Advertisement
ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಸೋಮವಾರ ರಾತ್ರಿ ಕೆಂಗೇರಿಯ ಕೊಮ್ಮಘಟ್ಟ ಬಳಿ ಆರೋಪಿಗಳು ಇರುವ ಬಗ್ಗೆ ಮಾಹಿತಿ ದೊರೆತಿದ್ದರಿಂದ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿ ಬಾಲಕನನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿತು.
Related Articles
ಪ್ರಕರಣದ ಪ್ರಮುಖ ಆರೋಪಿ ಅಭಿಷೇಕ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದು, ರಾಜೇಶ್ ಏಜೆನ್ಸಿಯ ಮಿನಿಬಸ್‌ನ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅಭಿಷೇಕ್, ಟ್ರಾವೆಲ್ಸ್ ಏಜೆನ್ಸಿಯಲ್ಲಿ ನಷ್ಟ ಅನುಭವಿಸಿದ್ದ. ಹೀಗಾಗಿ, ಮಿನಿಬಸ್ ಚಾಲಕನಾಗಿದ್ದ ರಾಜೇಶ್‌ಗೆ ಆಂಧ್ರಪ್ರದೇಶದಲ್ಲಿ 20 ಎಕರೆ ಜಮೀನು ಇದೆ ಎಂಬ ಮಾಹಿತಿ ಗೊತ್ತಿದ್ದರಿಂದ ಅಪಹರಣಕ್ಕೆ ಮುಂದಾದ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಜ.28ರಂದು ಚಂದನ್ ತಾಯಿ ಮಾಲಾ ಹುಟ್ಟಹಬ್ಬ ಇದ್ದ ಕಾರಣ ದೇವಸ್ಥಾನಕ್ಕೆ ಹೋಗಿದ್ದರು. ಪುತ್ರ ಚಂದನ್ ಮನೆ ಬಳಿ ಆಟವಾಡುತ್ತಿದ್ದ. ಇದೇ ವೇಳೆ ಅಲ್ಲಿಗೆ ಬಂದ ಅಭಿಷೇಕ್ ಅಂಗಡಿಗೆ ಕರೆದೊಯ್ದು ತಿಂಡಿ ಕೊಡಿಸುವುದಾಗಿ ಹೇಳಿದ್ದಾನೆ. ಪರಿಚಯ ಇದ್ದ ಕಾರಣ ಬಾಲಕ ಒಪ್ಪಿದ್ದಾನೆ. ಆಗ ಚಂದನ್‌ನನ್ನು ಬೈಕ್‌ನಲ್ಲಿ ಕರೆದೊಯ್ದು ಅಭಿಷೇಕ್ ಮತ್ತೂಬ್ಬ ಆರೋಪಿ ದಿವ್ಯತೇಜ್‌ಗೆ ಜತೆ ಕಳುಹಿಸಿದ. ಮಗು ಮನೆಗೆ ಬಾರದ ಕಾರಣ ಗಾಬರಿಗೊಂಡ ರಾಜೇಶ್ ಎಲ್ಲೆಡೆ ಹುಡುಕಾಡಿ ಬಳಿಕ ಠಾಣೆಗೆ ದೂರು ನೀಡಿದ್ದಾರೆ.
ಇದೇ ವೇಳೆ ದೂರವಾಣಿ ಕರೆ ಮಾಡಿದ ದುಷ್ಕರ್ಮಿಯೊಬ್ಬ ವಿಷಯ ತಿಳಿಸಿ 30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ತಂಡ, ಸ್ಥಳೀಯ ಸಿಸಿಟಿವಿ ಹಾಗೂ ಮೊಬೈಲ್ ಕರೆಗಳ ಮಾಹಿತಿಯನ್ನಾಧರಿಸಿ ಮೊದಲಿಗೆ ಅಭಿಷೇಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಪೊಲೀಸ್ ಮೇಲೆ ಹಲ್ಲೆ-ಗುಂಡೇಟು: ರಾತ್ರಿ 12.30ರ ಸುಮಾರಿಗೆ ಆರೋಪಿಗಳ ಕಾರು ಅಡ್ಡಗಟ್ಟಿದ ಕೆ.ಪಿ.ಅಗ್ರಹಾರ ಠಾಣೆ ಇನ್‌ಸ್ಪೆಕ್ಟರ್ ಮಂಜುನಾಥ್ ಮೇಲೆ ಕಾರು ಚಾಲನೆ ಮಾಡುತ್ತಿದ್ದ ದಿವ್ಯತೇಜ್ ಡ್ಯಾಗರ್‌ನಲ್ಲಿ ಹಲ್ಲೆಗೆ ಮುಂದಾಗಿದ್ದಾನೆ. ಆಗ ಕೂಡಲೇ ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಒಂದು ಸುತ್ತ ಗುಂಡು ಹಾರಿಸಿದ್ದಾರೆ. ಆದರೂ ಆರೋಪಿ ಹಲ್ಲೆಗೆ ಮುಂದಾಗಿದ್ದು, ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಗಳನ್ನು ಬಂಧಿಸಿ ಮಗು ಚಂದನ್‌ನನ್ನು ರಕ್ಷಿಸಿದ್ದಾರೆ.
ದಂಪತಿ ಜತೆ ಹುಡುಕಾಡಿದ ಆರೋಪಿ: ನಾಲ್ಕು ವಾರಗಳಿಂದ ಕೃತ್ಯಕ್ಕೆ ಸಂಚು ರೂಪಿಸಿದ್ದ ಅಭಿಷೇಕ್ ಇತರೆ ಆರೋಪಿಗಳಿಗೆ ಹೊಸ ಸಿಮ್, ಮೊಬೈಲ್ ಕೊಡಿಸಿದ್ದ. ಹಾಗೆಯೇ ಸುತ್ತಾಡಲು ಸ್ಯಾಂಟ್ರೋ ಕಾರು ಕೂಡ ಕೊಟ್ಟಿದ್ದ. ಬಾಲಕನನ್ನು ದುಷ್ಕರ್ಮಿಗಳ ಜತೆ ಕಳುಹಿಸಿ ವಾಪಸ್ ಮನೆಗೆ ಬಂದಿದ್ದ ಅಭಿಷೇಕ್, ರಾಜೇಶ್ ಜತೆ ಚಂದನ್‌ಗಾಗಿ ಹುಡುಕಾಡಿದ್ದಾನೆ. ದಂಪತಿಗಳಿಗೆ ಧೈರ್ಯ ತುಂಬಿದ್ದಾನೆ.
ಈ ಮಧ್ಯೆ ದಿವ್ಯತೇಜ ಅಲಿಯಾಸ್ ಡಿಜೆ, ಹರ್ಷಿತ್ ಮತ್ತು ವಿಠಲ್‌ನಗರದ ಶ್ರೀಕಾಂತ್ ಮಗುವಿನೊಂದಿಗೆ ತಮಿಳುನಾಡಿನ ಕೃಷ್ಣಗಿರಿಗೆ ಹೋಗಿ, ಬಳಿಕ ಸೋಮವಾರ ಬೆಳಗ್ಗೆ ಮೈಸೂರಿಗೆ ಬಂದಿದ್ದರು. ಈ ಮಾಹಿತಿ ಸಂಗ್ರಹಿಸಿದ ಪೊಲೀಸರು ಅಭಿಷೇಕ್ ಮೂಲಕವೇ ಆರೋಪಿಗಳಿಗೆ ಕರೆ ಮಾಡಿಸಿ ರಾಜೇಶ್ ಹಣ ಹೊಂದಿಸಿಕೊಂಡಿದ್ದು ಬೆಂಗಳೂರಿಗೆ ಬರುವಂತೆ ಹೇಳಿಸಿದ್ದರು.