ಚಿತ್ರದುರ್ಗ: ಗುಜರಾತ್ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಪ್ರತೀ ಭಾಷಣದಲ್ಲೂ ನಾನು ಈ ಮಣ್ಣಿನ ಮಗ, ಈ ಊರಿನ ಮಗ, ನಮಗೆ ಆಶೀರ್ವದಿಸಿ ಎಂದು ಮಾತನಾಡುತ್ತಿದ್ದರು. ನಾನು ಈಗ ಎಐಸಿಸಿ ಅಧ್ಯಕ್ಷನಾಗಿ ಅದನ್ನೇ ಕೇಳುತ್ತಿದ್ದೇನೆ. ನಾನು ಈ ಮಣ್ಣಿನ ಮಗ. ನಮ್ಮ ಕೈ ಹಿಡಿಯಿರಿ…
-ಇದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೋರಿಕೆ. ರವಿವಾರ ಚಿತ್ರದುರ್ಗದ ಜಯದೇವ ಕ್ರೀಡಾಂಗಣದಲ್ಲಿ ಕೆಪಿಸಿಸಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಏಕತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಗುಜರಾತ್ ನಾಯಕರನ್ನು ನಾವು ತಲೆ ಮೇಲೆ ಇರಿಸಿಕೊಂಡು ಮೆರೆದಿದ್ದೇವೆ. ಮಹಾತ್ಮಾ ಗಾಂಧೀಜಿ ರಾಷ್ಟ್ರಪಿತ. ಅವರನ್ನು ತಲೆ ಮೇಲೆ ಇರಿಸಿಕೊಂಡಿದ್ದೇವೆ. ಪಟೇಲರು ಗುಜರಾತಿನವರು. ಆದರೆ ಮೋದಿ ಅವರು ಗುಜರಾತ್ ಚುನಾವಣೆಯಲ್ಲಿ ಬೇರೆಯವರಿಗೆ ಮತ ಹಾಕಿದರೆ ಗುಜರಾತ್ ನಾಯಕರಿಗೆ ಅವಮಾನ ಮಾಡಿದಂತೆ ಎಂದು ಹೇಳಿದ್ದರು.
ಗುಜರಾತ್‌ನಲ್ಲಿ ಮೋದಿ ಅವರು ತಮ್ಮನ್ನು ಆಶೀರ್ವದಿಸುವಂತೆ ಪ್ರತೀ ಭಾಷಣದಲ್ಲೂ ಮನವಿ ಮಾಡುತ್ತಿದ್ದರು. ಈಗ ನಾನೂ ಅದನ್ನೇ ಕೇಳುತ್ತಿದ್ದೇನೆ. ನಾನು ಈ ಮಣ್ಣಿನ ಮಗ. ನಾವೆಲ್ಲರೂ ಕರ್ನಾಟಕದವರು. ನಮ್ಮನ್ನು ಆಯ್ಕೆ ಮಾಡಿ. ಮುಂದಿನ ಅವಧಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
Related Articles
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿಯ ಸುಳ್ಳಿನ ಕಂತೆಗೆ ನೀವು ಬಲಿಯಾಗಬೇಡಿ. ಸುಳ್ಳು ಅವರ ಮನೆ ದೇವರು. ಚುನಾವಣೆಯಲ್ಲಿ ಕೊಟ್ಟ ಭರವಸೆಯನ್ನು ಬಿಜೆಪಿ ಈಡೇರಿಸುತ್ತಿಲ್ಲ. ಬಿಜೆಪಿ ಭಾವನೆ ಮೇಲೆ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್ ಬದುಕಿನ ಮೇಲೆ ದೇಶ ಕಟ್ಟಲಿದೆ ಎಂದರು.
ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಮೀಸಲಾತಿಗೆ ಕಾನೂನು ರಕ್ಷಣೆ ಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಜ. 30ರೊಳಗೆ ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸದಿದ್ದರೆ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲಿದೆ.
– ಸಿದ್ದರಾಮಯ್ಯ, ವಿಪಕ್ಷ ನಾಯಕ