Advertisement

ಮಕ್ಕಳು ಅಮ್ಮ ಅಪ್ಪ…

03:45 AM Feb 10, 2017 | |

ಪುಟ್ಟಕ್ಕ ,ಕಳೆದ ವಾರ ನೀನು ಮನೆಗೆ ಬರ್ತೀಯಾಂತ ನಾವೆಲ್ಲ ಕಾಯ್ತಿದ್ದೆವು. ತಮ್ಮ ನಿನ್ನ ಜೊತೆಗೇ ಊಟ ಮಾಡ್ತೇನೆ ಅಂತ  ಕಾದು ಕಾದು ಹಾಗೇ ನಿದ್ದೆ ಹೋದ. ನಿನಗೆ ಇಷ್ಟ ಅಂತ ಎಳೆಕಡಿಗೆ ಪಲ್ಯ ಮಾಡಿದ್ದೆ. ತುತ್ತು ಬಾಯಿಗಿಡಲೇ ಮನಸ್ಸಾಗಲಿಲ್ಲ ನನಗೆ”

Advertisement

“”ಅಮ್ಮ, ಅಮ್ಮ, ನನಗಿಲ್ಲಿ  ಊಟ ನೀನು ಮಾಡಿಕೊಡುವ ಹಾಗಿರುವುದಿಲ್ಲ.  ನನಗೆ ಆಲೂಗಡ್ಡೆ, ಮೂಲಂಗಿ ಸ್ವಲ್ಪಾನೂ  ಹಿಡಿಸುವುದಿಲ್ಲ. ಎಲ್ಲಾದಕ್ಕೂ ಬೆಳ್ಳುಳ್ಳಿ, ನೀರುಳ್ಳಿ ಹಾಕಿರ್ತಾರೆ”

“”ಮೊಸರು ಹಾಕಿ ಊಟ ಮಾಡಮ್ಮ”

“”ಮೊಸರು ಎಲ್ಲಿಂದ ಇಲ್ಲಿ. ಮಜ್ಜಿಗೆ ಚೆನ್ನಾಗಿಲ್ಲ. ಒಂಥರಾ ಅಡ್ಡ ವಾಸನೆ”

“”ಅಯ್ಯೋ ಪುಟ್ಟಾ, ನೀನಲ್ಲಿ ಅಂಥದ್ದು ತಿಂದು ಹ್ಯಾಗಿರ್ತೀಯ. ನಂಗೆ ಹಗಲೂ ರಾತ್ರೆ ನಿಂದೇ ನೆನಪು”

Advertisement

“”ಅಮ್ಮ, ಇಲ್ಲಿನ ಹುಡುಗಿಯರು ತುಂಬಾ ಜೋರು”

“”ಅವರ ಜೊತೆಗೆಲ್ಲ  ಮಾತಿಗೆ ಹೋಗಬೇಡ ಪುಟ್ಟಕ್ಕಾ, ನಿನ್ನ ಪಾಡಿಗೆ ಸುಮ್ಮನಿದ್ದುಬಿಡು” 

“”ಪುಟ್ಟಕ್ಕ ಎಂದು  ಪ್ರೀತಿಯಿಂದ ಕರೆಯುವ ಹುಡುಗಿ ಪ್ರೀತಿ. ಪಿಯುಸಿ ಓದಲು ನಗರದ ಕಾಲೇಜಿಗೆ  ಸೇರಿಸಿದ್ದರು. ಹೆಚ್ಚೇನೂ ದೂರವಿಲ್ಲ. ಆದರೆ, ದಿನಾ ಹೋಗಿ ಬರಲು ಅಪಾರ ಸಮಯ ವ್ಯರ್ಥವಾಗುತ್ತದೆ ಎಂದು ಆಕೆ ಮತ್ತು ಮನೆಯವರ ಅಭಿಪ್ರಾಯ. ಒಂದೂವರೆ ಗಂಟೆಯ ಪ್ರಯಾಣ ಮಾತ್ರ. ಕಾಲೇಜು, ಹಾಸ್ಟೆಲ್‌ ಎರಡೂ ಚೆನ್ನಾಗಿಯೆ ಇತ್ತು. ಮೊದಲ ಬಾರಿಗೆ ಮನೆಯನ್ನು ಬಿಟ್ಟು ಹೊರಗಡೆ ನಿಂತ ಬಾಲಕಿ ಅವಳು. ಆ ತನಕ ಅಮ್ಮ, ಅಪ್ಪ, ತಮ್ಮ, ತಂಗಿ ಎಂದು ಆಡುತ್ತ, ಜಗಳವಾಡುತ್ತ ಇದ್ದವಳು. ಹಾಸ್ಟೆಲ್‌ನಲ್ಲಿ ಇದ್ದ ನೂರಕ್ಕೂ ಮಿಕ್ಕಿದ ಹುಡುಗಿಯರ ಜೊತೆಗೆ ಇರುವಾಗ ನಿತ್ಯ ಮನೆಯ ನೆನಪು ಕಾಡುತ್ತಿತ್ತು.  ಇನ್ನೇನು, ಹಾಸ್ಟೆಲ್‌ನ ಬದುಕಿಗೆ ಹೊಂದಿಕೊಳ್ಳುತ್ತಾ ಇದ್ದಾಳೆ ಎನ್ನುವಾಗ ಮನೆಯಿಂದ ಕರೆ ಅಮ್ಮನದೋ ಅಥವಾ  ತಮ್ಮ, ತಂಗಿಯದು”

“”ಅಕ್ಕಾ, ನಿನ್ನೆ ಅತ್ತೆ ಬಂದಿದ್ದಾರೆ. ನಿನ್ನ ತುಂಬಾ ನೆನಪು ಮಾಡಿಕೊಂಡರು.  ನಿನಗಿಷ್ಟದ ಮಿಠಾಯಿ ತಂದಿದ್ರು. ಪುಟ್ಟಕ್ಕ ಹ್ಯಾಗಿದ್ದಾಳ್ಳೋ,ಮನೆ ಬಿಟ್ಟು ಅಭ್ಯಾಸವೇ ಇಲ್ಲ ಅವಳಿಗೆ ಅಂತ ಬೇಜಾರು ಮಾಡ್ಕೊಂಡ್ರು”

“”ಅಕ್ಕ, ನಾವೆಲ್ಲ ನಿನ್ನೆ ನಗರಕ್ಕೆ ಹೋಗಿ ಬಂದೆವು. ಮಾಮನ ಮನೆಯಲ್ಲಿ ಐಸ್‌ಕ್ರೀಮ್‌ ತಿಂದೆವು. ನಿನ್ನ ಮಿಸ್‌ ಮಾಡಿಕೊಂಡೆವು. ಅವನ ಮಾತು ಮುಗಿಯಬೇಕಾದರೆ ಅಮ್ಮ ಫೋನ್‌ ಕಿತ್ತು ಮಾತಾಡಿದರು. ಮುಂದಿನ ವಾರ  ದೊಡ್ಡಮ್ಮನ ಮನೆಯಲ್ಲಿ ನಿಶ್ಚಿತಾರ್ಥ. ಬರ್ತೀ ತಾನೆ? ದೊಡ್ಡಮ್ಮ, ದೊಡಪ್ಪ, ಅಕ್ಕ ಎಲ್ಲ ಪ್ರೀತಿಯನ್ನು ಕರಕೊಂಡು ಬರಬೇಕು ಅಂದಿದ್ದಾರೆ.  ಹಾಸ್ಟೆಲ್‌ನಿಂದ ಬಿಡುವುದಿಲ್ಲವಾದರೆ ಅಪ್ಪನನ್ನು ಕಳಿಸ್ತೇನೆ. ಅವರು ಹೇಳಿ ಕರಕೊಂಡು ಬರ್ತಾರೆ. ನೀನೇನೂ ಹೆದರಬೇಡ. ನಮ್ಮ ಹುಡುಗಿ ನಮ್ಮನೆ ಫ‌ಂಕ್ಷನ್‌ನಲ್ಲಿ ಭಾಗವಹಿಸುವುದು ಬೇಡವಾ. ಬಂದು ಬಿಡು. ನಿನ್ನನ್ನು ಬಿಟ್ಟು ಹೋಗಲು ನನಗಾದರೂ ಹ್ಯಾಗೆ ಮನಸ್ಸು ಬರುತ್ತೆ ಹೇಳು. ಹಾಗೆ ಒಂದೆರಡು ದಿನ ಮನೆಯಲ್ಲಿದ್ದು ಹೋಗಬಹುದು”

ಪ್ರೀತಿಗೆ ಮನೆಯ ಸೆಳೆತ ಬಲವಾಗಿ ಮೂಡಿತು. ಮುಂದಿನ ವಾರ ಕ್ಲಾಸ್‌ಟೆಸ್ಟ್‌ ಇರುವ ಕಾರಣ ಈ ವಾರ ಮನೆಗೆ ಹೋಗಲಾಗುವುದಿಲ್ಲ. ವಾರ್ಡನ್‌ ಯಾರನ್ನೂ ಬಿಡುವುದಿಲ್ಲ. ತಿಂಗಳಲ್ಲಿ ಒಂದುಬಾರಿ ಹೋಗಬಹುದು. ಈಗ ಕೇಳಿದರೆ ಪರ್ಮಿಷನ್‌ ಸಿಕ್ಕುವುದಿಲ್ಲ. ಅಪ್ಪನೇ ಬಂದು ಕರಕೊಂಡು ಹೋದ್ರೆ ಚೆನ್ನಾಗಿರುತ್ತದೆ. ದೊಡ್ಡಮ್ಮನ ಮನೆಯಲ್ಲಿ ಎಲ್ಲರೂ ಸಂಭ್ರಮದಲ್ಲಿರಬೇಕಾದರೆ ತಾನು ಮಾತ್ರ ಇಲ್ಲಿ ಪುಸ್ತಕ ಮುಖಕ್ಕೆ ಹಿಡಿದು ಕೂರಬೇಕು. ಓದಲು ಕುಳಿತ ಪ್ರೀತಿಗೆ ಅದರಲ್ಲಿ ಮನ ನಿಲ್ಲದು. ಮನೆಯ ಸುತ್ತಲೇ ಗಿರಕಿ ಹೊಡೆಯುವ ಮನಸ್ಸು.

ಕಿಶೋರನ ಅಪ್ಪ ಮಗ ಚೆನ್ನಾಗಿ ಓದಲಿ. ಪ್ರಯಾಣದಲ್ಲಿ ಹೊತ್ತು ಹಾಳಾಗುವುದು ಬೇಡ, ಒಳ್ಳೆಯ ಮಾರ್ಕ್ಸ್ ಸಿಗದೇ ಇದ್ದರೆ ಉತ್ತಮ ಕೋರ್ಸ್‌ ಮಾಡಲು ಅಸಾಧ್ಯ. ಹಾಸ್ಟೆಲ್‌ನಲ್ಲಿ ಬಿಡೋಣ ಎಂದೇ ಸೇರಿಸಿದ್ದರು. ಆಗಾಗ ಮಾತಾಡುತ್ತಿದ್ದರು ಮಗನಲ್ಲಿ. ಮನೆಯನ್ನು ಬಿಟ್ಟೇ ತಿಳಿಯದ ಕಿಶೋರನಿಗೆ ಸಿಕ್ಕಾಪಟ್ಟೆ ಹೋಮ್‌ ಸಿಕ್‌ನೆಸ್‌ ಕಾಡತೊಡಗಿತ್ತು. ಅಪ್ಪನ ಫೋನ್‌ ಬಂದಾಗ ಧಾವಿಸಿ ಬರುವ ಅವನು ಅವರು ಚೆನ್ನಾಗಿ ಓದು, ಹಾಸ್ಟೆಲ್‌ ಅಂದ ಮೇಲೆ ನೂರಾರು ವಿದ್ಯಾರ್ಥಿಗಳಿದ್ದಾರೆ.  

ಒಬ್ಬೊಬ್ಬರಿಗೆ ಹಿಡಿಸುವ ಹಾಗೆ ತಯಾರಿಸಲಾಗುವುದಿಲ್ಲ. ಅಲ್ಲಿರುವಾಗ  ಎಲ್ಲದಕ್ಕೂ ಹೊಂದಿಕೊಳ್ಳಬೇಕು. ಆಹಾರ  ಒಂದು ತಿಂಗಳು ಅಭ್ಯಾಸವಾಗು ವಾಗ ರುಚಿಸುತ್ತದೆ. ಎಲ್ಲ ವಿದ್ಯಾರ್ಥಿಗಳ  ಹಾಗೆ  ಅಡ್‌ಜಸ್ಟ್‌ ಮಾಡುವುದು ಕಲಿ. ರೂಮ್‌ಮೇಟ್ಸ್‌ ಜತೆ ಹೊಂದಿಕೊ. ಉತ್ತಮ ನಡವಳಿಕೆಯಲ್ಲಿರಬೇಕು ಎಂದಷ್ಟೇ ಹೇಳಿ ಇಡುತ್ತಿದ್ದರು. ವಿದ್ಯಾರ್ಥಿಗಳಿಗೆ ಮೊಬೈಲ್‌ ಇಟ್ಟುಕೊಳ್ಳುವ ಹಾಗಿಲ್ಲ. ಇವನು ಮನೆಗೆ ಕಾಲ್‌ ಮಾಡಬೇಕಾದರೆ ಹಾಸ್ಟೆಲ್‌ನ ಫೋನ್‌ನಿಂದ ಮಾಡಿದರೆ ಬಿಲ್‌ ಮೆಸ್‌ ಬಿಲ್‌ನ ಜೊತೆಗೆ ಸೇರಿಸುವ ಸೌಲಭ್ಯವಿತ್ತು. ಅಮ್ಮನೋ ಅಕ್ಕನೋ ಕರೆ ಮಾಡಿದಾಗ ಅವನಿಗೆ ಹಿಗ್ಗು. “”ಊಟಕ್ಕೇನಿತ್ತು? ಅಯ್ಯೋ, ಬಸಳೇನಾ? ನಿನಗದು ಹಿಡಿಸುವುದಿಲ್ಲ . ಅದು ಹ್ಯಾಗೆ ಊಟ ಮಾಡಿದ್ದಿ? ಅಲ್ಲ, ಅರೆಹೊಟ್ಟೆ ಉಂಡು ಎದ್ದಾ ಹ್ಯಾಗೆ? ಮಕ್ಕಳಿಗೆ ಇಷ್ಟ ಇರುವ ತರಕಾರಿ ಮಾಡಿ ಬಡಿಸಲು ಆಗುವುದಿಲ್ವಾ? ಪಾಪ, ನಮ್ಮ ಕಿಶೋರ. ಏನು ಅನ್ನದಲ್ಲಿ ಕಲ್ಲು ಸಿಕ್ತಾ? ಪಲಾವ್‌ನಲ್ಲಿ ಅನ್ನ ಜಾಸ್ತಿ, ತರಕಾರಿ ಕಡಿಮೆ ಅಂದಿದ್ದಿ. ಈಗ ಹ್ಯಾಗಿರುತ್ತದೆ. ರೂಮಿನಲ್ಲಿ ಜೊತೆಯವರು ಹೊಂದಿಕೊಳ್ತಾರಾ? ನಮಗೆಲ್ಲ ಕೂತರೆ ನಿಂತರೆ ನಿನ್ನ ನೆನಪಾಗುತ್ತದೆ. 

ಮಕ್ಕಳಿಗೆ ಮನೆಯ ಹಾಗೆ ಎಲ್ಲೂ ಸರಿ ಆಗದು ಅಂತ ನಾನು ಅಪ್ಪನ ಕೈಲಿ ನಿನ್ನ ಹಾಸ್ಟೆಲ್‌ಗೆ ಸೇರಿಸುವಾಗ್ಲೆà ಹೇಳಿದ್ದೆ. ಅವರು ಕಿವಿಗೇ ಹಾಕ್ಕೊಳ್ಳಲಿಲ್ಲ. ಪಾಠ ಸರಿಯಾಗಿ ಅರ್ಥವಾಗುತ್ತಾ ನಿನಗೆ. ಹಿಡಿಸದೆ ಹೋದರೆ ಬೇಡ ಬಿಡು. ಬೇರೆ ಕಡೆ ಸೇರಿಸುವ ಬರುವ ವರ್ಷಕ್ಕೆ. ಇಲ್ಲಿ ಅಜ್ಜಿ ಹಗಲಿರುಳು ನಿನ್ನನ್ನೇ ಜ್ಞಾಪಿಸ್ತಾರೆ. ಅವರಿಗೆ ನಿನ್ನ ನೋಡದೆ ಇದ್ದರೆ ಊಟ, ನಿದ್ದೆ ಇಲ್ಲ. ಅದಕ್ಕೆ ಅಪ್ಪ ಆಗಾಗ ಗದರ್ತಾರೆ. “ಅವನು ಮೊದಲು ವಿದ್ಯಾಭ್ಯಾಸಕ್ಕೆ ಗಮನ ಕೊಡಲಿ. ನೀವೆಲ್ಲ ಹಾಗೆ ಹೀಗೆ ಅಂತ ಮಾತಾಡಿ ಅವನನ್ನು ಇತ್ತ ಸೆಳೆಯಕೂಡದು’ ಅಂತಾರೆ. ಅಷ್ಟು ಕಲ್ಲು ಮನಸ್ಸು ನಮ್ಮಿಂದಾಗುವುದಿಲ್ಲ.  ನೀನಲ್ಲಿ ಅವರು ಬೇಯಿಸಿ ಹಾಕಿದ್ದು ತಿನ್ನುವಾಗ ನಮಗಿಲ್ಲಿ ನಿನ್ನಿಷ್ಟದ ಆಹಾರ ಮಾಡಲು ಕೈ ಬರುವುದಿಲ್ಲ. ಮಾಡಿದ್ದೇ ಆದರೆ, ತುತ್ತು ಬಾಯಿಗೆ ಹೋಗುವುದಿಲ್ಲ. ಹಗಲಿರುಳು ನಿನ್ನ ನೆನಪಾಗ್ತಿದೆ. ಈ ವಾರ ಬಂದು ಹೋಗು ಮಗಾ. ಎಣ್ಣೆನೀರು ಹಾಕಿ ನಿನ್ನ ಪ್ರೀತಿಯ ತಿಂಡಿ, ಊಟ ಮಾಡಿ ಬಡಿಸ್ತೇನೆ.

ಮೊದಲ ಬಾರಿಗೆ  ಹಾಸ್ಟೆಲ್‌ನಲ್ಲಿ ತಮ್ಮ ಮಕ್ಕಳನ್ನು ಬಿಟ್ಟಿದ್ದ ಹೆತ್ತವರ ಪಾಡು ಹೀಗೂ ಇರುತ್ತದೆ. ಅದು ತನಕ ಜೊತೆಗೇ ಇದ್ದ ಮಗ, ಮಗಳು ದೂರವಾಗಿ, ಒಬ್ಬಂಟಿಯಾಗಿರುವ ಮಗನೋ, ಮಗಳ್ಳೋ ಅದು ಹೇಗೆ ಇರ್ತಾಳೆ ಅಲ್ಲಿ. ಆಹಾರ ಹ್ಯಾಗಿರುತ್ತೋ ಪಾಪದ ಮಗು ನಮ್ಮದು. ಅದೇ ವಯಸ್ಸಿನ ಇತರ ವಿದ್ಯಾರ್ಥಿಗಳೂ ಅಲ್ಲಿರ್ತಾರೆ ಎನ್ನುವ ಕಲ್ಪನೆ ಬರುವುದು ಕಮ್ಮಿ. ಅಲ್ಲದೆ ತಮ್ಮ ಮಕ್ಕಳಿಗೆ ಅಲ್ಲಿನ ಶಿಸ್ತಿಗೆ, ನೀತಿ-ನಿಯಮಗಳಿಗೆ, ಆಹಾರಕ್ಕೆ, ಸಮಯ ಪಾಲನೆಗೆ ಹೊಂದಿಕೊಂಡಿರು ಅನ್ನುವ ಹೆತ್ತವರು ಬೆರಳೆಣಿಕೆಯಲ್ಲಿ. ಹಾಗೂ ಹೀಗೂ ಮಕ್ಕಳು ತಮ್ಮದೇ ವಯಸ್ಸಿನ ಇತರ ವಿದ್ಯಾರ್ಥಿಗಳ ಜೊತೆಗೆ, ಕಾಲೇಜಿಗೆ ಹೊಂದಿಕೊಳ್ಳಲು ಯತ್ನಿಸಿ, ಅದರಲ್ಲಿ ಯಶಸ್ಸು ಪಡೆದರು ಅನ್ನುವ ಹೊತ್ತಿಗೆ ಮನೆಯಿಂದ ಭಾವನಾತ್ಮಕವಾದ ಕರೆ ಬರುತ್ತದೆ. ಅಲ್ಲಿಗೆ ವಿದ್ಯಾರ್ಥಿಗೆ ಸ್ಥಿರವಾಗತೊಡಗಿದ ಮನಸ್ಸು ಪುನಃ ಡೋಲಾಯಮಾನವಾಗುತ್ತದೆ. ಮನಸ್ಸು ಮನೆಯತ್ತ ನೆಗೆಯುತ್ತದೆ. ಇಲ್ಲೂ ಸಮವಯಸ್ಕರು. ಅವರೂ ತನ್ನ ಹಾಗೆ ಮನೆ, ಬಳಗವನ್ನು ಬಿಟ್ಟು ಬಂದವರು ಅನ್ನುವ ನೆನಪು ಆಗ ಬರುವುದಿಲ್ಲ.

ಭಾವನಾತ್ಮಕವಾಗಿ ಮಾತಾಡಿ ಮಕ್ಕಳ ಮನಸ್ಸನ್ನು ಸೆಳೆಯುವ ಬದಲಿಗೆ ಎಲ್ಲರ ಹಾಗೆ ಅಲ್ಲಿಗೆ ಹೊಂದಿಕೊಂಡಿರು ಅಥವಾ ಸ್ನೇಹಿತರನ್ನು ಮಾಡಿಕೊ, ಸಾಮಾನ್ಯವಾಗಿ ಉತ್ತಮ ಆಹಾರವನ್ನೇ ಕೊಡ್ತಾರೆ, ನಾನಾ ಊರಿನ ವಿದ್ಯಾರ್ಥಿಗಳು, ವಿಭಿನ್ನ ರುಚಿಯವರು, ನಾನಾ ಭಾಷೆ ಎಲ್ಲದಕ್ಕೂ ಅವರೂ ಆದ್ಯತೆ ಕೊಡಬೇಕಾಗುತ್ತದೆ. ಹೊಂದಿಕೊಳ್ಳುವುದು ಕಲಿತುಕೊ ಎಂದು ಅರಿವು ಮೂಡಿಸಿದ್ದೇ ಆದರೆ ವಿದ್ಯಾರ್ಥಿ ಮಾನಸಿಕವಾಗಿ ಬಲಿಷ್ಟನಾಗುತ್ತಾನೆ (ಳೆ). ಹೊಂದಾಣಿಕೆ ಬದುಕಿನ ಮುಖ್ಯ ಭಾಗ. ಹೊರಗಿನ ಸಮಾಜದಲ್ಲಿ ಬದುಕುವಾಗ  ನಾನು; ನನ್ನಿಷ್ಟ ಎನ್ನುವುದಕ್ಕೆ ಆಗುವುದಿಲ್ಲ.

ಹೆತ್ತವರು ಅತೀ ಭಾವುಕರಾಗಿ ಸಹಾನುಭೂತಿಯಿಂದ ಮಾತಾಡಿದರೆ ವಿದ್ಯಾರ್ಥಿಗೆ ತಾನೇನೋ ಕಷ್ಟದಲ್ಲಿರಬೇಕು ಅನ್ನಿಸುತ್ತದೆ. ಬದಲಾಗಿ, ಎಲ್ಲರೂ ಸಮಾನ ವಯಸ್ಸಿನವರು, ಕಂಬೈಂಡ್‌ ಸ್ಟಡಿ ಮಾಡಬಹುದು. ಸಾಮಾನ್ಯವಾಗಿ ಎಲ್ಲರಿಗೆ ಹೊಂದಿಕೆಯಾಗಬಹುದಾದ ಆಹಾರ ಇರುತ್ತದೆ. ವಿದ್ಯಾಭ್ಯಾಸ ಮುಖ್ಯ. ನೀನೀಗ ದೊಡªವನು, ವಿದ್ಯೆ, ಉದ್ಯೋಗ ಅಂತ ಹೋಗುವಾಗ ಸದಾ ಅಮ್ಮನ ಸೆರಗಿಗೆ ಅಂಟಿಕೊಂಡು ಇರಲಾಗುವುದಿಲ್ಲ , ಹೇಗಿದ್ದರೂ ತಿಂಗಳಿಗೊಮ್ಮೆ ಬರಬಹುದು. ಹೀಗೆ ಹೇಳಿದರೆ ಅಲ್ಲಿಗೆ ಮಾನಸಿಕ ದೃಢತೆ ಕೊಟ್ಟ ಯಶಸ್ಸು ಮನೆಯವರದು. ಎಕ್ಸಾಮ್‌ ಟೈಮ್‌, ಸ್ಟಡಿ ಟೈಮ್‌ ಅಂತ ನೋಡದೆ ಭಾವನಾತ್ಮಕವಾಗಿ ಮನಸ್ಸಿಗೆ ನಾಟುವ ಹಾಗೆ ಹೊಸದಾಗಿ ಕಾಲೇಜು, ಹಾಸ್ಟೆಲ್‌ಗೆ ಸೇರ್ಪಡೆಗೊಂಡ ವಿದ್ಯಾರ್ಥಿಯಲ್ಲಿ ಮಾತಾಡಿದಾಗ ಅಲ್ಲಿಗೆ ಅವರ ಎಳೆಯ ಮನಸ್ಸು ಮನೆಯತ್ತ  ಸೆಳೆಯುತ್ತದೆ. ಬದಲಾಗಿ ಆತನ ಆತ್ಮವಿಶ್ವಾಸ ಹೆಚ್ಚುವ ಹಾಗೆ ಪ್ರೋತ್ಸಾಹಿಸಿ, ಬೆಂಬಲಿಸಿದರೆ  ವಿದ್ಯಾರ್ಥಿಯಲ್ಲಿ ಮಾನಸಿಕ ಬಲ ಹೆಚ್ಚುತ್ತದೆ. ಹೊರಗಿನ ಬದುಕು ಸಹನೀಯವಾಗುತ್ತದೆ. ನಾನೇ ಕೇಳಿದಂತೆ ಹಲವಾರು ತಾಯ್ತಂದೆಯರು, ಹೆಚ್ಚಾಗಿ ಮಹಿಳೆಯರು ವಿದ್ಯಾರ್ಥಿಯ ಮಾನಸಿಕ ಸ್ಥೆçರ್ಯವನ್ನು ತಮ್ಮ ನಿಲುವು  ಕುಂದಿಸುತ್ತದೆ ಎನ್ನುವುದನ್ನು ಅರಿಯದೆ ಅತೀವ ಭಾವು ಕರಾಗಿ ಮಾತಾಡುತ್ತಾರೆ. ಇದು ವ್ಯತಿರಿಕ್ತ ಪರಿಣಾಮ ಬೀರದು ಎನ್ನುವಂತಿಲ್ಲ.

– ಕೃಷ್ಣವೇಣಿ ಕಿದೂರು

Advertisement

Udayavani is now on Telegram. Click here to join our channel and stay updated with the latest news.

Next