ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ 1.30 ಕೋಟಿ ರೂ. ಕಿಕ್ ಬ್ಯಾಕ್ ಪಡೆದ ಆರೋಪ ಪ್ರಕರಣದ ಸಂಬಂಧ ಜ. 31ಕ್ಕೆ ವಿಚಾರಣೆಯ ಪ್ರಗತಿ ಮಾಹಿತಿ ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೊಕಾಯುಕ್ತ ಬೆಂಗಳೂರು ವಲಯದ ಎಸ್‌ಪಿಗೆ ಸೂಚಿಸಿದೆ.
ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಕಿಂಗ್ಸ್ ಕೋರ್ಟ್‌ನ ಎಲ್. ವಿವೇಕಾನಂದ ಅವರಿಂದ 1.30 ಕೋಟಿ ರೂ. ಪಡೆದ ಆರೋಪ ಕೇಳಿ ಬಂದಿತ್ತು. ಪ್ರತಿಯಾಗಿ ಟಫ್ì ಕ್ಲಬ್ ಸ್ಟೀವರ್ಡ್ ಹುದ್ದೆಗೆ 2014ರಲ್ಲಿ ವಿವೇಕಾನಂದ ಅವರನ್ನು ನೇಮಕ ಮಾಡಿದ್ದರು ಎಂದು ಆರೋಪಿಸಿ ಎನ್.ಆರ್. ರಮೇಶ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿದ ವೇಳೆ ಲೋಕಾಯುಕ್ತ ಎಸ್.ಪಿ ಕೆ.ವಿ. ಅಶೋಕ್ ಹಾಜರಾಗಿದ್ದರು. ಲೋಕಾಯುಕ್ತ ಸಹಾಯಕ ರಿಜಿಸ್ಟ್ರಾರ್ ಮುಂದೆ ವಿಚಾರಣೆ ಬಾಕಿಯಿದೆ. ಎನ್.ಆರ್. ರಮೇಶ್ ದೂರಿನ ಸಂಬಂಧ ವಿಚಾರಣೆ ನಡೆಯುತ್ತಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಜ. 31ಕ್ಕೆ ವಿಚಾರಣೆ ಪ್ರಗತಿ ಮಾಹಿತಿ ನೀಡಲು ಕೋರ್ಟ್ ಸೂಚನೆ ನೀಡಿದೆ.