Advertisement
ಧರ್ಮಸಿಂಗ್ ಅವರು ಜೇವರ್ಗಿ ಕ್ಷೇತ್ರದಿಂದ ಸತತ 9 ಸಲ ಸ್ಪರ್ಧಿಸಿದ್ದರೆ, ಮಲ್ಲಿಕಾರ್ಜುನ ಖರ್ಗೆ 8 ಸಲ ಗುರುಮಿಠಕಲ್ ಹಾಗೂ ಒಂದು ಸಲ ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾಗಿದ್ದಾರೆ. ಅಲ್ಲದೆ, ಖರ್ಗೆ 2009 ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಚುನಾಯಿತರಾಗಿದ್ದಾರೆ. ಆದರೆ, ಧರ್ಮಸಿಂಗ್ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಚುನಾಯಿತರಾಗಿ ಖರ್ಗೆ ಅವರ ಜತೆಗೆ ಸಂಸತ್‌ಗೆ ಹೆಜ್ಜೆ ಹಾಕಿದರೆ, ಕಳೆದ 2014ರ ಚುನಾವಣೆಯಲ್ಲಿ ಬಿಜೆಪಿಯ ಭಗವಂತ ಖೂಬಾ ಎದುರು ಸೋಲು ಅನುಭವಿಸಿದರು. ಸೋತ ಬಳಿಕ ಮೆತ್ತಗಾದ ಧರ್ಮಸಿಂಗ್, 2017ರ ಜು.27ರಂದು ಕೊನೆಯುಸಿರೆಳೆದರು. ಹೀಗಾಗಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾಲ್ಕು ದಶಕಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಆತ್ಮೀಯ ಮಿತ್ರನಾಗಿದ್ದ ಧರ್ಮಸಿಂಗ್ ಅವರಿಲ್ಲದೆ ಪ್ರಸ್ತುತ ಲೋಕಸಭಾ ಚುನಾವಣೆ ಎದುರಿಸಬೇಕಾಗಿದೆ.
“ಲವ-ಕುಶ’ ಎಂದೇ “ಧರ್ಮಸಿಂಗ್ -ಮಲ್ಲಿಕಾರ್ಜುನ ಖರ್ಗೆ’ ಜೋಡಿ ಖ್ಯಾತಿ ಪಡೆದಿರುವುದಕ್ಕೆ ಹಲವು ಕಾರಣಗಳಿವೆ. ಇಬ್ಬರೂ ಏಕಕಾಲಕ್ಕೆ ವಿಧಾನಸಭೆಗೆ ಪ್ರವೇಶ ಮಾಡಿರುವುದು, ಇಬ್ಬರೂ ದೇವರಾಜ ಅರಸು ಸಂಪುಟದಲ್ಲಿಯೇ ಪ್ರಥಮ ಬಾರಿಗೆ ಸಚಿವರಾಗಿ, ನಂತರ ಸಮಬಲವಾಗಿಯೇ ರಾಜ್ಯ ಸಂಪುಟದ ಖಾತೆಗಳನ್ನು ನಿಭಾಯಿಸಿರುವುದು, ಇಬ್ಬರೂ ಕೆಪಿಸಿಸಿ ಅಧ್ಯಕ್ಷರಾಗಿರುವುದು ಹಾಗೂ ವಿರೋಧ ಪಕ್ಷದ ನಾಯಕರಾಗಿರುವುದು. ಧರ್ಮಸಿಂಗ್ ಸಿಎಂ ಆಗಿದ್ದರೆ, ಖರ್ಗೆಗೆ ಮಾತ್ರ ಮುಖ್ಯಮಂತ್ರಿಯಾಗುವ ಭಾಗ್ಯ ಇನ್ನೂ ದೊರಕಿಲ್ಲ. ಅದೇ ರೀತಿ, ಧರ್ಮಸಿಂಗ್ ಕೇಂದ್ರದ ಮಂತ್ರಿಯಾಗಿಲ್ಲ. ಈ ಎರಡೇ ಅವಕಾಶದಲ್ಲಿ ಮಾತ್ರ ವ್ಯತ್ಯಾಸವಿದೆ.
Related Articles
ಧರ್ಮಸಿಂಗ್-ಮಲ್ಲಿಕಾರ್ಜುನ ಖರ್ಗೆ ಅವರಂತೆ ಇವರಿಬ್ಬರ ಮಕ್ಕಳ ಜೋಡಿ ಸಹ ಮುಂದುವರಿದಿದೆ. 2013 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಡಾ| ಅಜಯಸಿಂಗ್ ಹಾಗೂ ಪ್ರಿಯಾಂಕ್ ಖರ್ಗೆ ಗೆಲುವು ಸಾಧಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲೂ ಅಪ್ಪಂದಿರಂತೆ ಪುತ್ರರು, ಒಂದೇ ತೆರನಾದ ಹಲವಾರು ರಾಜಕೀಯ ಅನುಭವ ಹೊಂದಿದ್ದಾರೆ.
Advertisement
ಕೆಪಿಸಿಸಿಯಲ್ಲಿ ಇಬ್ಬರೂ ಕೆಲಸ ಮಾಡಿದ್ದಾರೆ. ಸೋಲಿನಲ್ಲೂ ಸಮಾನತೆ ಹೊಂದಿದ್ದಾರೆ. 2009ರಲ್ಲಿ ಚಿತ್ತಾಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಸ್ಪರ್ಧಿಸಿ ಪರಾಭವಗೊಂಡಿದ್ದರೆ, 2010ರಲ್ಲಿ ನಡೆದ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಡಾ|ಅಜಯಸಿಂಗ್ ಪರಾಭವಗೊಂಡಿದ್ದರು. ಇಬ್ಬರೂ ಉಪಚುನಾವಣೆಯಲ್ಲಿ ಸೋತು ಸಮಾನತೆ ಪಡೆದುಕೊಂಡಿ ದ್ದಾರೆ. ಆದರೆ, ಪ್ರಿಯಾಂಕ್ ಖರ್ಗೆಯವರು ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಲ್ಲದೆ, ಪ್ರಸ್ತುತ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲೂ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಡಾ| ಅಜಯಸಿಂಗ್ ಅವರಿಗೆ ಸಚಿವರಾಗುವ ಭಾಗ್ಯ ಇನ್ನೂ ದೊರಕಿಲ್ಲ.
ಹಣಮಂತ ರಾವ ಭೈರಾಮಡಗಿ