Advertisement

ರಾಯಚೂರು ಜಿಲ್ಲಾ ಕಾಂಗ್ರೆಸ್‌ಗೆ ಖರ್ಗೆ ಟಾನಿಕ್‌!

06:20 PM Oct 31, 2022 | Team Udayavani |

ರಾಯಚೂರು: ಆಂತರಿಕ ಭಿನ್ನಮತ, ಅಸಮಾಧಾನ ಗಳಿಂದ ಹಂತ-ಹಂತವಾಗಿ ಬಲ ಕಳೆದುಕೊಳ್ಳುತ್ತಿದ್ದ ಜಿಲ್ಲಾ ಕಾಂಗ್ರೆಸ್‌ಗೆ ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆ ಟಾನಿಕ್‌ ಸಿಕ್ಕಂತಾಗಿದೆ. ಕಲ್ಯಾಣ ಕರ್ನಾಟಕದ ಭಾಗದ ನಾಯಕರೊಬ್ಬರು ಎಐಸಿಸಿ ಅಧ್ಯಕ್ಷರಾಗಿರುವುದು ಪಕ್ಷದ ನಾಯಕರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ರಾಜ್ಯ ರಾಜಕಾರಣದಲ್ಲಿ ತಮ್ಮದೇಯಾದ ಭಿನ್ನ ಗತ್ತು ಹೊಂದುವ ಮೂಲಕ ಗಮನ ಸೆಳೆದಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಈಗ ಎಐಸಿಸಿ ಚುಕ್ಕಾಣಿ ಹಿಡಿದಿದ್ದಾರೆ.

Advertisement

ಜಿಲ್ಲೆಯಲ್ಲೂ ಅವರ ಆಪ್ತ ಬಳಗವಿದ್ದು, ಮುಂಬರುವ ಚುನಾವಣೆಗೆ ಖರ್ಗೆ ಆಯ್ಕೆಯಿಂದ ತಮಗಾಗುವ ಲಾಭ ನಷ್ಟಗಳ ಲೆಕ್ಕಾಚಾರ ಹಾಕುತ್ತಿದ್ದಾರೆ. ಖರ್ಗೆ ಅವರ ಪದಗ್ರಹಣ ಕಾರ್ಯಕ್ರಮಕ್ಕೂ ಜಿಲ್ಲೆಯ ಕಾಂಗ್ರೆಸ್‌ ನಾಯಕರ ನಿಯೋಗ ತೆರಳಿ ಖರ್ಗೆ ಅವರಿಗೆ ಶುಭ ಕೋರಿ ಬಂದಿದೆ. ಜಿಲ್ಲಾಧ್ಯಕ್ಷ ಬಿ.ವಿ. ನಾಯಕ ನೇತೃತ್ವದಲ್ಲಿ ಶಾಸಕರು, ಮಾಜಿ ಶಾಸಕರು ಮಾತ್ರವಲ್ಲದೇ ಅನೇಕ “ಕೈ’ ನಾಯಕರು ದಿಲ್ಲಿಯಲ್ಲಿ ಬೀಡು ಬಿಟ್ಟು ಖರ್ಗೆ ಜತೆ ಉಭಯ ಕುಲಶೋಪರಿ ಮಾಡಿ ಬಂದಿದ್ದಾರೆ. ಕಲಬುರಗಿ ಜಿಲ್ಲೆಯನ್ನು ಹೆಚ್ಚು ಪ್ರತಿನಿಧಿ ಸುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, 371 ಜೆ ಅನುಷ್ಠಾನದ ಬಳಿಕ ಕಲ್ಯಾಣ ಕರ್ನಾಟಕ ಭಾಗದ
ಪ್ರಶ್ನಾತೀತ ನಾಯಕರಾದರು. ಆದರೆ, ರಾಜ್ಯದಲ್ಲಿ ಅವರಿಗೆ ಹೆಚ್ಚಿನ ಅ ಧಿಕಾರಗಳು ಸಿಗದಿದ್ದಾಗ ಬೇರೆ ಜಿಲ್ಲೆಗಳ ಮೇಲೆ ಅವರ ಪ್ರಭಾವ ಅಷ್ಟಾಗಿ ಇರಲಿಲ್ಲ.

ಆದರೆ, ಕೇಂದ್ರ ರೈಲ್ವೆ ಸಚಿವರಾದಾಗ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೈಲಾದ ಸೇವೆ ಮಾಡಿದ್ದರು. ಈಗ ಎಐಸಿಸಿ ಚುಕ್ಕಾಣಿಯೇ ಹಿಡಿದಿದ್ದು, ಮುಂದೆ ಅವರಿಂದ ಏನೆಲ್ಲ ಸೇವೆ ಜಿಲ್ಲೆಗೆ ಸಿಗಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.

ಟಿಕೆಟ್‌ನದ್ದೇ ಲೆಕ್ಕಾಚಾರ: ಜಿಲ್ಲೆಯಲ್ಲಿ ಏಳು ವಿಧಾನಸಭೆ ಕ್ಷೇತ್ರಗಳಿದ್ದು, ಎರಡು ಸಾಮಾನ್ಯ, ನಾಲ್ಕು ಪರಿಶಿಷ್ಟ ಪಂಗಡ ಹಾಗೂ ಒಂದು ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ವಿಶೇಷವೆಂದರೆ ಕೆಲವೆಡೆ ದ್ವಿಕೋನ, ಕೆಲವೆಡೆ ತ್ರಿಕೋನ ಸ್ಪರ್ಧೆಗಳಿದ್ದು ಎಲ್ಲ ಕಡೆಯೂ ಕಾಂಗ್ರೆಸ್‌ ಪ್ರಬಲವಾಗಿದೆ. ಹೀಗಾಗಿ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ ಟಿಕೆಟ್‌ಗೆ ಬೇಡಿಕೆಯಂತೂ ಸಾಕಷ್ಟಿದೆ. ಇದೇ ಕಾರಣಕ್ಕೆ ಮುಂಬರುವ ಚುನಾವಣೆ ಯಲ್ಲಿ ಟಿಕೆಟ್‌ ನಿರೀಕ್ಷೆಯಲ್ಲಿರುವ ಆಕಾಂಕ್ಷಿಗಳು ಖರ್ಗೆ ಅವರ ಕೃಪಾಕಟಾಕ್ಷವಿದ್ದರೆ ಸುಲಭಕ್ಕೆ ಟಿಕೆಟ್‌ ಪಡೆದುಕೊಳ್ಳಬಹುದು ಎಂಬ ಲೆಕ್ಕಾಚಾರ ಕೂಡ ಮಾಡುತ್ತಿರುವಂತಿದೆ. ಇನ್ನೂ ಇಷ್ಟು ದಿನ ತೆರೆ ಮರೆಯಲ್ಲಿದ್ದಂಥ ಖರ್ಗೆಯವರ ಪಕ್ಕಾ ಅನುಯಾ ಯಿಗಳು ಈಗ ಮುನ್ನೆಗೆ ಬಂದಿರುವುದು ವಿಶೇಷ.

ಭಿನ್ನಮತ ಶಮನವಾಗಬೇಕಿದೆ
ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ನಲ್ಲಿ ಈಗ ಭಿನ್ನಮತದ್ದೇ ಸುದ್ದಿ. ಪಕ್ಷದ ಆಂತರಿಕ ಕಚ್ಚಾಟ ಇತ್ತೀಚೆಗೆ ಬೀದಿಗೆ ಬರುತ್ತಿದ್ದು, ಪಕ್ಷದಲ್ಲಿ ಶಿಸ್ತು ಕ್ಷೀಣಿಸಿದೆ ಎಂದು ಹಿರಿಯ ನಾಯಕರೇ ಅಸಮಾಧಾನ ತೋಡಿಕೊಂಡಿದ್ದಾರೆ. ಈ ಭಿನ್ನಮತವೇ ಚುನಾವಣೆಯಲ್ಲಿ ಸೋಲು, ಗೆಲುವುಗಳನ್ನು ನಿರ್ಧರಿಸಿರುತ್ತಿರುವುದು ಕಳೆದ ಚುನಾವಣೆಯಲ್ಲಿ ಸಾಬೀತಾಗಿದೆ ಕೂಡ. ಆದರೂ, ಇಂದಿಗೂ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಮುಂದುವರಿಯುತ್ತಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಎದುರಲ್ಲೇ ಜಗಳವಾಗಿರುವುದು ತಾಜಾ ನಿದರ್ಶನ. ಈ ಗೊಂದಲವನ್ನು ಪಕ್ಷದ ಜಿಲ್ಲಾಧ್ಯಕ್ಷರು, ಇಲ್ಲವೇ ಕೆಪಿಸಿಸಿ ನಾಯಕರು ನಿವಾರಿಸಬೇಕು. ಆದರೆ, ಕಲ್ಯಾಣ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಖರ್ಗೆಯವರಿಗೆ ಇಂಥ ಸಂಗತಿಗಳು ಮುಜುಗರ ತರಿಸುವಂತಾದರೆ ಕಷ್ಟ.

Advertisement

ವರವಾಗುವುದೇ ರಾಹುಲ್‌ ಭೇಟಿ?
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ  ನಡೆಸಿದ ಭಾರತ ಐಕ್ಯತಾ ಯಾತ್ರೆ ಕೂಡ ಜಿಲ್ಲೆಯಲ್ಲಿ ಮೂರು ದಿನ ನಡೆದಿರುವುದು ಪಕ್ಷಕ್ಕೆ ವರವೇ ಎನ್ನಲಾಗುತ್ತಿದೆ. ರಾಯಚೂರು ಗ್ರಾಮೀಣ ಮತ್ತು ನಗರ ಕ್ಷೇತ್ರದಲ್ಲಿ ಸಂಚರಿಸಿದ ಯಾತ್ರೆಗೆ ಎಲ್ಲಿಲ್ಲದ ಬೆಂಬಲ ಸಿಕ್ಕಿತ್ತು. ರಾಹುಲ್‌ ಗಾಂಧಿ ಜತೆ ಹೆಜ್ಜೆ ಹಾಕಿದ ಹೆಜ್ಜೆಗಳು ಮತಗಳಾಗಿ ಪರಿವರ್ತನೆಗೊಂಡಲ್ಲಿ ಕಾಂಗ್ರೆಸ್‌ಗೆ  ನಿಜಕ್ಕೂ ವರವಾಗಲಿದೆ.

*ಸಿದ್ಧಯ್ಯಸ್ವಾಮಿ ಕುಕನೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next