ಚಂಡೀಗಢ: ಪಂಜಾಬ್ ಪೊಲೀಸ್ ಗುಪ್ತಚರ ಕೇಂದ್ರ ಕಚೇರಿ ಮೇಲೆ ಮೇ ತಿಂಗಳಲ್ಲಿ ನಡೆದ ಆರ್‌ಪಿಜಿ ದಾಳಿ ಸೇರಿದಂತೆ ವಿವಿಧ ಭಯೋತ್ಪಾದನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖಲಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂದಾ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ ಎಂದು ರಾಜ್ಯ ಪೊಲೀಸ್ ಮೂಲಗಳು ಶನಿವಾರ ತಿಳಿಸಿವೆ.
ರಿಂದಾ ಸಾವಿಗೆ ಕಾರಣ ತಕ್ಷಣವೇ ತಿಳಿದು ಬಂದಿಲ್ಲವಾದರೂ, ಅವರನ್ನು ಲಾಹೋರ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ನಿಷೇಧಿತ ಖಲಿಸ್ತಾನಿ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಶನಲ್ ನ ಸದಸ್ಯನಾಗಿರುವ ರಿಂಡಾ, ಪಂಜಾಬ್ ನಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ನಡೆಸಲು ಸ್ಥಳೀಯ ದರೋಡೆಕೋರರ ಸಹಾಯವನ್ನು ಪಡೆಯುತ್ತಿದ್ದ.
ಈ ವರ್ಷದ ಮೇ ತಿಂಗಳಲ್ಲಿ ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ ಗುಪ್ತಚರ ಕೇಂದ್ರದ ಮೇಲೆ ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್ (ಆರ್‌ಪಿಜಿ) ದಾಳಿಯಲ್ಲಿ ರಿಂಡಾ ಹೆಸರು ಕಾಣಿಸಿಕೊಂಡಿತ್ತು. ಅದೇ ತಿಂಗಳಲ್ಲಿ ಹರಿಯಾಣದಲ್ಲಿ ವಾಹನವೊಂದರಿಂದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ರಿಂಡಾ ಹೆಸರು ಕೇಳಿಬಂದಿತ್ತು.
ದರೋಡೆಕೋರರು ಮತ್ತು ಪಾಕಿಸ್ತಾನಿ ಮೂಲದ ಭಯೋತ್ಪಾದಕ ಗುಂಪುಗಳ ನಡುವಿನ ಪ್ರಮುಖ ಕೊಂಡಿಯಾಗಿದ್ದ. ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳ ದೊಡ್ಡ ಪ್ರಮಾಣದ ಕಳ್ಳಸಾಗಣೆಯಲ್ಲಿ ರಿಂಡಾ ತೊಡಗಿಸಿಕೊಂಡಿದ್ದ.