Advertisement

ಬಿಜೆಪಿ ಆಡಳಿತದಿಂದ ಇನ್ನೂ ಕಷ್ಟದ ದಿನ ಬರಲಿದೆ: ಕಿಮ್ಮನೆ

08:15 PM Feb 24, 2021 | Team Udayavani |

ಶಿವಮೊಗ್ಗ: ನರೇಂದ್ರ ಮೋದಿಯವರು ಇನ್ನೂ ನಾಲ್ಕು ವರ್ಷಗಳ ಕಾಲ ಪ್ರಧಾನಿಯಾಗಿ ಮುಂದುವರೆದರೆ ದೇಶದ ಕನಿಷ್ಠ 10 ಕೋಟಿ ಜನ ಬಡತನ, ಹಸಿವು ತಾಳಲಾಗದೇ ಬದುಕಲು ಆಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್‌ ಆತಂಕ ವ್ಯಕ್ತಪಡಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಆಗುತ್ತಿರುವ ಪೆಟ್ರೋಲ್‌, ಡಿಸೇಲ್‌, ಗ್ಯಾಸ್‌ ದರದ ಹೆಚ್ಚಳ ಹಾಗೂ ಜನರ ಜೇಬಿನಲ್ಲಿ ಹಣವಿಲ್ಲದಿರುವ ಒತ್ತಡ ಆತ್ಮಹತ್ಯೆಗೆ ಕಾರಣವಾಗುತ್ತದೆ ಎಂದು ಅವರು ಆರೋಪಿಸಿದರು. ನಾವು ಬಡವರ ಬಗ್ಗೆ ಮಾತನಾಡಿದರೆ ಅವರು ಶ್ರೀರಾಮನ ಬಗ್ಗೆ ಹೇಳುತ್ತಾರೆ. ಒಂದೊಂದು ಅಸೆಂಬ್ಲಿ ಗೆಲ್ಲಲು 5ರಿಂದ 10 ಕೋಟಿ ಖರ್ಚುಮಾಡುವ ಬಿಜೆಪಿ ಅವರಿಗೆ ಎಲ್ಲಿಂದ ಹಣ ಬಂತು. ಹಿಂದೆ ನಾನು ಇದೇ ಬಿಜೆಪಿಯ ಧರ್ಮ, ರಾಷ್ಟ್ರಪ್ರೇಮ ಕಂಡು ಇವರಿಗೆ ಅಧಿ ಕಾರ ಸಿಗಬೇಕು ಎಂದಿದ್ದೆ. ಆದರೆ ಇವರಿಗೆ ಅ ಧಿಕಾರ ಸಿಕ್ಕಾಗ ಆಗಿರುವ ಅವಾಂತರವನ್ನು ಗಮನಿಸಿದರೆ  ನಿಜಕ್ಕೂ ಇನ್ನೂ ಕಷ್ಟದ ದಿನ ಇವೆ ಎನಿಸುತ್ತಿದೆ. ಕಾಂಗ್ರೆಸ್‌ ಸರ್ಕಾರದ ಅವ ಧಿಯಲ್ಲಿ ಗ್ಯಾಸ್‌, ಪೆಟ್ರೋಲ್‌ ದರ ಒಂದೆರಡು ರೂಪಾಯಿ ಹೆಚ್ಚಾದರೆ ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದ ಬಿಜೆಪಿಯ ಶೋಭಾ ಕರಂದ್ಲಾಜೆ ಹಾಗೂ ಇತರ ನಾಯಕಿಯರು ಈಗ ಎಲ್ಲಿಗೆ ಹೋದರು ಎಂದು ಪ್ರಶ್ನಿಸಿದರು.

ಈಶ್ವರಪ್ಪ, ಆರಗ ರಾಜಿನಾಮೆ ನೀಡಿ ಹೋರಾಟ ಮಾಡಲಿ: ಮೀಸಲಾತಿ ವಿಷಯಕ್ಕೆ ಸಂಬಂಧ ಪಟ್ಟಂತೆ ತಮ್ಮ ಕುರುಬ ಸಮುದಾಯದ ಬಗ್ಗೆ ಹೋರಾಟ ನಡೆಸುತ್ತಿರುವ ಸಚಿವ ಕೆ.ಎಸ್‌. ಈಶ್ವರಪ್ಪ ಹಾಗೂ ಮರಳು ದಂಧೆಯ ಅಕ್ರಮದ ಬಗ್ಗೆ ಪ್ರತಿಭಟನೆ ನಡೆಸಲು ಮುಂದಾಗಿರುವ ಶಾಸಕ ಆರಗ ಜ್ಞಾನೇಂದ್ರ ಅವರು ಮೊದಲು ಪಕ್ಷಕ್ಕೆ, ತಮ್ಮ ಹುದ್ದೆಗೆ ರಾಜಿನಾಮೆ ಕೊಟ್ಟು ಹೋರಾಟ ಮಾಡಲಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದರು.

ಇವರು ಯಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅವರ ಸರ್ಕಾರದ ವಿರುದ್ಧ ಅವರದೇ ಮುಖ್ಯಮಂತ್ರಿ ವಿರುದ್ಧ ಹೋರಾಟ ಮಾಡುವುದೆಂದರೆ ಅಲ್ಲಿ ನ್ಯಾಯ ದೊರೆತಿಲ್ಲ  ಎಂಬುದಾಗುತ್ತದೆಯಲ್ಲವೇ.? ವಿಷಯಗಳ ಬಗ್ಗೆ ವಿಧಾನ ಮಂಡಲದ ಅ ಧಿವೇಶನಗಳಲ್ಲಿ  ಮಾತನಾಡಲಿಲ್ಲ. ಬೀದಿಗೆ ಬಂದು ಮಾತನಾಡಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು. ಪ್ರತಿಭಟಿಸುವುದು ನಿಜವಾದರೆ ಮೊದಲು ಪಕ್ಷಕ್ಕೆ, ಹುದ್ದೆಗೆ ರಾಜೀನಾಮೆ ನೀಡಿ ಹೋರಾಟ ಮಾಡಿ ಎಂದ ಕಿಮ್ಮನೆ ರತ್ನಾಕರ್‌ ಅವರು ಜ್ಞಾನೇಂದ್ರ ಅವರು ದಿನ ಬೆಳಗ್ಗೆ ಮರಳು ಗುಡ್ಡೆಯ ಮೇಲೆ ಗಣಪನನ್ನು ಪೂಜಿಸುವ ಮೂಲಕ ದಿನ ಆರಂಭಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ ಶಾಸಕ ಆರ್‌.ಪ್ರಸನ್ನಕುಮಾರ್‌, ಜಿ.ಪಂ. ಉಪಾಧ್ಯಕ್ಷೆ ವೇದಾ ವಿಜಯ್‌ಕುಮಾರ್‌, ಸದಸ್ಯ ಕಲಗೋಡು ರತ್ನಾಕರ್‌, ಪಾಲಿಕೆ ಸದಸ್ಯರಾದ ಹೆಚ್‌.ಸಿ.ಯೋಗೀಶ್‌, ರಮೇಶ್‌ ಹೆಗಡೆ ಹಾಗೂ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next