Advertisement

ಕೀಕಿ ಡ್ಯಾನ್ಸ್‌: ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾಗೌಡ ವಿರುದ್ಧ ದೂರು

12:28 PM Aug 02, 2018 | Team Udayavani |

ಬೆಂಗಳೂರು: ದೇಶಾದ್ಯಂತ ಭಾರೀ ಸದ್ದು ಮಾಡಿರುವ ಕೀಕಿ ಡ್ಯಾನ್ಸ್‌ ಮಾಡಿ ವಿವಾದಕ್ಕೆ ಗುರಿಯಾಗಿರುವ ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾಗೌಡ ವಿರುದ್ಧ ಕರ್ನಾಟಕ ಸಂಘಟನೆಗಳ ಒಕ್ಕೂಟ ಬೆಂಗಳೂರು ಸಂಚಾರ ಪೊಲೀಸರಿಗೆ ದೂರು ನೀಡಿದೆ.

Advertisement

“ಗಣ್ಯ ವ್ಯಕ್ತಿಯಾಗಿರುವ ನಿವೇದಿತಾಗೌಡ ಸಾರ್ವಜನಿಕರಿಗೆ ಮಾದರಿಯಾಗಬೇಕು. ಆದರೆ, ಅವರೇ ನಿಷೇಧಿತ ಕೀಕಿ ಡ್ಯಾನ್ಸ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಈ ಮೂಲಕ ಇತರರಿಗೆ ಪ್ರಚೋದನೆ ನೀಡಿದ್ದಾರೆ.

ಇದರಿಂದ ನಿವೇದಿತಾಗೌಡರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಿಂಬಾಲಿಸುವ ಮಂದಿ ಪ್ರಯೋಗಿಸಿ ಜೀವ ಕಳೆದುಕೊಳ್ಳಬಹುದು. ಅಲ್ಲದೆ ಸಂಚಾರ ಸಮಸ್ಯೆ ಕೂಡ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ನಗರ ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳಿಗೆ ಒಕ್ಕೂಟದ ಪದಾಧಿಕಾರಿ ನಾಗೇಶ್‌ ದೂರು ನೀಡಿದ್ದಾರೆ.

ತಳಿಯದೇ ತಪ್ಪಾಗಿದೆ ಇಲ್ಲಿಗೇ ಬಿಟ್ಟುಬಿಡಿ
ಮೈಸೂರು: ನನ್ನಿಂದ ಗೊತ್ತಿಲ್ಲದೆ ಈ ತಪ್ಪಾಗಿದೆ. ದಯವಿಟ್ಟು ಇದನ್ನು ಇಲ್ಲಿಗೇ ಬಿಟ್ಟು ಬಿಡಿ ಎಂದು ಕಿಕಿ ನೃತ್ಯದಿಂದ ವಿವಾದಕ್ಕೆ ಸಿಲುಕಿರುವ ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ ಕಣ್ಣೀರಿಟ್ಟಿದ್ದಾರೆ.

ನಾನು ಯಾರಿಗೂ ಚಾಲೆಂಜ್‌ ಮಾಡಲು ಈ ರೀತಿಯ ಡ್ಯಾನ್ಸ್‌ ಮಾಡಲಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿನ ಗ್ಲೋಬಲ್‌ ಚಾಲೆಂಜ್‌ ನೋಡಿ ಹಾಗೆ ಮಾಡಿದೆ. ಇನ್ನು ಮುಂದೆ ಸೋಶಿಯಲ್‌ ಮೀಡಿಯಾ ಬಳಸುವಾಗ ಎಚ್ಚರ ವಹಿಸುತ್ತೇನೆ. 
ಇದರಿಂದ ಸಾವು-ನೋವು ಉಂಟಾಗಿದೆ ಎಂಬುದು ಕೂಡ ನನಗೆ ಗೊತ್ತಿರಲಿಲ್ಲ.

Advertisement

ಗೊತ್ತಾದ ತಕ್ಷಣ ನನ್ನ ವಾಲ್‌ನಿಂದ ಅದನ್ನು ತೆಗೆದು ಹಾಕಿದ್ದೇನೆ. ಬಿಗ್‌ಬಾಸ್‌ನಿಂದ ನನಗೆ ಒಳ್ಳೆ ಹೆಸರು ಬಂದಿದೆ. ಅದರಲ್ಲೇ ಖುಷಿಯಾಗಿದ್ದೇನೆ. ಆದರೆ, ವಿನಾ ಕಾರಣ ಇದನ್ನು ವಿವಾದ ಮಾಡಲಾಗಿದೆ. ನನ್ನ ವಿರುದ್ಧ ದೂರು ನೀಡಿರುವವರು ನನ್ನನ್ನು ಸಂಪರ್ಕಿಸಿ ತಿಳಿಹೇಳಿದ್ದರೂ ಎಚ್ಚೆತ್ತುಕೊಳ್ಳುತ್ತಿದ್ದೆ ಎಂದು ಹೇಳಿದರು.

ನೀವು ಹೊಣೆಯಾಗುತ್ತೀರಾ?: ಚಾಲೆಂಜ್‌ ಸ್ವೀಕರಿಸುವುದರಿಂದ ತೊಂದರೆಯಾಗುತ್ತದೆ ಎಂಬುದು ಗೊತ್ತಿರಲಿಲ್ಲ. ಆದರೆ, ಈ ಒತ್ತಡದಲ್ಲಿ ನಾನೇ ಏನಾದರೂ ತೊಂದರೆ ಮಾಡಿಕೊಂಡರೆ ನೀವು ಹೊಣೆಯಾಗುತ್ತೀರಾ? ನನಗೆ ಪೊಲೀಸ್‌ ಸ್ಟೇಷನ್‌, ಕೋರ್ಟ್‌ ಯಾವುದೂ ಗೊತ್ತಿಲ್ಲ. ಈಗ ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡುವ ವೇಳೆ ಕಣ್ಣೀರಿಟ್ಟರು ನಿವೇದಿತಾ ಗೌಡ.

ಕೀಕಿ ಡ್ಯಾನ್ಸ್‌ ರೋಡಲ್ಲಿ…. ಖಾಕಿ ಸಾಂಗ್ಸ್‌ ಜೈಲಲ್ಲಿ: ಬಾರಿ ಸದ್ದು ಮಾಡುತ್ತಿರುವ ಕೀಕಿ ಡ್ಯಾನ್ಸ್‌ ಬಗ್ಗೆ ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. “ಕೀಕಿ ಡ್ಯಾನ್ಸ್‌ ರೋಡಲ್ಲಿ…ಖಾಕಿ ಸಾಂಗ್ಸ್‌ ಜೈಲಲ್ಲಿ..’ ಶೀರ್ಷಿಕೆ ಅಡಿಯಲ್ಲಿ ಈ ರೀತಿಯ ಡ್ಯಾನ್ಸ್‌ ಅಪಾಯಕಾರಿಯಾಗಿದೆ.

ಈ ಸವಾಲಿನ ಪ್ರಕಾರ ಚಲಿಸುವ ಕಾರಿನಿಂದ ಜಿಗಿದು ಕಾರಿನ ವೇಗಕ್ಕೆ ಸಮಾನವಾಗಿ ಡ್ಯಾನ್ಸ್‌ ಮಾಡಬೇಕು. ಇದು ಅತ್ಯಂತ ಅಪಾಯಕಾರಿ ಕ್ರೀಡೆ. ಇದರಿಂದ ಪ್ರಾಣಾಪಾಯ, ಅಪಘಾತ, ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ ನಗರದ ಯುವಜನತೆ ಇದರಲ್ಲಿ ತೊಡಗದಂತೆ ಮನವಿ ಮಾಡಲಾಗಿದೆ.

ಒಂದು ವೇಳೆ ಭಾಗಿಯಾದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ. ಕೀಕಿ ಡ್ಯಾನ್ಸ್‌ ಕಂಡುಬಂದಲ್ಲಿ ನಾಗರಿಕರು ಪೊಲೀಸ್‌ ಸಹಾಯವಾಣಿ “ನಮ್ಮ-100′ ಅಥವಾ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು ಎಂದು ನಗರ ಪೊಲೀಸರು ತಮ್ಮ ಟ್ವಿಟರ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next