Advertisement

3.7 ಲಕ್ಷ ಕ್ಯಾನ್ಸರ್‌ ರೋಗಿಗಳಿಗೆ ಕಿದ್ವಾಯಿಯಲ್ಲಿ ಇ-ಸೌಲಭ್ಯ

06:50 AM Oct 11, 2018 | |

ಬೆಂಗಳೂರು: ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಕ್ಯಾನ್ಸರ್‌ ಆಸ್ಪತ್ರೆಯಾಗಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಮಾರು 3.7 ಲಕ್ಷ ಕ್ಯಾನ್ಸರ್‌ ಪೀಡಿತರು ತಮ್ಮ ಚಿಕಿತ್ಸೆಯ ವಿವರಗಳ ಫೈಲ್‌ಗ‌ಳನ್ನು ಹೊತ್ತುಕೊಂಡು ಓಡಾಡುವುದನ್ನು ತಪ್ಪಿಸಲು ವಿನೂತನ ಕ್ರಮವನ್ನು  ಕೈಗೊಳ್ಳಲಾಗಿದೆ.  ಅದಕ್ಕಾಗಿ 20 ಕೋಟಿ ರೂ. ವೆಚ್ಚದಲ್ಲಿ ಇ-ಆಸ್ಪತ್ರೆಯಾಗಲು ಕಿದ್ವಾಯಿ ಆಸ್ಪತ್ರೆ ಈಗ ಸಿದ್ಧವಾಗಿದೆ.

Advertisement

ಇದರಿಂದಾಗಿ ನಿಯಮಿವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ 3.7 ಲಕ್ಷ ಕ್ಯಾನ್ಸರ್‌ ರೋಗಿಗಳಿಗೆ ಸಹಾಯಕವಾಗಿಲಿದೆ.
ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಬಡ ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿರುವ ಕಿದ್ವಾಯಿ ಆಸ್ಪತ್ರೆ ತನ್ನ ಸೇವೆಯನ್ನು ಉತ್ಕೃಷ್ಟಗೊಳಿಸಿಕೊಳ್ಳುವ ಹಾಗೂ ರೋಗಿಗಳ ಅನಗತ್ಯ ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ ಆಸ್ಪತ್ರೆಗಳನ್ನು ಸರ್ಕಾರಿ ಸ್ವಾಮ್ಯದ ಎನ್‌ಐಸಿ (ನ್ಯಾಷನಲ್‌ ಇನ್ಫೋರ್ಮೆಟಿಕ್‌ ಸೆಂಟರ್‌) ತಂತ್ರಾಂಶ ಬಳಸಿ ಸಂಪೂರ್ಣ “ಇ-ಆಸ್ಪತ್ರೆ’ಯಾಗಿ ಪರಿವರ್ತಿತವಾಗುತ್ತಿದೆ.

ರೋಗಿಗಳ ಚಿಕಿತ್ಸೆಯ ಎಳೆ ಎಳೆ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸಿ ಅವರಿಗೆ ಯುಎಚ್‌ಐಡಿ (ಯೂನಿಕ್‌ ಹಾಸ್ಪಿಟಲ್‌ ಐಡೆಂಟಿಟಿ ಸಂಖ್ಯೆ) ನೀಡಲಾಗುತ್ತದೆ. ಈ ಸಂಖ್ಯೆಯನ್ನು ಆಸ್ಪತ್ರೆಯ ಯಾವುದೇ ವಿಭಾಗಗಳ ಪರೀಕ್ಷೆ, ವೈದ್ಯರ ಭೇಟಿ, ಔಷಧಾಲಯಗಳಲ್ಲಿ ತಿಳಿಸಿ ತಮ್ಮ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ಪಡೆಯಬಹುದು. ರೋಗಿಯು ಪ್ರಯೋಗಾಲಯಗಳ ವರದಿಗೆ ಅಲೆದಾಡುವ ಅವಶ್ಯಕತೆ ಇರುವುದಿಲ್ಲ. ಆ ವರದಿಯ ಸಂಪೂರ್ಣ ಮಾಹಿತಿ, ಆನಂತರ ಯಾವ ವೈದ್ಯರ ಭೇಟಿ ಹಾಗೂ ಅವರು ನೀಡಿದ ಸಲಹೆ, ಸೂಚಿಸಿದ ಔಷಧವು ಕೂಡಾ ರೋಗಿಯ ಯುಎಚ್‌ಐಡಿಯಲ್ಲಿ ದಾಖಲಾಗುತ್ತದೆ.

ಈ ರೋಗಿಗಳು ಆಸ್ಪತೆಯ ಆಮಗನದಿಂದ ನಿರ್ಗಮನವರೆಗೂ ಪ್ರತಿಯೊಂದು ಕಡೆಗಳಲ್ಲಿ ತಮ್ಮ ಯೂನಿಕ್‌ ಸಂಖ್ಯೆ ಹೇಳಿ ಸುಲಭವಾಗಿ ಚಿಕಿತ್ಸೆ ಹಾಗು ಸೌಲಭ್ಯ ಪಡಯಬಹುದು. ಜತೆಗೆ ಆಸ್ಪತ್ರೆಯ ಆಡಳಿತ ಮಾಹಿತಿ, ಹಣಕಾಸು ಲೆಕ್ಕ ನಿರ್ವಹಣೆ ಸೇರಿದಂತೆ ಎಲ್ಲಾ ಚಟುವಟಿಕೆಗಳ ಮಾಹಿತಿಗಳು ನಿಖರವಾಗಿ, ತಕ್ಷಣ ಲಭ್ಯವಾಗುವ ವ್ಯವಸ್ಥೆ ತಂತ್ರಾಂಶದಲ್ಲಿರಲಿದೆ.

ಆರಂಭದಿಂದ ಎಲ್ಲಾ ರೋಗಿಗಳ ಮಾಹಿತಿ:
ಕಿದ್ವಾಯಿ ಸಂಸ್ಥೆ ಆರಂಭವಾದಾಗಿನಿಂದ ಇಲ್ಲಿಯವರೆಗೂ ಚಿಕಿತ್ಸೆ ಪಡೆದಿರುವ ಎಲ್ಲಾ ರೋಗಿಗಳ ಮಾಹಿತಿಯನ್ನು ತಂತ್ರಾಂಶಕ್ಕೆ ಸೇರಿಸಲಾಗುತ್ತಿದೆ. ಪ್ರಸ್ತುತ ವಾರ್ಷಿಕ 19 ಸಾವಿರ ಹೊಸ ರೋಗಿಗಳು ನೋಂದಣಿಯಾಗಿದ್ದು, 3.7 ಲಕ್ಷ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿದ್ದಾರೆ. ಹಳೆಯ ರೋಗಿಗಳಿಗೆ ಶೀಘ್ರದಲ್ಲಿಯೇ ಅವರ ನೋಂದಣಿ ಮೊಬೈಲ್‌ ಸಂಖ್ಯೆಗೆ ಯೂನಿಕ್‌ ಸಂಖ್ಯೆ (ಯುಎಚ್‌ಐಡಿ ) ತಲುಪಿಸುತ್ತೇವೆ ಎಂದು ಕಿದ್ವಾಯಿ ನಿರ್ದೇಶಕ ಡಾ.ರಾಮಚಂದ್ರ ತಿಳಿಸಿದ್ದಾರೆ.

Advertisement

ಈಗಾಗಲೇ ಅಕ್ಟೋಬರ್‌ ಮೊದಲ ವಾರದಿಂದಲೇ “ಇ ಆಡಳಿತ’ಕ್ಕೆ ಮುಂದಾಗಿದ್ದು, ಸದ್ಯ ಹೊರರೋಗಿಗಳ ನೋಂದಣಿ (ಒಪಿಡಿ), ದಾಖಲಾತಿ (ಐಪಿಡಿ) ಮತ್ತು ಬಿಡುಗಡೆಯನ್ನು (ಡಿಸಾcರ್ಜ್‌), ರಕ್ತ ನಿಧಿ, ಸರ್ಕಾರದ ಯೋಜನೆಗಳ ವಿಭಾಗ, ಔಷಧಾಲಯ, ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಇ ಸೌಲಭ್ಯ ಅಳವಡಿಸಲಾಗಿದೆ. ಮುಂದಿನ ನಾಲ್ಕು ತಿಂಗಳೊಳಗೆ ಆಸ್ಪತ್ರೆಯ ಪ್ರತಿಯೊಂದು ಚಟುವಟಿಕೆಯಲ್ಲೂ ಇ ಆಡಳಿತ ತರಲಾಗುವುದು ಎಂದು ಆಸ್ಪತ್ರೆ ವೈದ್ಯರು ತಿಳಿಸಿದರು.

ಇ-ಆಸ್ಪತ್ರೆ ಮಾರ್ಪಾಡುವಿಕೆ ಖರ್ಚು ವೆಚ್ಚವನ್ನು ಸರ್ಕಾರ ಹಾಗೂ ಇನ್ಫೋಸಿಸ್‌ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಬರಿಸಲಾಗುತ್ತಿದೆ. ಅಕ್ಟೋಬರ್‌ ತಿಂಗಳಿನಿಂದ ಹಂತ ಹಂತವಾಗಿ ಒಂದೊಂದೆ ವಿಭಾಗದಲ್ಲಿ ಇ ಆಡಳಿತ ತರುತ್ತಿದ್ದು, ಮುಂದಿನ ವರ್ಷ ಜನವರಿ ಅಂತ್ಯದಲ್ಲಿ ಕಿದ್ವಾಯಿ ಸಂಪೂರ್ಣ ಇ ಆಸ್ಪತ್ರೆ ಆಗಲಿದೆ.
–  ಡಾ.ರಾಮಚಂದ್ರ. ನಿರ್ದೇಶಕ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ

24*7 ಶಸ್ತ್ರ ಚಿಕಿತ್ಸೆ ಸೌಲಭ್ಯ
ಕಿದ್ವಾಯಿಯಲ್ಲಿ ಎರಡನೇ ಶನಿವಾರ ಹಾಗೂ ಭಾನುವಾರ ಸೇರಿದಂತೆ ಎಲ್ಲಾ ಸರ್ಕಾರಿ ರಜೆ ದಿನಗಳಲ್ಲಿ ಯಾವುದೇ ಶಸ್ತ್ರಚಿಕಿತ್ಸೆ, ತೆರಪಿಗಳು ಲಭ್ಯವಿರಲಿಲ್ಲ. ರಾಜ್ಯದ ವಿವಿಧ ಭಾಗಗಳಿಂದ ಬಂದ ರೋಗಿಗಳು ನೋಂದಣಿ ಮಾಡಿಸಿಕೊಂಡು ಕಾಯಬೇಕಿತ್ತು. ಆದರೆ, ಅಕ್ಟೋಬರ್‌ 8 ರಿಂದ ಶಸ್ತ್ರಚಿಕಿತ್ಸಾ ಸೌಲಭ್ಯವನ್ನು 24*7 ಸೇವೆಗೆ ವಿಸ್ತರಿಸಿದ್ದು, ರೋಗಿಗಳು ಶಸ್ತ್ರಚಿಕಿತ್ಸೆಗಾಗಿ ಕಾಯುವ ಅವಶ್ಯಕತೆ ಇರುವುದಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

12 ಕೋಟಿ ವೆಚ್ಚದಲ್ಲಿ ಅಸ್ಥಿಮಜ್ಜೆ ಚಿಕಿತ್ಸಾ ಕೇಂದ್ರ.
ಪ್ರಸ್ತುತ ಮೂರರಿಂದ ಏಳು ಲಕ್ಷ ರೂ. ವೆಚ್ಚ ತಗಲುವ ಅಸ್ಥಿಮಜ್ಜೆ ಶಸ್ತ್ರಚಿಕಿತ್ಸೆಯನ್ನು ಕಿದ್ವಾಯಿಯಿಂದ ಉಚಿತವಾಗಿ ಮಾಡಲಾಗುತ್ತಿದೆ. ಇಲ್ಲಿ ಏಕಮಾತ್ರ ಅಸ್ಥಿಮಜ್ಜೆ ಚಿಕಿತ್ಸಾ ಘಟಕದವಿದ್ದು, ಇದನ್ನು ವಿಸ್ತರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 12 ಕೋಟಿ ನೆರವು ನೀಡಿದೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಆರಂವಾಗಿದ್ದು, ಮುಂದಿನ ವರ್ಷಾಂತ್ಯಕ್ಕೆ ದೇಶದ ಅತೀದೊಡ್ಡ ಅಸ್ಥಿಮಜ್ಜೆ ಚಿಕಿತ್ಸಾ ಕೇಂದ್ರ ಕಿದ್ವಾಯಿಯಲ್ಲಿ ಆರಂಭವಾಗಲಿದೆ.

ಮ್ಯಾಮೋಗ್ರಾಂ ಪರೀಕ್ಷೆ ಉಚಿತ ಪರೀಕ್ಷೆ
ಅ.20 ವಿಶ್ವ ಸ್ತನ ಕ್ಯಾನ್ಸರ್‌ ದಿನದ ಹಿನ್ನಲೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್‌ ಪತ್ತೆ ಹಚ್ಚುವ ಮ್ಯಾಮೋಗಾಂ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಖಾಸಗಿ ಆಸ್ಪತೆಗಳಲ್ಲಿ ಮೂರರಿಂದ ನಾಲ್ಕು ಸಾವಿರ ರೂ.ಶುಲ್ಕವಿದೆ. ಅ.30ರವರೆಗೂ ಲಭ್ಯವಿದ್ದು ಸಾರ್ವಜನಿಕರು ಈ ಸೌಲಭ್ಯವನ್ನು ಪಡೆದುಕೊಳ್ಳುಬೇಕು ಎಂದು  ಕಿದ್ವಾಯಿ ನಿರ್ದೇಶಕ ಡಾ.ರಾಮಚಂದ್ರ ತಿಳಿಸಿದ್ದಾರೆ.

– ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next