ಬೆಂಗಳೂರು:ಬಿಎಂಟಿಸಿ ಬಸ್ ನ ಬ್ರೇಕ್ ಫೇಲ್ ಆಗಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಮಂಗಳವಾರ ಮೈಸೂರು ರಸ್ತೆಯ ಸಮೀಪ ನಡೆದಿದೆ.
ಬಸ್ ಡಿಕ್ಕಿ ಹೊಡೆದು ಮೃತಪಟ್ಟ ವಿದ್ಯಾರ್ಥಿಗಳನ್ನು ಚಂದ್ರಕಾಂತ್ ಹಾಗೂ ಯದುಕುಮಾರ್ ಎಂದು ಗುರುತಿಸಲಾಗಿದೆ. ಇವರು ಮೈಸೂರು ರಸ್ತೆಯ ಕಸ್ತೂರಬಾ ಕಾಲೇಜಿನಲ್ಲಿ ಚಂದ್ರಕಾಂತ್ ಪ್ರಥಮ ಪಿಯುಸಿಯಲ್ಲಿ ಹಾಗೂ ಯದುಕುಮಾರ್ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಇಂದು ಬೆಳಗ್ಗೆ ಕಾಲೇಜಿಗೆ ಹೋಗಲು ರಸ್ತೆ ದಾಟುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದಿದ್ದ ಬಿಎಂಟಿಸಿ ಬಸ್ ನ ಬ್ರೇಕ್ ಫೇಲ್ ಆಗಿ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ವಿದ್ಯಾರ್ಥಿಗಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಕಲಬುರಗಿ ಮೂಲದ ಚಂದ್ರಕಾಂತ್ ಕಾಲೇಜು ಮುಗಿದ ಬಳಿಕ ಗೋಪಾಲನ್ ಮಾಲ್ ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ. ಯದುಕುಮಾರ್ ದಿನಂಪ್ರತಿ ಬೆಳಗ್ಗೆ ಪೇಪರ್ ಹಾಕುವ ಕೆಲಸ ಮಾಡಿ ನಂತರ ಕಾಲೇಜಿಗೆ ಹೋಗುತ್ತಿದ್ದ ಎಂದು ವರದಿ ವಿವರಿಸಿದೆ.
ವಿದ್ಯಾರ್ಥಿಗಳ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಟ್ಟಿದ್ದು, ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರು.