Advertisement

ಖರ್ಗೆಗೆ ದೇವರಾಜು ಅರಸು ಪ್ರಶಸ್ತಿ ಪ್ರದಾನ

12:11 PM Aug 21, 2017 | Team Udayavani |

ಬೆಂಗಳೂರು: “ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಇದರ ನೆಪದಲ್ಲಿ ರಾಜ್ಯಗಳ ಹಕ್ಕು ಕಸಿಯುವ ಕೆಲಸ ಮಾಡುವುದು ಅಥವಾ ರಾಜ್ಯದ ಸ್ವಾಯತ್ತತೆಗೆ ಕೇಂದ್ರ ಸರ್ಕಾರ ಕೈ ಹಾಕುವುದನ್ನು ನೋಡುತ್ತಾ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ’ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. 

Advertisement

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಭಾನುವಾರ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 102ನೇ ಜನ್ಮದಿನಾಚರಣೆ ಹಾಗೂ 2017ನೇ ಸಾಲಿನ ರಾಜ್ಯಮಟ್ಟದ ಡಿ. ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಅರಸು ಪ್ರಶಸ್ತಿ ಪ್ರದಾನ ಮಾಡಿ ಸಿದ್ದರಾಮಯ್ಯ ಮಾತನಾಡಿದರು. “ಈಚೆಗೆ ರಾಜ್ಯಕ್ಕೆ ಭೇಟಿ ಕೊಟ್ಟಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವುದನ್ನು ರಾಜ್ಯ ಸರ್ಕಾರ ವಿರೋಧಿಸಿದೆ ಎಂದು ಪಾಠ ಹೇಳಿ ಹೋಗಿದ್ದಾರೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವುದಕ್ಕೆ ನಮ್ಮ ವಿರೋಧವಿಲ್ಲ. ಕೇಂದ್ರ ಸರ್ಕಾರದ ತೀರ್ಮಾನ ಒಕ್ಕೂಟ ವ್ಯವಸ್ಥೆಯಲ್ಲಿ 1992ರಲ್ಲಿನ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ ಇರಬೇಕು. ರಾಜ್ಯದ ಸ್ವಾಯತ್ತತೆಗೆ ಧಕ್ಕೆ ಬರಬಾರದು ಎಂಬ ಅಂಶದಲ್ಲಿ ನಾವು ಕೇಂದ್ರ ಸರ್ಕಾರದ ತೀರ್ಮಾನವನ್ನು ವಿರೋಧಿಸುತ್ತಿದ್ದೇವೆ ‘ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ, ಸಚಿವರಾದ ಕೆ.ಜೆ.ಜಾರ್ಜ್‌, ರೋಷನ್‌ಬೇಗ್‌, ವಿಧಾನಪರಿಷತ್‌ ಸದಸ್ಯ ಎಚ್‌. ಎಂ.ರೇವಣ್ಣ, ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಜೆ.ಹುಚ್ಚಪ್ಪ, ಸಾಹಿತಿ ಡಾ. ಹಂಪಾ ನಾಗರಾಜಯ್ಯ ಮತ್ತಿತರರು ಇದ್ದರು. 

ಜನ ನಮ್ಮ ಜೊತೆ ಇದ್ದಾಗ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ದೇಶಕ್ಕೆ ಕಾಂಗ್ರೆಸ್‌ ಕೊಡುಗೆ ದೊಡ್ಡದು. ಇಂದಿರಾಗಾಂಧಿಯವರು ಹತ್ತಂಶ, ಇಪ್ಪತ್ತಂಶದ ಕಾರ್ಯಕ್ರಮ ಗಳನ್ನು ಕೊಟ್ಟರು. ದೇವರಾಜ ಅರಸು ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಇಂದು ಸಿದ್ದರಾಮಯ್ಯ ಸಹ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಪಕ್ಷವನ್ನು ಬಲಪಡಿಸುವ ವಿಚಾರದಲ್ಲಿ ಇಲ್ಲಿಯವರೆಗೆ ನಾನು ಯಾವತ್ತೂ ಹಿಂದೇಟು ಹಾಕಿಲ್ಲ, ಮುಂದೆಯೂ ಹಾಕಲ್ಲ.
ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next