Advertisement

50 ಲಕ್ಷ ರೂ.ಗೆ ಇಬ್ಬರ ಕಿಡ್ನ್ಯಾಪ್‌: ಐವರ ಸೆರೆ

11:13 AM Sep 19, 2022 | Team Udayavani |

ಬೆಂಗಳೂರು: ರಿಯಲ್‌ ಎಸ್ಟೇಟ್‌ ವ್ಯವಹಾರ ಕುರಿತು ಮಾತನಾಡುವ ನೆಪದಲ್ಲಿ ಕರೆಸಿಕೊಂಡು ಮಹಿಳೆ ಸೇರಿ ಇಬ್ಬರು ರಿಯಲ್‌ ಎಸ್ಟೇಟ್‌ ಮಧ್ಯ ವರ್ತಿಗಳನ್ನು ಅಪಹರಿಸಿ 11 ಲಕ್ಷ ರೂ. ಸುಲಿಗೆ ಮಾಡಿದ್ದ ಐವರು ಆರೋಪಿಗಳು ಬ್ಯಾಟರಾಯನಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಹೈದರಾಬಾದ್‌ನ ಪ್ರಸಾದ್‌, ಸತ್ಯನಾರಾಯಣ, ಮಹಾರಾಷ್ಟ್ರ ಮೂಲದ ಶ್ರೀಧರ್‌, ಕಿರಣ್‌ ಮೋರೆ ಹಾಗೂ ನಾಗೋರಾವ್‌ ಬಂಧಿತರು. ಪ್ರಮುಖ ಆರೋಪಿ ಹರೀಶ್‌ ಹಾಗೂ ವರ್ಮ ಎಂಬುವವರು ತಲೆಮರೆಸಿಕೊಂಡಿದ್ದಾರೆ.

ಆರೋಪಿಗಳು ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣದ ಹೋಟೆಲ್‌ ಬಳಿ ಕೆ.ಆರ್‌.ಪುರ ವಿನಾಯಕ ಲೇಔಟ್‌ ನಿವಾಸಿಗಳಾದ ವಸಂತಾ ಮತ್ತು ಆಕೆಯ ಸೋದರ ಸಂಬಂಧಿ ಶಿವಾರೆಡ್ಡಿಯನ್ನು ಅಪಹರಿಸಿದ್ದರು. ಬಳಿಕ 11 ಲಕ್ಷ ರೂ. ಸುಲಿಗೆ ಮಾಡಿದ್ದರು. ವಸಂತಾ ಮತ್ತು ಆಕೆಯ ಸೋದರ ಸಂಬಂಧಿ ಶಿವಾರೆಡ್ಡಿ ರಿಯಲ್‌ ಎಸ್ಟೇಟ್‌ ವ್ಯವಹಾರದ ಜತೆ ಸಮಾಜ ಸೇವಕರಾಗಿದ್ದಾರೆ. ಆ.16ರಂದು ಸಂಜೆ 6 ಗಂಟೆಗೆ ವಸಂತಾ ಮೊಬೈಲ್‌ಗೆ ಕರೆ ಮಾಡಿರುವ ಆರೋಪಿ ಹರೀಶ್‌, ಬೆಂಗಳೂರಿಗೆ ಬಂದಿದ್ದೇನೆ. ಜಮೀನು ವಿಚಾರವಾಗಿ ಮಾತನಾಡಬೇಕು ಎಂದು ವಸಂತಾ ಮತ್ತು ಶಿವಾರೆಡ್ಡಿಯನ್ನು ಮೈಸೂರು ರಸ್ತೆಯ ಸ್ಯಾಟಲೆಟ್‌ ಬಸ್‌ ನಿಲ್ದಾಣದ ಬಳಿಯ ಹೋಟೆಲ್‌ ಬಳಿ ಕರೆಸಿಕೊಂಡಿದ್ದಾನೆ. ಈ ವೇಳೆ ಈ ಆರೋಪಿ ಹರೀಶ್‌, ಸತ್ಯನಾರಾಯಣ, ಪ್ರಸಾದ್‌ ಹಾಗೂ ಇತರೆ ಮೂವರು ಹೋಟೆಲ್‌ ನಲ್ಲಿ ಮಾತನಾಡುವುದು ಬೇಡ. ಬೇರೆ ಹೋಟೆಲ್‌ ನಲ್ಲಿ ಮಾತನಾಡೋಣ ಎಂದು ವಸಂತಾ ಮತ್ತು ಶಿವಾರೆಡ್ಡಿಯನ್ನು ಕಾರಿನಲ್ಲಿ ಕೂರಿಸಿಕೊಂಡು ದೇವನಹಳ್ಳಿ ಕಡೆ ಕರೆದೊಯ್ದಿದ್ದಾರೆ.

ಈ ವೇಳೆ ಅನುಮಾನಗೊಂಡು ವಸಂತಾ”ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆರೋಪಿಗಳು ವಸಂತಾ ಹಾಗೂ ಶಿವಾರೆಡ್ಡಿಯ ಮೊಬೈಲ್‌ ಕಿತ್ತುಕೊಂಡು ಬೆದರಿಕೆ ಹಾಕಿದ್ದು, 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ನಂತರ ಹೈದರಾಬಾದ್‌ನ ಹೋಟೆಲ್‌ವೊಂದಕ್ಕೆ ಕರೆದೊಯ್ದು ಇಬ್ಬರನ್ನು ಕೂಡಿ ಹಾಕಿದ್ದಾರೆ. ಅಲ್ಲದೆ, ನಾವು ಪೊಲೀಸ್‌ ಅಧಿಕಾರಿಗಳು ಎಂದು ನಕಲಿ ಗುರುತಿನ ಚೀಟಿ ತೋರಿಸಿ, 50 ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಬಳಿಕ ಹಣ ತರಲು ವಸಂತಾರನ್ನು ಬೆಂಗಳೂರಿಗೆ ಕಳುಹಿಸಿ, ಶಿವಾರೆಡ್ಡಿಯನ್ನು ಗೃಹ ಬಂಧನದಲ್ಲಿರಿಸಿದ್ದರು. ಆ.18ರಂದು ಬೆಂಗಳೂರಿಗೆ ಬಂದ ವಸಂತಾ, ಸ್ನೇಹಿತರಿಂದ ಸಾಲ ಮತ್ತು ಚಿನ್ನಾಭರಣ ಅಡಮಾನ ಇಟ್ಟು 11 ಲಕ್ಷ ರೂ. ಹೊಂದಿಸಿಕೊಂಡು ಹೊರಟಿದ್ದರು. ಆದರೆ, ಆರೋಪಿಗಳು ಕನಿಷ್ಠ 25 ಲಕ್ಷ ರೂ. ಕೊಡಲೇಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಅಪಹರಣಕಾರರ ಮನವೊಲಿಸಿದ ವಸಂತಾ, 11 ಲಕ್ಷ ರೂ. ನೀಡಿ ಶಿವಾರೆಡ್ಡಿಯನ್ನು ಬಿಡಿಸಿಕೊಂಡು ಬಂದು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ್ವಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

ಹೈದರಾಬಾದ್‌ನಲ್ಲಿ ಆರೋಪಿಗಳ ಪರಿಚಯ : ವಸಂತಾರ ಪುತ್ರಿ ಹೈದರಾಬಾದ್‌ನ ಬೋರ್ಡಿಂಗ್‌ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು. ಹೀಗಾಗಿ ಆಗಾಗ ವಸಂತಾ ಹಾಗೂ ಶಿವಾರೆಡ್ಡಿ ಹೈದರಾಬಾದ್‌ಗೆ ಹೋಗುತ್ತಿದ್ದರು. ಈ ವೇಳೆ ಆರೋಪಿ ಹರೀಶ್‌, ವಸಂತಾಗೆ ಪರಿಚಿತನಾಗಿ ರಿಯಲ್‌ ಎಸ್ಟೇಟ್‌ ವ್ಯವಹಾರದ ಬಗ್ಗೆ ತಿಳಿದು ಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಗಳು ವಸಂತಾರನ್ನು ಗುರಿಯಾಗಿಸಿಕೊಂಡು ಅಪಹರಣ ಮಾಡಿದ್ದರು ಎಂದು ಪೊಲೀಸರು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next