ನಟ ಸುದೀಪ್ ಚಿತ್ರರಂಗಕ್ಕೆ ಬಂದು 27 ವರ್ಷಗಳಾಗಿವೆ. ಒಬ್ಬ ನಟ ಚಿತ್ರರಂಗದಲ್ಲಿ ಇಷ್ಟು ವರ್ಷ ಪೂರೈಸುವುದು ಸುಲಭದ ಮಾತಲ್ಲ. ಅದರಲ್ಲೂ ಸ್ಟಾರ್ ನಟ ಎನಿಸಿಕೊಂಡು, ಸ್ಟಾರ್‌ಡಮ್‌ನೊಂದಿಗೆ ಇಷ್ಟು ವರ್ಷ ಚಿತ್ರರಂಗದಲ್ಲಿ ಪೂರೈಸಿರುವುದು ಸಾಧನೆಯೇ. ಈ ಹಿನ್ನೆಲೆಯಲ್ಲಿ ಸುದೀಪ್ ಅಭಿಮಾನಿಗಳಿಗೆ, ಕನ್ನಡ ಚಿತ್ರರಂಗಕ್ಕೆ ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸುದೀಪ್, “ಸಿನಿಮಾ ರಂಗದ 27 ವರ್ಷದ ಜರ್ನಿ ಅವಿಸ್ಮರಣೀಯ. ಈ 27 ವರ್ಷಗಳಲ್ಲಿ ಅದ್ಭುತ ಪ್ರತಿಭೆಗಳ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಇವರೆಲ್ಲರೂ ನಾನು ಉತ್ತಮವಾದುದನ್ನು ನೀಡಲು ಸ್ಫೂರ್ತಿ ನೀಡಿದ್ದಾರೆ. ಜೊತೆಗೆ ಇಷ್ಟು ವರ್ಷದ ಜರ್ನಿಯಲ್ಲಿ ನನ್ನ ಬೆನ್ನೆಲುಬಾಗಿ ನಿಂತ ಅನೇಕರಿಗೆ ನಾನು ಧನ್ಯವಾದ ಹೇಳಲೇಬೇಕು. ನನ್ನನ್ನು ನಂಬಿ ಅವಕಾಶ ನೀಡಿದ ಕನ್ನಡ ಚಿತ್ರರಂಗಕ್ಕೆ ಧನ್ಯವಾದ ಹೇಳಲೇಬೇಕು. ಜೊತೆಗೆ ಹಿಂದಿ, ತಮಿಳು, ತೆಲುಗು ಚಿತ್ರರಂಗವನ್ನು ನೆನೆಯದೇ ಹೋದರೆ ಈ ಜರ್ನಿ ಅಪೂರ್ಣವಾದಿತು…’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ʼಪಠಾಣ್ʼ ಸಿನಿಮಾ ವಿರುದ್ಧದ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ: ಆರೋಪಿ ಬಂಧನ
ಅಂದಹಾಗೆ, ಸುದೀಪ್ ಅವರು “ತಾಯವ್ವ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಅಧಿಕೃತವಾಗಿ ಎಂಟ್ರಿಕೊಟ್ಟವರು. ಆರಂಭದ ದಿನಗಳಲ್ಲಿ ನಾಯಕರಾಗಿ ಸುದೀಪ್ ಅವರಿಗೆ ಬ್ರೇಕ್ ನೀಡಿದ ಸಿನಿಮಾಗಳೆಂದರೆ “ಸ್ಪರ್ಶ’, “ಹುಚ್ಚ’ ಸಿನಿಮಾಗಳು.
Related Articles
ಸದ್ಯ ಸುದೀಪ್ “ವಿಕ್ರಾಂತ್ ರೋಣ’ ಬಳಿಕ ಯಾವ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಈ ನಡುವೆಯೇ ಬೇರೆ ಬೇರೆ ನಿರ್ದೇಶಕರ ಜೊತೆ ಸುದೀಪ್ ಸಿನಿಮಾ ಸುದ್ದಿ ಕೇಳಿಬರುತ್ತಿದೆ. ಆದರೆ, ಅಧಿಕೃತವಾಗಿ ಘೋಷಣೆಯಾಗಿಲ್ಲ.