ಯಾದಗಿರಿ: ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ನಿಯಂತ್ರಿಸಲು, ಇನ್ನಿತರೆ ಅಪರಾಧ ಪ್ರಕರಣಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು, ಅಪರಾಧ ಕೃತ್ಯದಲ್ಲಿ ಭಾಗಿಯಾಗುವವರಿಗೆ ಬಿಸಿ ಮುಟ್ಟಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ನಗರದಲ್ಲಿ ಮಹಿಳಾ ಸಂಚಾರಿ ಗಸ್ತು ಪಡೆ ನಿಯೋಜಿಸಿದೆ.
ವರದಕ್ಷಿಣೆ ಪ್ರಕರಣ, ಅತ್ಯಾಚಾರ, ಅಪಹರಣ, ಮತ್ತಿತರ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಇದಕ್ಕೆ ಕಡಿವಾಣ ಅಗತ್ಯವಿದೆ ಎಂದುದನ್ನರಿತ ಪೊಲೀಸ್ ಇಲಾಖೆ ಇಂತಹ ಮಹತ್ವದ ನಿರ್ಧಾರ ಕೈಗೊಂಡಿದೆ.
ದಿಲ್ಲಿಯಲ್ಲಿ ನಡೆದ ನಿರ್ಭಯಾ ಪ್ರಕರಣ ನಂತರ ಅತ್ಯಾಚಾರ ವಿರುದ್ಧ ಹಲವಾರು ಕಠಿಣ ಕಾನೂನುಗಳು ಜಾರಿಗೊಂಡಿದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ ಮಾತ್ರ ಕಡಿಮೆಯಾಗಿಲ್ಲ. ನಗರ ಸೇರಿದಂತೆ ಎಲ್ಲೆಡೆ ಮಹಿಳೆಯರ ಬಗ್ಗೆ ಸುರಕ್ಷತೆಯ ಪ್ರಶ್ನೆಗಳು ಉದ್ಭವಿಸಿವೆ. ಇತ್ತೀಚೆಗೆ ಯಾದಗಿರಿ ಜಿಲ್ಲೆಯಲ್ಲಿ ನಡೆದ ಮಹಿಳಾ ದೌರ್ಜನ್ಯ ಪ್ರಕರಣ ರಾಜ್ಯಾದ್ಯಂತ ಗಮನ ಸೆಳೆದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಇಲಾಖೆ “ಮಹಿಳಾ ಗಸ್ತು ಪಡೆ’ ಆರಂಭಿಸಿದೆ.
ಪುಂಡ-ಪೋಕರಿಗಳಿಗೆ ಖಡಕ್ ವಾರ್ನಿಂಗ್: ಯುವತಿಯರಿಗೆ ಕಿರುಕುಳ, ಸರಗಳ್ಳತನ ಸೇರಿದಂತೆ ಮುಂತಾದ ಕೃತ್ಯಗಳಲ್ಲಿ ಭಾಗಿಯಾಗುವ ಪುಂಡ ಪೋಕರಿಗಳಿಗೆ ಬಿಸಿ ಮುಟ್ಟಿಸಲು ಖಾಕಿ ಪಡೆ ಸಜ್ಜುಗೊಂಡಿದೆ. ಯಾವುದೇ ಕೃತ್ಯಗಳು ನಡೆದ ತಕ್ಷಣವೇ ಮಹಿಳೆಯರ ರಕ್ಷಣೆಗೆ ನಿಲ್ಲಲು ಹಾಗೂ ಪುಂಡರ ಹೆಡೆಮುರಿ ಕಟ್ಟಲು ರಕ್ಷಾ ಕವಚದಂತೆ ಕಾರ್ಯ ನಿರ್ವಹಿಸಲು ಗಸ್ತುಪಡೆ ವಾಹನ ಸಿದ್ಧಗೊಂಡಿದೆ. ಈ ಗಸ್ತು ಪಡೆಯಲ್ಲಿ ಹೆಚ್ಚು ಮಹಿಳಾ ಸಿಬ್ಬಂದಿಯೇ ಕಾರ್ಯ
ನಿರ್ವಹಿಸಲಿದ್ದು, ಮಹಿಳಾ ದೌರ್ಜನ್ಯ ಬಗ್ಗೆ ಬರುವ ಯಾವುದೇ ಕರೆಗಳಿಗೆ ತಕ್ಷಣ ಸ್ಪಂದಿಸಲಿದ್ದಾರೆ. ಮಹಿಳಾ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಈ ಗಸ್ತು ಪಡೆಯ ಉಸ್ತುವಾರಿ ವಹಿಸಲಿದ್ದಾರೆ.
ಮಹಿಳೆಯರಲ್ಲಿ ಭದ್ರತೆ ಬಗ್ಗೆ ವಿಶ್ವಾಸ ಮೂಡಿಸುವುದು ಈ ಸಂಚಾರಿ ಗಸ್ತು ಪಡೆ ಮುಖ್ಯ ಉದ್ದೇಶವಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗೆ ಕಾನೂನು ಭಯದ ಜತೆಗೆ ಸಮಾಜ ಹಾಗೂ ಪ್ರತಿ ಮನೆಗಳಲ್ಲಿ ಬದಲಾವಣೆ ನಡೆಯಬೇಕಿದೆ.
ಪೊಲೀಸ್ ಇಲಾಖೆ ವತಿಯಿಂದ ಮಹಿಳಾ ಪೊಲೀಸ್ ಪಡೆ ಗಸ್ತು ವಾಹನ ಸೇವೆಗೆ ಸಜ್ಜುಗೊಂಡಿದೆ. ಸದರಿ ವಾಹನ ದಿನನಿತ್ಯ ಶಾಲೆ, ಕಾಲೇಜು, ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣ ಸೇರಿದಂತೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ಸೇರುವ ಸ್ಥಳಗಳಲ್ಲಿ ಸಂಚರಿಸಲಿದೆ. ಶಾಲಾ-ಕಾಲೇಜಿನ ಹತ್ತಿರ ನಿಂತು ಹೆಣ್ಣು ಮಕ್ಕಳನ್ನು ಚುಡಾಯಿಸುವ, ಸತಾಯಿಸುವುದು ಪುಂಡ ಪೋಕರಿಗಳ ಮೇಲೆ ಈ ಪಡೆ ಕಣ್ಣಿಡಲಿದೆ. ವಾಹನದಲ್ಲಿ ಮಹಿಳಾ ಸಿಬ್ಬಂದಿ ಇರುತ್ತಾರೆ.
ಡಾ| ಸಿ.ಬಿ.ವೇದಮೂರ್ತಿ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
*ಮಹೇಶ ಕಲಾಲ