆ ಪಂಜಾಬ್‌ ಸೂಪರ್‌ ಓವರ್‌ನಲ್ಲಿ ಡೆಲ್ಲಿಗೆ ಸೋತು ಆರ್‌ಸಿಬಿಗೆ ಬಲವಾದ ಪ್ರಹಾರವಿಕ್ಕಿತು. ಬಳಿಕ ರಾಜಸ್ಥಾನ್‌ ಅಬ್ಬರಕ್ಕೆ ಥಂಡಾ ಹೊಡೆಯಿತು. ಇನ್ನೀಗ ಎರಡೂ ತಂಡಗಳಿಗೆ ಅಗ್ನಿಪರೀಕ್ಷೆ ಕಾದಿದೆ.

ಇದನ್ನೂ ಓದಿ:ಸೆರೆನಾವಿಲಿಯಮ್ಸ್‌ಗೆ ಹಿಮ್ಮಡಿ ನೋವು; ಫ್ರೆಂಚ್‌ ಓಪನ್‌ನಿಂದ  ಹೊರಕ್ಕೆ

ಬಲಾಬಲದ ಲೆಕ್ಕಾಚಾರದಲ್ಲಿ ಇದೊಂದು 50-50 ಪಂದ್ಯ. ಮುಂಬೈ ಬ್ಯಾಟಿಂಗ್‌ ಫೈರ್‌ ಪವರ್‌ ಹೊಂದಿರುವ ತಂಡ. ರೋಹಿತ್‌, ಡಿ ಕಾಕ್‌, ಸೂರ್ಯಕುಮಾರ್‌, ಇಶಾನ್‌ ಕಿಶನ್‌, ತಿವಾರಿ, ಪೊಲಾರ್ಡ್‌, ಪಾಂಡ್ಯ… ಹೀಗೆ ಬ್ಯಾಟಿಂಗ್‌ ಸರದಿ ಬೆಳೆಯುತ್ತದೆ. ಎಡಗೈ ಆಟಗಾರ ಇಶಾನ್‌ ಕಿಶನ್‌ ಬಂದ ಬಳಿಕವಂತೂ ಮುಂಬೈ ಬ್ಯಾಟಿಂಗ್‌ ಇನ್ನಷ್ಟು ಬಲಿಷ್ಠಗೊಂಡಿದೆ. ಇಲ್ಲವಾದರೆ ಆರ್‌ಸಿಬಿ ವಿರುದ್ಧ ಸೋಲುವಂಥ ಪಂದ್ಯವನ್ನು ಟೈ ಮಾಡಿಕೊಂಡು ಸೂಪರ್‌ ಓವರ್‌ಗೆ ಎಳೆದು ತರಲು ಮುಂಬೈಗೆ ಸಾಧ್ಯವಾಗುತ್ತಿರಲಿಲ್ಲ.

Advertisement

ಸದ್ಯ ಮುಂಬೈಗೆ ಚಿಂತೆ ಇರುವುದು ಬೌಲಿಂಗ್‌ ವಿಭಾಗದಲ್ಲಿ. ಯಾರ್ಕರ್‌ ಸ್ಪೆಷಲಿಸ್ಟ್‌ ಬುಮ್ರಾ ಅಗತ್ಯ ಸಂದರ್ಭಗಳಲ್ಲಿ ಲಯ ತಪ್ಪುತ್ತಿದ್ದಾರೆ. ಅವರ ಎಸೆತಗಳು ಈ ವರೆಗೆ ಅಪಾಯಕಾರಿಯಾಗಿ ಪರಿಣಮಿಸಿಲ್ಲ, ಮ್ಯಾಚ್‌ ವಿನ್ನರ್‌ ಎನಿಸಿಲ್ಲ. ಆದರೆ ಟ್ರೆಂಟ್‌ ಬೌಲ್ಟ್, ಜೇಮ್ಸ್‌ ಪ್ಯಾಟಿನ್ಸನ್‌ ದಾಳಿ ಸಾಕಷ್ಟು ಹರಿತವಾಗಿದೆ. ರಾಹುಲ್‌ ಚಹರ್‌ ಪರ್ವಾಗಿಲ್ಲ. ಆದರೆ ಪಂಜಾಬಿನ ಸ್ಫೋಟಕ ಬ್ಯಾಟ್ಸ್‌ ಮನ್‌ಗಳಿಗೆ ಕಡಿವಾಣ ಹಾಕಲು ಮುಂಬೈ ಬೌಲರ್ ಅಸಾಮಾನ್ಯ ಪ್ರದರ್ಶನ ನೀಡಬೇಕಾದುದು ಅನಿವಾರ್ಯ.

ಪಂಜಾಬ್‌ ಸ್ಫೋಟಕ ಆಟ


ಕೆ.ಎಲ್‌. ರಾಹುಲ್‌ ನಾಯಕತ್ವದಲ್ಲಿ ಹೊಸ ಜೋಶ್‌ ಪಡೆದಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಸ್ಫೋಟಕ ಆಟದ ಮೂಲಕ ಮಿಂಚು ಹರಿಸುತ್ತಿದೆ. ರಾಹುಲ್‌ ಜತೆಗೆ ಕರ್ನಾಟಕದ ಮತ್ತೂಬ್ಬ ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ಕೂಡ ಸಿಡಿಯಲಾರಂಭಿಸಿದ್ದಾರೆ. ಈ ಸರಣಿಯಲ್ಲಿ ಶತಕ ದಾಖಲಿಸಿದ ಹಿರಿಮೆ ಇವರಿಬ್ಬರದಾಗಿದೆ. ಅಕಸ್ಮಾತ್‌ ಇವರಿಬ್ಬರು ಬೇಗನೇ ಔಟಾದರೆ ಆಗ ಮ್ಯಾಕ್ಸ್‌ ವೆಲ್‌, ಪೂರಣ್‌, ನಾಯರ್‌, ನೀಶಮ್‌ ಅವರಿಂದ ತಂಡವನ್ನು ಮೇಲೆತ್ತಲು ಸಾಧ್ಯವೇ ಎಂಬುದೊಂದು ಪ್ರಶ್ನೆ. ಅಂದಹಾಗೆ ಕ್ರಿಸ್‌ ಗೇಲ್‌ ಇನ್ನೂ ರಂಗಪ್ರವೇಶ ಮಾಡಿಲ್ಲ ಎಂಬುದನ್ನು ಮರೆಯುವಂತಿಲ್ಲ.

ಪಂಜಾಬ್‌ ಬೌಲಿಂಗ್‌ ವಿಭಾಗ ವೈವಿಧ್ಯಮಯವಾಗಿದೆ. ಆದರೆ ಕಳೆದ ಪಂದ್ಯದಲ್ಲಿ ರಾಜಸ್ಥಾನ್‌ ಆಟಗಾರರು ಇವರ ಎಸೆತಗಳನ್ನು ಚೆಂಡಾಡಿದ ರೀತಿ ಕಂಡಾಗ ಪಂಜಾಬ್‌ ತನ್ನ ಬೌಲಿಂಗ್‌ ಕಾರ್ಯತಂತ್ರವನ್ನು ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಕಂಡುಬರುತ್ತದೆ. ಶೆಲ್ಡನ್‌ ಕಾಟ್ರೆಲ್‌ -ರಾಹುಲ್‌ ತೆವಾತಿಯಾ ಮುಖಾಮುಖೀಯನ್ನು ಮರೆಯಲುಂಟೆ?!

Advertisement

Udayavani is now on Telegram. Click here to join our channel and stay updated with the latest news.

Next