Advertisement

ಖರ್ಗೆ ಸಿಎಂ: ಸಿದ್ದು ಮನವೊಲಿಕೆಗೆ ಕಸರತ್ತು

09:47 AM Dec 05, 2019 | Lakshmi GovindaRaju |

ಬೆಂಗಳೂರು: ಉಪಚುನಾವಣೆ ಫ‌ಲಿತಾಂಶದ ಬಳಿಕ ಬಿಜೆಪಿಗೆ ಸರ್ಕಾರ ನಡೆಸುವುದು ಕಷ್ಟವಾದರೆ, ಕೈ-ತೆನೆ ಮರುಮೈತ್ರಿ ಮಾಡಿಕೊಂಡು ಎಂ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಲು ರಮೇಶ್‌ಕುಮಾರ್‌ ಪೌರೋಹಿತ್ಯ ವಹಿಸಲು ಸಿದ್ಧರಾಗಿದ್ದಾರೆಯೇ? ಅಂತಹ ಸಂದರ್ಭದಲ್ಲಿ ಖರ್ಗೆ ಅವರ ಹೆಸರನ್ನು ತಪ್ಪಿಸದಂತೆ ಮಾಡಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮನವೊಲಿಸಲು ಅವರ ಆಪ್ತ, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರಿಗೆ ಹೊಣೆ ನೀಡಲಾಗಿದೆ ಎಂದು ಹೇಳಲಾಗಿದೆ.

Advertisement

ಮಲ್ಲಿಕಾರ್ಜುನ ಖರ್ಗೆ ಅವರ ಹೆಸರಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಹಮತ ಇದೆ. ಒಂದು
ವೇಳೆ ಆ ಪರಿಸ್ಥಿತಿ ಉದ್ಭವವಾದರೆ, ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷಗಿರಿ ವಹಿಸಿಕೊಂಡು ಪಕ್ಷ ಮುನ್ನಡೆಸಲಿ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ಬಂದರೆ ತಪ್ಪಿಸುವುದು ಬೇಡ. ಈ ಬಗ್ಗೆ ಮಾತನಾಡಿ ಎಂದು ರಮೇಶ್‌ ಕುಮಾರ್‌ಗೆ ಕಾಂಗ್ರೆಸ್‌ ಹೈಕಮಾಂಡ್‌ ಮೂಲಕ ಜೆಡಿ ಎಸ್‌ ಒತ್ತಡ ಹೇರುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದಾದರೆ ದೇವೇಗೌಡರುಒಪ್ಪುವುದಿಲ್ಲ. ಎಚ್‌.ಡಿ.ಕುಮಾರಸ್ವಾಮಿ
ಬಿಜೆಪಿಯತ್ತ ಒಲವು ತೋರುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಎಂದಾದರೆ ಕುಮಾರಸ್ವಾಮಿಯವರು ಸಹ
ವಿರೋಧ ವ್ಯಕ್ತಪಡಿಸಲಾರರು ಎಂದು ವಿಶ್ಲೇಷಿಸಲಾಗಿದೆ. ಕೆ.ಆರ್‌.ಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮುಗಿಸುವವರೆಗೂ ಸಿದ್ದರಾಮಯ್ಯ
ನವರು ಪ್ರಚಾರ ವಾಹನ ಏರದ ಪ್ರಕರಣದ ಬಗ್ಗೆ ಮಾಹಿತಿ ಪಡೆದ ಕಾಂಗ್ರೆಸ್‌ ಹೈಕಮಾಂಡ್‌, ಇದೇ ರೀತಿ
ಮುಂದುವರಿದರೆ ಕಷ್ಟವಾಗುತ್ತದೆ ಎಂದು ರಮೇಶ್‌ ಕುಮಾರ್‌ಗೆ ತಿಳಿಸಿತ್ತು ಎನ್ನಲಾಗಿದೆ.

ಇದಾದ ನಂತರವೇ ರಮೇಶ್‌ ಕುಮಾರ್‌ ಅವರು ಚಿಕ್ಕಬಳ್ಳಾಪುರದ ಪ್ರಚಾರ ಸಭೆಗೆ ಸಿದ್ದರಾಮಯ್ಯ
ಹಾಗೂ ಮಲ್ಲಿಕಾರ್ಜುನ ಖರ್ಗೆ ಇಬ್ಬರೂ ಒಂದೇ ವಾಹನ ಏರಿ ಉಪ ಚುನಾವಣೆಯಲ್ಲಿ ಮೊದಲ
ಬಾರಿಗೆ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಂಡರು. ಇಬ್ಬರೂ ನಾಯಕರ ಪ್ರಚಾರದ
ಸಮಯ ಬೇರೆ ಇದ್ದರೂ, ರಮೇಶ್‌ ಕುಮಾರ್‌ ಹಾಗೂ ಮಾಜಿ ಸಚಿವ ಕೃಷ್ಣ ಬೈರೇಗೌಡ ಇಬ್ಬರೂ
ಒಂದೇ ವಾಹನದಲ್ಲಿ ಪ್ರಚಾರ ಮಾಡುವಂತೆ ಮನವೊಲಿಸಿ ಯಶಸ್ವಿಯಾದರು. ಇದಾದ ನಂತರ
ಶಿವಾಜಿನಗರದಲ್ಲೂ ಒಂದೇ ವೇದಿಕೆಯಲ್ಲಿ ಪ್ರಚಾರ ಮಾಡಿದರು ಎಂದು ಹೇಳಲಾಗಿದೆ.

ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರ ಮಾತನ್ನು ಸಿದ್ದರಾಮಯ್ಯ ಕೇಳುತ್ತಾರೆ. ಜತೆಗೆ, ಕೃಷ್ಣ
ಬೈರೇಗೌಡರ ಬಗ್ಗೆಯೂ ಸಿದ್ದರಾಮಯ್ಯ ಅವರಿಗೆ ಪ್ರೀತಿ. ಹೀಗಾಗಿ, ಇಬ್ಬರೂ ಮಲ್ಲಿಕಾರ್ಜುನ ಖರ್ಗೆ
ಅವರ ಜತೆಯೇ ಪ್ರಚಾರ ಮಾಡಲು ಮನವೊಲಿಸಿದರು ಎಂದು ಮೂಲಗಳು ತಿಳಿಸಿವೆ.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಒಲಿದು ಬರುವ ಅವಕಾಶ ಇದ್ದರೆ ಅದಕ್ಕೆ ಅಡ್ಡಿ
ಮಾಡುವುದು ಬೇಡ. ಅವರಿಗೆ ಅವಕಾಶ ಕೊಡುವಂತೆ ನೀವೇ ಮುಂದೆ ನಿಂತು ಮನವಿ ಮಾಡಿ. ಆಗ ನಿಮ್ಮ ವರ್ಚಸ್ಸು ಬೆಳೆಯುತ್ತದೆ. ಅಹಿಂದ ನಾಯಕರಾಗಿರುವ ನೀವು ಮಲ್ಲಿಕಾರ್ಜುನ ಖರ್ಗೆ ಅವರಿಗೆ
ಮುಖ್ಯಮಂತ್ರಿಯಾಗಲು ಸಹಕಾರ ನೀಡಿದರೆ ಉತ್ತಮ ಸಂದೇಶ ರವಾನೆಯಾಗುತ್ತದೆ. ಬಿಜೆಪಿಯನ್ನು
ದೂರ ಇಟ್ಟಂತೆಯೂ ಆಗುತ್ತದೆ ಎಂದು ರಮೇಶ್‌ ಕುಮಾರ್‌ ಸಹ ಸಿದ್ದರಾಮಯ್ಯ ಅವರಿಗೆ ಆಪ್ತವಾಗಿ
ಹೇಳಿದ್ದಾರೆ ಎಂದು ಹೇಳಲಾಗಿದೆ.

Advertisement

ಡಿ.5ರಂದು ಮತದಾನ ಮುಗಿದ ನಂತರ ಹೈಕಮಾಂಡ್‌ ಕಾಂಗ್ರೆಸ್‌ ನಾಯಕರಿಗೆ ಬುಲಾವ್‌
ನೀಡಿದೆ. ಇದರ ಬೆನ್ನಿಗೇ ಮಾಜಿ ಪ್ರಧಾನಿ ಎಚ್‌ .ಡಿ.ದೇವೇಗೌಡರು ದೆಹಲಿಗೆ ಹೋಗಿ ಕಾಂಗ್ರೆಸ್‌
ಮುಖಂಡರ ಜತೆ ಮಾತುಕತೆ ನಡೆಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

● ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next