ಗಣೇಶ್ ಸಹೋದರ ಸೂರಜ್ ಕೃಷ್ಣ “ನಾನೇ ರಾಜ’ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಸ್ಪರ್ಶಿಸಿರುವುದು ಗೊತ್ತೇ ಇದೆ. ಈಗ ಆ ಚಿತ್ರ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ಸೂರಜ್‌ಕೃಷ್ಣ ಹಳ್ಳಿ ಹುಡುಗನಾಗಿ ಕಾಣಿಸಿಕೊಂಡಿದ್ದಾರಂತೆ. ಅದರಲ್ಲೂ ಅವರೊಬ್ಬ ಅಜ್ಜಿಯ ಮುದ್ದಿನ ಮೊಮ್ಮಗ. ಗೆಳೆಯರ ಪಾಲಿಗೆ ಅಚ್ಚುಮೆಚ್ಚು. ಮನೆಗೆ ಮಾರಿ, ಊರಿಗೆ ಉಪಕಾರಿಯಂಬಂತಹ ಪಾತ್ರದ ಮೂಲಕ ಒಂದಷ್ಟು ಭರವಸೆ ಮೂಡಿಸುತ್ತೇನೆಂಬ ವಿಶ್ವಾಸ ಅವರದು. ಅಷ್ಟಕ್ಕೂ ಅವರಿಗೆ ಈ ಸಿನಿಮಾ ಆಕಸ್ಮಿಕ ಎಂಟ್ರಿಯಂತೆ.
ಸಿಕ್ಕ ಅವಕಾಶವನ್ನು ಕಣ್ಣಿಗೆ ಒತ್ತಿಕೊಂಡು ಮಾಡಿರುವ ಸೂರಜ್‌ಕೃಷ್ಣ, “ನಾನೇ ರಾಜ’ ಒಂದೊಳ್ಳೆಯ ವೇದಿಕೆ ಕಲ್ಪಿಸಿಕೊಟ್ಟಿದೆ. ನಿಮ್ಮೆಲ್ಲರ ಬೆಂಬಲ ನನ್ನ ಮೇಲಿರಲಿ’ ಎಂಬ ಮನವಿ ಮಾಡುತ್ತಾರೆ. ಅಂದಹಾಗೆ, ಇತ್ತೀಚೆಗೆ ಚಿತ್ರದ ಹಾಡುಗಳನ್ನು ಹೊರತರಲಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷರಾದ ಎಸ್.ಎ.ಚಿನ್ನೇಗೌಡ, ಥಾಮಸ್ ಡಿಸೋಜ, ಗಂಗರಾಜು, ಚಂದ್ರಶೇಖರ್, ಕಾರ್ಯದರ್ಶಿ ಎನ್.ಎಂ.ಸುರೇಶ್, ಭಾಮ.ಹರೀಶ್, ಭಾ.ಮ.ಗಿರೀಶ್, ಗಣೇಶ್ ಇತರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಈ ಚಿತ್ರವನ್ನು ಶ್ರೀನಿವಾಸ್ ನಿರ್ದೇಶಿಸಿದ್ದಾರೆ. ಅವರಿಗೆ ಇದು ಮೂರನೇ ಸಿನಿಮಾ. ಅವರ ಕಥೆಗೆ ಹೊಸ ಮುಖ ಡಿಮ್ಯಾಂಡ್ ಮಾಡಿದ್ದರಿಂದ ಸೂರಜ್‌ಕೃಷ್ಣ ಅವರ ಆಯ್ಕೆ ಆಗಿದೆ. “ಇದೊಂದು ಪಕ್ಕಾ ರಗಡ್ ಸಿನಿಮಾ. ಇಲ್ಲಿ ಮನರಂಜನೆ ಹೈಲೈಟ್. ಹೀರೋ ಯಾರೇ ಸಹಾಯ ಕೇಳಿದರೂ ಸಮಯ ಲೆಕ್ಕಿಸದೆ, ತನಗೆ ಆಗುವ ಕೆಲ ತೊಂದರೆಯನ್ನೂ ಲೆಕ್ಕಿಸದೆ ಅವರ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿತ್ವದವನು. ನಾಯಕಿಯೊಬ್ಬಳ ಸಮಸ್ಯೆಗೆ ಸ್ಪಂದಿಸಲು ಹೋದಾಗ, ಅವನೇ ಸಮಸ್ಯೆಗೆ ಸಿಲುಕುತ್ತಾನೆ. ಆಮೇಲೆ ಹೇಗೆಹೊರ ಬರುತ್ತಾನೆ ಅನ್ನೋದು ಕಥೆ. ಬನ್ನೂರು, ಮದ್ದೂರು ಇತರೆಡೆ ಚಿತ್ರೀಕರಿಸಲಾಗಿದೆ. ಮಂಡ್ಯ ಭಾಷೆ ಚಿತ್ರದ ಇನ್ನೊಂದು ಹೈಲೈ ಟ್ ಎನ್ನುತ್ತಾರೆ’ ನಿರ್ದೇಶಕರು.
ಚಿತ್ರವನ್ನು ಎಲ್.ಆನಂದ್ ನಿರ್ಮಿಸಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. ಕಥೆ ಚೆನ್ನಾಗಿದ್ದರಿಂದಲೇ ಚಿತ್ರ ಮಾಡಿದ್ದಾಗಿ ಹೇಳುತ್ತಾರೆ ಅವರು. ಚಿತ್ರಕ್ಕೆ ವಿನೋದ್ ಭಾರತಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಸಿ.ಎಂ.ಮಹೇಂದ್ರ ಸಂಗೀತ ನೀಡಿದ್ದಾರೆ. ನಾಗೇಂದ್ರಪ್ರಸಾದ್ ಸಾಹಿತ್ಯವಿದೆ. ರಾಜೇಶ್ ಸಾಲುಂಡಿ ಅವರ ಸಂಭಾಷಣೆ ಇದೆ. ಚಿತ್ರದಲ್ಲಿ ಸೂರಜ್‌ಕೃಷ್ಣ ಅವರಿಗೆ ಸೋನಿಕಾ ಗೌಡ ನಾಯಕಿಯಾಗಿ ನಟಿಸಿದ್ದು, ಅವರಿಗೂ ಇದು ಮೊದಲ ಸಿನಿಮಾ. ಚಿತ್ರದಲ್ಲಿ ಡ್ಯಾನಿ ಕುಟ್ಟಪ್ಪ, ಕುರಿ ಪ್ರತಾಪ್, ಉಮೇಶ್, ಟೆನ್ನಿಸ್ ಕೃಷ್ಣ, ಮಾಲತಿಶ್ರೀ ಇತರರು ನಟಿಸಿದ್ದಾರೆ.