Advertisement

ಕಿಕ್‌ಬ್ಯಾಕ್‌ ನಿಲುವಳಿ ಸೂಚನೆ ತಿರಸ್ಕಾರ

07:15 AM Feb 14, 2017 | Team Udayavani |

ವಿಧಾನ ಪರಿಷತ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಕ್‌ ಬ್ಯಾಕ್‌ ಪಡೆದಿದ್ದಾರೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ
ಬಿ.ಎಸ್‌.ಯಡಿಯೂರಪ್ಪ ಆರೋಪ ಕುರಿತಂತೆ ಚರ್ಚಿಸಲು ಬಿಜೆಪಿ ಮಂಡಿಸಿದ ನಿಲುವಳಿ ಸೂಚನೆಯನ್ನು ಸಭಾಪತಿ ತಾಂತ್ರಿಕ ದೋಷದ ಕಾರಣಕ್ಕೆ ತಿರಸ್ಕರಿಸಿದ ಪ್ರಸಂಗ ನಡೆಯಿತು.

Advertisement

ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ಯೋಜನೆಗೆ ಸಂಬಂಧ ಪಟ್ಟಂತೆ ಮುಖ್ಯಮಂತ್ರಿಗಳು 65 ಕೋಟಿ ರೂ. ಕಿಕ್‌ಬ್ಯಾಕ್‌
ಪಡೆದಿದ್ದಾರೆ ಎಂಬುದಾಗಿ ಯಡಿಯೂರಪ್ಪ ಭಾನುವಾರ ಗಂಭೀರ ಆರೋಪ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿಯ ಬಿ.ಜೆ.ಪುಟ್ಟಸ್ವಾಮಿ ವಿಷಯ ಪ್ರಸ್ತಾಪಿಸಿ, “ಸಚಿವರು, ಆಡಳಿತ ಪಕ್ಷದಲ್ಲಿರುವ ಹಲವರು ನೂರಾರು ಕೋಟಿ ಅವ್ಯವಹಾರ ನಡೆಸಿದ್ದು, ಈ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು’ ಎಂದರು.

ತಕ್ಷಣವೇ ಕಾಂಗ್ರೆಸ್‌ನ ಹಲವು ಸದಸ್ಯರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಚರ್ಚೆಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು. ಉಭಯ ಪಕ್ಷಗಳ ಸದಸ್ಯರು ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. 

ದಿನಾಂಕವೇ ನಮೂದಿಸಿಲ್ಲ: ಆಗ ಮಧ್ಯಪ್ರವೇಶಿಸಿದ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, “ಸದಸ್ಯರು ಸಲ್ಲಿಸಿರುವ ನಿಲುವಳಿ ಸೂಚನೆಯಲ್ಲಿ ಎರಡು ತಾಂತ್ರಿಕ ದೋಷಗಳಿವೆ. ಮೊದಲಿಗೆ ನಿಲುವಳಿ ಸೂಚನೆಗೆ ದಿನಾಂಕವನ್ನೇ ನಮೂದಿಸಿಲ್ಲ. ಹಾಗಾಗಿ ಇದನ್ನು
ನೇರವಾಗಿ ತಿರಸ್ಕರಿಸಬಹುದು. ಎರಡನೆಯದಾಗಿ ಸದನದ ಹೊರಗೆ ನಡೆದ ಸಂಗತಿಗಳ ಕುರಿತು ಸದನದಲ್ಲಿ ನೇರವಾಗಿ ಚರ್ಚೆ ನಡೆಸಲು ಸಾಧ್ಯವಿಲ್ಲ. ಆರೋಪಗಳಿಗೆ ಸಂಬಂಧಪಟ್ಟಂತೆ ದಾಖಲೆಗಳಿದ್ದರೆ ಸಲ್ಲಿಸಿದರೆ ಪರಿಶೀಲಿಸಬಹುದೇ ಹೊರತು ನೇರವಾಗಿ ಚರ್ಚೆಗೆ ತೆಗೆದುಕೊಳ್ಳಲಾಗದು’ ಎಂದರು. “ಹಾಗಾಗಿ ಯಾರೊಬ್ಬರೂ ತಪ್ಪು ತಿಳಿಯಬೇಡಿ. ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ. ತಾಂತ್ರಿಕ ದೋಷ ಕಾರಣಕ್ಕೆ ನಿಲುವಳಿ ಸೂಚನೆಯನ್ನು ತಿರಸ್ಕರಿಸಲಾಗಿದ್ದು, ಮತ್ತೆ ಒತ್ತಾಯಿಸಬೇಡಿ’ ಎಂದರು.

ಇದಕ್ಕೆ ಸಮಾಧಾನಗೊಳ್ಳದ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, “ದಿನಾಂಕ ನಮೂದಿಸದೆ ತಪ್ಪಾಗಿದೆ ಎನ್ನುವುದಾದರೆ ನಾಳೆಯೇ ಮಂಡಿಸುತ್ತೇವೆ. ಆದರೆ ಐಟಿ ಅಧಿಕಾರಿಗಳು ಸಚಿವರು, ಪ್ರಭಾವಿಗಳು, ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ
ದಾಳಿ ನಡೆಸಿದಾಗ ಅಪಾರ ಪ್ರಮಾಣದ ಹಣ, ಆಸ್ತಿ ಪತ್ತೆಯಾಗಿರುವುದು ಪತ್ರಿಕೆಗಳಲ್ಲಿ ವರದಿಯಾಗಿದ್ದು, ಈ ಬಗ್ಗೆ ಚರ್ಚೆ ನಡೆಯಬೇಕಿದೆ’ ಎಂದರು ಹೇಳಿದರು.

Advertisement

ಕಾಲೆಳೆದ ಇಟಗಿ 
ಕಾಂಗ್ರೆಸ್‌ನ ಬಸವರಾಜ ಇಟಗಿ ಮಾತನಾಡಿ, “ನೋಟು ಎಣಿಸುವ ಯಂತ್ರ ಪತ್ತೆಯಾಗಿದ್ದ ಬಗ್ಗೆ ಮೊದಲು ಮಾಹಿತಿ ನೀಡಬೇಕು’ ಎಂದು ಕಾಲೆಳೆದರು. ಇದಕ್ಕೆ ಪ್ರತ್ರಿಯಾಗಿ ಬಿ.ಜೆ.ಪುಟ್ಟಸ್ವಾಮಿ, “ರಾಜ್ಯದಲ್ಲಿ ಕೆಲ ಪ್ರಭಾವಿಗಳು, ಅಧಿಕಾರಿಗಳು ಹಣ ಲೂಟಿ ಹೊಡೆಯುತ್ತಿದ್ದಾರೆ’ ಎಂದು ದೂರಿದರು. ಇದಕ್ಕೆ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ, “ಹಣ ಲೂಟಿ ಮಾಡಿ ಜೈಲಿಗೆ ಹೋಗಿ ಬಂದವರಿಗೆ
ನಾಚಿಕೆಯಾಗಬೇಕು. ಮಾನಮರ್ಯಾದೆ ಇಲ್ಲದೆ ಆರೋಪ ಮಾಡುತ್ತಿದ್ದಾರೆ’ ಎಂದು ಕಿಡಿ ಕಾರಿದರು. ಸಭೆಯಲ್ಲಿ ಮತ್ತೆ ಗದ್ದಲ ಆರಂಭವಾಗುತ್ತಿದ್ದಂತೆ ಕಲಾಪವನ್ನು ನಿಯಂತ್ರಿಸಿದ ಸಭಾಪತಿಗಳು ಚರ್ಚೆಗೆ ತೆರೆ ಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next