ಮಂಗಳೂರು: ಕ್ರೀಡಾ ಕ್ಷೇತ್ರಕ್ಕೆ ಕರಾವಳಿಯ ಕೊಡುಗೆ ಹೆಚ್ಚಿಸುವುದಕ್ಕೆ ಪೂರಕವಾಗಿ ಆ್ಯತ್ಲೆಟಿಕ್ ಕ್ರೀಡಾಪಟುಗಳನ್ನು ರೂಪಿಸಲು ಕರಾವಳಿಯಲ್ಲಿ ಖೇಲೋ ಇಂಡಿಯಾ ತರಬೇತಿ ಕೇಂದ್ರ ಆರಂಭಗೊಂಡಿದೆ. ಉಭಯ ಜಿಲ್ಲೆಯ 60 ಮಂದಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ.
“ಒಂದು ಜಿಲ್ಲೆ ಒಂದು ಕ್ರೀಡೆ’ ಎಂಬ ಪರಿಕಲ್ಪನೆಯಡಿ ಕ್ರೀಡೆ ಹಾಗೂ ಗ್ರಾಮೀಣ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಮಂಗಳೂರಿನ ಮಂಗಳಾ ಕ್ರೀಡಾಂಗಣ ಹಾಗೂ ಉಡುಪಿ ಜಿಲ್ಲೆಯ ಅಜ್ಜರಕಾಡಿನಲ್ಲಿ ಕೇಂದ್ರ ಸ್ಥಾಪಿಸಲಾಗಿದೆ. ಕ್ರೀಡಾಪಟುಗಳ ಆಯ್ಕೆ ಮತ್ತು ಗುಣಮಟ್ಟದ ತರಬೇತಿ ನೀಡುವುದು ಈ ಕೇಂದ್ರದ ಹೊಣೆಗಾರಿಕೆ. ಮಾಜಿ ಚಾಂಪಿಯನ್‌ಗಳು, ಅರ್ಹತೆ ಪಡೆದ ತರಬೇತುದಾರರು ಇದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಂಗಳೂರಿನಲ್ಲಿ ರಾಷ್ಟ್ರೀಯ ತರಬೇತುದಾರ ಭಕ್ಷಿತ್ ಸಾಲ್ಯಾನ್ ಮತ್ತು ಉಡುಪಿಯಲ್ಲಿ ಸಮರ್ಥ್ ಸದಾಶಿವ ಅವರು ತರಬೇತಿ ನೇತೃತ್ವ ವಹಿಸಿದ್ದಾರೆ.
ಮುಂದಿನ ತಿಂಗಳು ಬಿಹಾರದಲ್ಲಿ ನಡೆಯುವ ರಾಷ್ಟ್ರೀಯ ಅಂತರ್ ಜಿಲ್ಲಾ ಜೂನಿಯರ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಉಭಯ ಜಿಲ್ಲೆಗಳ 8 ಮಂದಿ ಕ್ರೀಡಾಳುಗಳು ಆಯ್ಕೆಯಾಗಿದ್ದಾರೆ. ಮಂಗಳೂರಿನಲ್ಲಿ ದಿನದಲ್ಲಿ ಎರಡು ಪಾಳಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದರೆ, ಉಡುಪಿಯಲ್ಲಿ ಸಂಜೆ ಹೊತ್ತಿನಲ್ಲಿ ತರಬೇತಿ ಒದಗಿಸಲಾಗುತ್ತಿದೆ.
Related Articles
ಆಯ್ಕೆ ಪ್ರಕ್ರಿಯೆ ಹೇಗೆ?
ಜಿಲ್ಲೆಯ ವಿವಿಧೆಡೆಯ 12 ರಿಂದ 18 ವರ್ಷದೊಳಗಿನ 30 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ದ.ಕ. ಜಿಲ್ಲೆಯಲ್ಲಿ ತಲಾ 15 ಮಂದಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಉಡುಪಿ ಜಿಲ್ಲೆಯಲ್ಲಿ 18 ವಿದ್ಯಾರ್ಥಿ/12 ವಿದ್ಯಾರ್ಥಿನಿಯರಿದ್ದಾರೆ. ಶಾಲಾ, ಕಾಲೇಜು ಮಟ್ಟದ ಸ್ಪರ್ಧೆಗಳಲ್ಲಿ ವಿಜೇತ ಆ್ಯತ್ಲೆಟಿಕ್ ಕ್ರೀಡಾಪಟುಗಳಿಗೆ ಆದ್ಯತೆ ನೀಡಲಾಗಿದೆ. ಈ ವಿದ್ಯಾರ್ಥಿಗಳು ನಾಲ್ಕು ವರ್ಷಗಳವರೆಗೆ ತರಬೇತಿ ಪಡೆಯುವರು.
ಏನಿದು ತರಬೇತಿ ಕೇಂದ್ರ?
ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳು ಬೆಳಕಿಗೆ ತರುವುದು, ಮಧ್ಯ ಪ್ರದೇಶದಲ್ಲಿ ನಡೆಯುವ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಈ ವಿದ್ಯಾರ್ಥಿಗಳು ಪದಕ ಪಡೆಯುವುದು, ರಾಷ್ಟ್ರ, ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲೂ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಲು ಈ ತರಬೇತಿ ಕೇಂದ್ರ ಆರಂಭವಾಗಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಖೇಲೋ ಇಂಡಿಯಾ ತರಬೇತಿ ಕೇಂದ್ರವನ್ನು ಕೇಂದ್ರ ಸರಕಾರ ಮಂಗಳೂರಿನ ಮಂಗಳಾ ಕ್ರೀಡಾಂಗಣ ಮತ್ತು ಉಡುಪಿಯ ಅಜ್ಜರಕಾಡಿನಲ್ಲಿ ಸ್ಥಾಪಿಸಿದೆ. ಸದ್ಯ 60 ಮಂದಿಗೆ ತರಬೇತಿ ನೀಡಲಾಗುತ್ತಿದೆ.
– ರವಿ ವೈ. ನಾಯ್ಕ್ , – ಡಾ| ರೋಶನ್ ಕುಮಾರ್ ಶೆಟ್ಟಿ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ದ.ಕ. ಜಿಲ್ಲೆ, ಉಡುಪಿ ಜಿಲ್ಲೆ
-ನವೀನ್ ಭಟ್ ಇಳಂತಿಲ