Advertisement
ಕಿಮ್ಸ್ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಉತ್ತರ ಕರ್ನಾಟಕದಲ್ಲಿ ಬಡ ಜನರಿಗೆ ವೈದ್ಯಕೀಯ ಸೇವೆ ನೀಡುವ ದೊಡ್ಡ ಸಂಸ್ಥೆಯೆಂದರೆ ಕಿಮ್ಸ್. ಪ್ರತಿದಿನ 1000ಕ್ಕೂ ಹೆಚ್ಚು ಜನರು ಇಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
Related Articles
Advertisement
ಈಗಾಗಲೇ ಜನೆರಿಕ್ ಔಷಧ ಅಂಗಡಿಯಿದ್ದು, ಕಿಮ್ಸ್ ಆವರಣದಲ್ಲಿ ಕನಿಷ್ಠ 3 ಜನೌಷಧಿ ಕೇಂದ್ರಗಳನ್ನು ಆರಂಭಿಸಬೇಕು. ಅವಶ್ಯಕ ಯಂತ್ರೋಪಕರಣಗಳನ್ನು ತರಿಸಿಕೊಳ್ಳಬೇಕು ಹಾಗೂ ಹಳೆಯ ಯಂತ್ರಗಳನ್ನು ಬದಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಪ್ರಸ್ತಾವನೆ ಕಳಿಸುವುದಷ್ಟೇ ಅಲ್ಲ, ನನಗೆ ಜ್ಞಾಪಿಸುತ್ತ ಕೆಲಸ ಮಾಡಿಸಿಕೊಳ್ಳಬೇಕು.
ಕಿಮ್ಸ್ ಒಳಿತಿಗಾಗಿ ನಾನು ಆರೋಗ್ಯ ಸಚಿವರೊಂದಿಗೆ ಮಾತನಾಡಿ ಕೆಲಸ ಮಾಡಿಸುತ್ತೇನೆ. ಇಲ್ಲದಿದ್ದರೆ ಕಂಪನಿಗಳ ಸಿಎಸ್‌ಆರ್ ಅನುದಾನ ಕೊಡಿಸಲು ಯತ್ನಿಸುತ್ತೇನೆ. ನಿರ್ದೇಶಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ನಿಯಮಿತವಾಗಿ ಎಲ್ಲ ವಿಭಾಗಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ. ಆಗ ಇಲ್ಲಿನ ಸ್ಥಿತಿ-ಗತಿ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಯಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, ನಿರ್ದೇಶಕರು ನಿಯಮಿತವಾಗಿ ಸಭೆಗಳನ್ನು ನಡೆಸಬೇಕು. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಮಾಡಿ. ಇದರಿಂದ ನಿರ್ದೇಶಕರ ತಲೆಭಾರ ಕಡಿಮೆಯಾಗುತ್ತದೆ. ಸಮರ್ಪಕವಾಗಿ ಸೇವೆ ಒದಗಿಸದ ಸಿಬ್ಬಂದಿ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಗೆ ಹೆಚ್ಚಾಗಿ ಅನಕ್ಷರಸ್ಥ ಜನರು ಬರುತ್ತಾರೆ. ವೈದ್ಯರು ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಹೇಳಿದರು.
ಸಂವಹನ ಕೊರತೆ: ಕಿಮ್ಸ್ ಆಡಳಿತ ಮಂಡಳಿ ಸದಸ್ಯ ಪರ್ವೇಜ್ ಕೊಣ್ಣೂರ ಮಾತನಾಡಿ, ಕಿಮ್ಸ್ ನಿರ್ದೇಶಕರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಇದರಿಂದ ಅವರಿಗೆ ಇಲ್ಲಿನ ಸಮಸ್ಯೆಗಳು ಅರಿವಿಗೆ ಬರುವುದಿಲ್ಲ. ಇಲ್ಲಿ ಕ್ಯಾಲ್ಸಿಯಂ ಮಾತ್ರೆಗಳನ್ನು ಕೂಡ ಹೊರಗೆ ಖರೀದಿಸಲು ಸೂಚಿಸಲಾಗುತ್ತದೆ ಎಂದರು.
ವೆಂಟಿಲೇಟರ್ ಟೆಂಡರ್ ನೀಡಿಕೆಯಲ್ಲಿ ವಿಳಂಬವಾಗುತ್ತಿದೆ. ಯಾಕೆ ವಿಳಂಬವಾಗಿದೆ ಎಂಬುದನ್ನು ನಿರ್ದೇಶಕರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಕಿಮ್ಸ್ ಆಡಳಿತ ಮಂಡಳಿ ಸದಸ್ಯ ಡಾ| ಜಿ.ಬಿ. ಸತ್ತೂರ ಮಾತನಾಡಿ, ಕಳೆದ 60 ವರ್ಷಗಳಿಂದ ಆಪರೇಶನ್ ಥೇಟರಿನ ಲೈಟ್‌ಗಳನ್ನು ಬದಲಿಸಿಲ್ಲ. ಕೂಡಲೇ ಹೊಸ ದೀಪಗಳ ವ್ಯವಸ್ಥೆ ಮಾಡಬೇಕೆಂದರು.
ಅನುದಾನ ಒದಗಿಸಿ: ಕಿಮ್ಸ್ ನಿರ್ದೇಶಕ ಡಾ| ದತ್ತಾತ್ರೇಯ ಬಂಟ್ ಮಾತನಾಡಿ, ನಮ್ಮ ಆಸ್ಪತ್ರೆಗೆ ಆಗಮಿಸುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿದಿನ ಸರಾಸರಿ 1200 ಹೊರ ರೋಗಿಗಳು ಬರುತ್ತಿದ್ದು, ಸೋಮವಾರ ಹಾಗೂ ಗುರುವಾರ 3000 ರೋಗಿಗಳು ಬರುತ್ತಾರೆ.
ಕಳೆದ ವರ್ಷ ಸರ್ಕಾರ 101 ಕೋಟಿ ರೂ. ನೀಡಿತ್ತು. ಈ ವರ್ಷ 101 ಕೋಟಿ 16 ಲಕ್ಷ ರೂ. ನೀಡಿದೆ. 48 ಕೋಟಿ ಕೊರತೆಯಿದ್ದು, ಅದನ್ನು ಒದಗಿಸಬೇಕೆಂದು ಸಚಿವರಿಗೆ ಮನವಿ ಮಾಡಿದರು. ತಹಶೀಲ್ದಾರ ಶಶಿಧರ ಮಾಡ್ಯಾಳ, ಡಾ| ಮಹೇಶ ನಾಲವಾಡ, ಕಿಮ್ಸ್ ಕಾಲೇಜು ಪ್ರಾಚಾರ್ಯ ಡಾ| ಕಮ್ಮಾರ, ಡಾ| ಆನೂರಶೆಟ್ಟರ ಮೊದಲಾದವರಿದ್ದರು.