ಕನ್ನಡದಲ್ಲಿ ಮತ್ತೂಂದು ಹೊಸಬರ ಸಿನಿಮಾ ಶುರುವಾಗಿದೆ.ಹೆಸರು “ಖರಾಬ್ ದುನಿಯಾ’. ವಿಕಾಸ್ ಮದಕರಿ ಚಿತ್ರದ ನಿರ್ದೇಶಕರು. ಅಷ್ಟೇ ಅಲ್ಲ, ಚಿತ್ರದ ನಾಯಕರಾಗಿಯೂ ಅವರೇ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದಾರೆ. ಶೀರ್ಷಿಕೆಯೇ ಹೇಳುವಂತೆ, ಇದೊಂದು ರಾ ಫೀಲ್ ಇರುವ ಸಿನಿಮಾ.
ಇಲ್ಲಿ ಕ್ರೆ„ಮ್, ರಾಬರಿ, ರೌಡಿಸಂ ಇತ್ಯಾದಿ ಇತ್ಯಾದಿ ಅಂಶಗಳು ಸೇರಿವೆ. ಅವೆಲ್ಲದರೊಂದಿಗೆ ಒಂದು ನವಿರಾದ ಪ್ರೀತಿಯ ಕಥೆಯೂ ಉಂಟು. ಕಳೆದ ಶುಕ್ರವಾರ ಚಿತ್ರಕ್ಕೆ ಮುಹೂರ್ತ ನಡೆದಿದೆ. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು ಕ್ಯಾಮೆರಾ ಆನ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ವಿಕಾಸ್ ಮದಕರಿ ಅವರು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಅವರ ಈ ಪ್ರಯತ್ನಕ್ಕೆ ಯೋಗೀಶ್ ಹಾಗೂ ಸಿ.ಶೇಖರ್ ಹಣ ಹಾಕುವ ಮೂಲಕ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ವಿಕಾಸ್ ಮದಕರಿ ಈ ಹಿಂದೆ “ಕೋಮಲಿ’ ಚಿತ್ರವನ್ನೂ ನಿರ್ದೇಶಿಸಿದ್ದರು. ಇದು ಅವರ ಎರಡನೇ ಸಿನಿಮಾ. ಇದು ನೈಜ ಘಟನೆ ಸುತ್ತ ಸಾಗುವ ಸಿನಿಮಾ. ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಒಂದು ಅತ್ಯಾಚಾರ ಹಾಗೂ ಕೊಲೆ ನಡೆದಿತ್ತು. ಅದೇ ಘಟನೆ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕರು. ಈ ಚಿತ್ರಕ್ಕೆ ಸಂಹಿತಾ ವಿನ್ಯಾ ನಾಯಕಿಯಾಗಿದ್ದಾರೆ. ಸಂಹಿತಾ ಈ ಹಿಂದೆ “ಕೆ ಕೆ’ ಹಾಗೂ “ಹಾಲು ತುಪ್ಪ’ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಸಂಹಿತಾಗೆ ಕಥೆ ಕೇಳಿದಾಗ, ರಾ ಫೀಲ್ ಆಗಿದೆ ಅನಿಸಿತಂತೆ. ಆದರೆ, ಪಾತ್ರಕ್ಕೆ ಹೆಚ್ಚು ಆದ್ಯತೆ ಕೊಟ್ಟಿರುವುದರಿಂದ ಒಪ್ಪಿಕೊಂಡರಂತೆ. ಒಬ್ಬ ಸಾಮಾನ್ಯ ವ್ಯಕ್ತಿಯ ಬದುಕಿನಲ್ಲಿ ಒಂದಷ್ಟು ಘಟನೆಗಳು ನಡೆಯುತ್ತವೆ. ಅವು ಸದಾ ನೆನಪಲ್ಲುಳಿಯುತ್ತವೆ. ಆದರೆ, ಸಮಾಜಕ್ಕೆ ಮಾರಕವಾಗುವ ಅಂಥಾ ಘಟನೆಗಳ ಹಿಂದೆ ಆತ ಹೋದಾಗ ಏನೆಲ್ಲಾ ಆಗುತ್ತದೆ ಎಂಬುದು ಕಥೆಯ ಒನ್‌ಲೈನ್ ಅಂತೆ.
ಬೆಂಗಳೂರು ಸುತ್ತಮುತ್ತ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಹಿರಿಯ ನಟ ಅವಿನಾಶ್ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಶೋಭರಾಜ್, ಬಿರಾದಾರ್, ಹೊನ್ನವಳ್ಳಿ ಕೃಷ್ಣ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ವೀನಸ್ ಮೂರ್ತಿ ಕ್ಯಾಮೆರಾ ಹಿಡಿದರೆ, ವಿಲಿಯಂ ಐದು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ.