ಚಂಡೀಗಢ : ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಬ್ಯಾಂಕ್ ಲಾಕರ್‌ಗಳಲ್ಲಿ ಗ್ರಾಹಕರು ಇರಿಸುವ ಅತ್ಯಮೂಲ್ಯ ವಸ್ತುಗಳ ನಷ್ಟದ ಬಾಧ್ಯತೆಯತ್ತ ಕೇಂದ್ರ ಸರಕಾರದ ಗಮನವನ್ನು ಸೆಳೆದಿದ್ದಾರೆ.
ಬ್ಯಾಂಕ್ ಲಾಕರ್‌ಗಳಲ್ಲಿ ಇರಿಸಲಾಗುವ ಅಮೂಲ್ಯ ವಸ್ತುಗಳನ್ನು ಲಾಕರ್ ಬಳಕೆದಾರರು ಬಹಿರಂಗ ಪಡಿಸುವುದನ್ನು ಕಡ್ಡಾಯ ಮಾಡಬೇಕೆಂಬ ಸಲಹೆಯನ್ನು ಖಟ್ಟರ್ ಕೇಂದ್ರ ಸರಕಾರಕ್ಕೆ ನೀಡಿದ್ದಾರೆ.
ಹಾಗೆ ಮಾಡಿದಲ್ಲಿ ಬ್ಯಾಂಕುಗಳು ಲಾಕರ್ ಬಳಕೆದಾರರ ಹಿತಾಸಕ್ತಿಯನ್ನು ರಕ್ಷಿಸಲು ಸುಲಭವಾಗಿ ಗ್ರೂಪ್ ಇನ್‌ಶೂರೆನ್ಸ್ ಪಾಲಿಸಿ ಪಡೆಯಬಹುದಾಗಿದೆ ಎಂದವರು ಹೇಳಿದ್ದಾರೆ.
ಒಂದು ವೇಳೆ ಹೀಗೆ ಮಾಡುವುದು ಕೆಲವೊಂದು ಕಾರಣಕ್ಕೆ ಅಪ್ರಾಯೋಗಿಕ ಎನಿಸಿದಲ್ಲಿ, ಬ್ಯಾಂಕ್‌ನಲ್ಲಿ ಇರಿಸುವ ಅಮೂಲ್ಯ ವಸ್ತುಗಳನ್ನು ಬಹಿರಂಗಪಡಿಸುವ ಆಯ್ಕೆಯನ್ನು ಗ್ರಾಹಕರಿಗೇ ನೀಡಬಹುದಾಗಿದೆ ಎಂದು ಖಟ್ಟರ್ ಅವರು ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಹೀಗೆ ಮಾಡುವ ಮೂಲಕ ಯಾವುದೇ ವಿಷಮ ಸಂದರ್ಭದಲ್ಲಿ ಕ್ಲೇಮುಗಳನ್ನು ತ್ವರಿತವಾಗಿ ನಿರ್ವಹಿಸುವುದಕ್ಕೆ ಬ್ಯಾಂಕುಗಳಿಗೆ ಮತ್ತು ಸರಕಾರಕ್ಕೆ ಸಾಧ್ಯವಾಗಲಿದೆ ಎಂದು ಖಟ್ಟರ್ ಅಭಿಪ್ರಾಯಪಟ್ಟಿದ್ದಾರೆ.
ಆರ್‌ಬಿಐ ಈ ತನಕವೂ ಬ್ಯಾಂಕ್ ಲಾಕರ್ ನಷ್ಟವನ್ನು ಅಂದಾಜಿಸುವುದಕ್ಕೆ ಯಾವುದೇ ಮಾನದಂಡವನ್ನು ರೂಪಿಸಿಲ್ಲವಾದ್ದರಿಂದ ಈ ಉಪಕ್ರಮವು ಈ ದಿಶೆಯಲ್ಲಿ ಒಂದು ದೊಡ್ಡ ಹೆಜ್ಜೆಯಾಗಲಿದೆ ಎಂದು ಖಟ್ಟರ್ ಹೇಳಿದ್ದಾರೆ.