Advertisement

ವಿಷಪ್ರಸಾದ ಪ್ರಕರಣದಿಂದ ಮುಚ್ಚಲ್ಪಟ್ಟಿದ್ದ ಕಿಚ್ಚುಗುತ್ತು ಮಾರಮ್ಮ ದೇವಾಲಯ ದರ್ಶನಕ್ಕೆ ಮುಕ್ತ

06:51 PM Oct 24, 2020 | sudhir |

ಹನೂರು (ಚಾಮರಾಜನಗರ): ವಿಷಪ್ರಸಾದ ಪ್ರಕರಣದಿಂದ ಮುಚ್ಚಲ್ಪಟ್ಟಿದ್ದ ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತು ಮಾರಮ್ಮ ದೇವಾಲಯದ 4 ದಿನಗಳ ಪ್ರಾಯಶ್ಚಿತ್ತ ಪೂಜಾ ಕೈಂಕರ್ಯ ಮುಕ್ತಾಯವಾಗಿದ್ದು ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿದೆ.

Advertisement

ತಾಲೂಕಿನ ಕಿಚ್ಚುಗುತ್ತು ಮಾರಮ್ಮ ದೇವಾಲಯದಲ್ಲಿ 2018ರ ಡಿ.14 ರಂದು ವಿಷಮಿಶ್ರಿತ ಪ್ರಸಾದ ಸೇವನೆಯಿಂದ 17 ಭಕ್ತಾದಿಗಳು ಮೃತಪಟ್ಟು 120ಕ್ಕೂ ಹೆಚ್ಚು ಭಕ್ತಾದಿಗಳು ತೀವ್ರ ಅಸ್ವಸ್ಥಗೊಂಡಿದ್ದರು. ಇದರ ಪರಿಣಾಮ 22 ತಿಂಗಳುಗಳಿಂದ ಪೂಜಾ ಕೈಂಕರ್ಯ ಸ್ಥಗಿತಗೊಂಡಿತ್ತು. ಇದೀಗ ದೇವಾಲಯವನ್ನು ಮುಜರಾತಿ ಇಲಾಖಾ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಸರ್ಕಾರ ಕ್ರಮ ಕೈಗೊಂಡಿತ್ತು.

4 ದಿನಗಳ ಪೂಜಾ ಕೈಂಕರ್ಯ ಮುಕ್ತಾಯ: ಕಿಚ್ಚುಗುತ್ತು ಮಾರಮ್ಮ ದೇವಾಲಯದಲ್ಲಿ ಕಹಿ ಘಟನೆಯಿಂದಾಗಿ ಪೂಜಾ ಕೈಂಕರ್ಯ ಸ್ಥಗಿತಗೊಂಡಿದ್ದ ಹಿನ್ನೆಲೆ ಇದೀಗ ಧಾರ್ಮಿಕ ದತ್ತಿ ಇಲಾಖೆಯ 23 ಜನರ ಆಗಮಿಕರ ತಂಡ ಕಳೆದ 4 ದಿನಗಳಿಂದ ಪ್ರಾಯಶ್ಚಿತ್ತ ಪೂಜೆ, ಹೋಮ-ಹವನ, ಕುಂಭಾಭೀಷೇಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದು ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ :ಪತ್ನಿಯ ನಡತೆ ಮೇಲೆ ಅನುಮಾನಗೊಂಡ ಪತಿ : ಕುಡಿದ ಮತ್ತಿನಲ್ಲಿ ಪತ್ನಿಯ ಕೊಲೆ

Advertisement

ಹಲವು ಸೇವೆಗಳಿಗೆ ನಿರ್ಬಂಧ: ಕಿಚ್ಚುಗುತ್ತು ಮಾರಮ್ಮ ದೇವಾಲಯದಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ವಿವಿಧ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ||ಎಂ.ಆರ್.ರವಿ ಈ ಹಿಂದೆ ಭಕ್ತಾದಿಗಳು ಬೆಳಿಗ್ಗೆ 7 ಗಂಟೆಯಿಂದ ವರಪ್ರಸಾದ ಪೂಜೆ ನೆರವೇರಿಸುತ್ತಿದ್ದರು ಆ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇನ್ನುಳಿದಂತೆ ತೀರ್ಥ ಪ್ರಸಾದ ವಿತರಣ, ದಾಸೋಹಕ್ಕೂ ನಿರ್ಬಂಧ ಹೇರಲಾಗಿದೆ. ಇನ್ನು ಈ ದೇವಾಲಯಕ್ಕೆ ರಾಜ್ಯದ ಜನತೆ ಸೇರಿದಂತೆ ತಮಿಳುನಾಡಿನ ಸಾರ್ವಜನಿಕರೂ ಹೆಚ್ಚಾಗಿ ಆಗಮಿಸುತ್ತಿದ್ದರು. ಇದೀಗ ಕೋವಿಡ್-19 ನಿಯಮಾವಳಿ ಜಾರಿಯಿರುವುದರಿಂದ ತಮಿಳುನಾಡು ಭಕ್ತಾದಿಗಳಿಗೆ ತಾತ್ಕಾಳಿಕ ನಿರ್ಬಂಧ ಹೇರಲಾಗಿದೆ. ಅಲ್ಲದೆ ಈ ಹಿಂದೆ ಭಕ್ತಾದಿಗಳು ನೆರವೇರಿಸುತ್ತಿದ್ದ ಪರಸೇವೆಯನ್ನು ನಿರ್ಬಂಧಿಸಲಾಗಿದೆ. ಮುಂದಿನ ದಿನಗಳಲ್ಲಿ ಕೋವಿಡ್ ನಿಯಮಾವಳಿಗಳು ಬದಲಾದಂತೆ ಸೇವೆಗಳನ್ನು ಸಡಿಲಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಪೂಜಾ ಕೈಂಕರ್ಯದ ಅಂತಿಮ ದಿನವಾದ ಶನಿವಾರ ಶಾಸಕ ಆರ್.ನರೇಂದ್ರ ರಾಜುಗೌಡ ಕುಟುಂಬ ಸಮೇತರಾಗಿ ಪೂಜೆ ನೆರವೇರಿಸಿ ದೇವಿಯ ದರ್ಶನ ಪಡೆದರು. ಇನ್ನುಳಿದಂತೆ ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳು, ಮ.ಬೆಟ್ಟದ ಪ್ರಧಾನ ಆಗಮಿಕರಾದ ಕರವೀರಸ್ವಾಮಿಗಳು, ತಹಸೀಲ್ದಾರ್ ಕುನಾಲ್, ಗ್ರಾಮ ಲೆಕ್ಕಾಧಿಕಾರಿ ವಿನೋದ್ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next