Advertisement
ವಿಧಾನಸೌಧ, ವಿಕಾಸಸೌಧ, ರಾಜಭವನಕ್ಕೆ ಭಾರಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ರಾಜ್ಯ ಪೊಲೀಸ್ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ಪೊಲೀಸರೊಂದಿಗೆ ಸಿಐಡಿ, ಲೋಕಾಯುಕ್ತ ಪೊಲೀಸರು, ಗೃಹ ರಕ್ಷಕ ದಳದ ಸಿಬ್ಬಂದಿ ಜತೆಗೆ ಕೇಂದ್ರೀಯ ಮೀಸಲು ಪಡೆಯ ಸಿಐಎಸ್‌ಎಫ್, ಬಿಎಸ್‌ಎಫ್, ಸಿಆರ್‌ಪಿಎಫ್, ಆರ್‌ಎಎಫ್ ಭದ್ರತೆಯಿಂದಾಗಿ ವಿಧಾನಸೌಧ ಖಾಕಿ ನಿಯಂತ್ರಣದಲ್ಲಿತ್ತು.
Related Articles
Advertisement
ಅಂಬೇಡ್ಕರ್ ವೀದಿ, ಅರಮನೆ ರಸ್ತೆ, ರಾಜಭವನ ರಸ್ತೆ, ಹೈಕೋರ್ಟ್ ಮುಂಭಾಗ ಮೆಟ್ರೋ ನಿಲ್ದಾಣ ಬಳಿಯು ಭಾರಿ ಸಂಖ್ಯೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಪೊಲೀಸ್ ವಾಹನಗಳಲ್ಲಿ ನಿರಂತರ ಗಸ್ತು ವ್ಯವಸ್ಥೆ ಕಲ್ಪಿಸಲಾಗಿತ್ತು. ಹಿರಿಯ ಐಪಿಎಸ್ ಅಧಿಕಾರಿಗಳೇ ಪ್ರವೇಶ ದ್ವಾರಗಳಲ್ಲಿ ನಿಂತು ಮೇಲುಸ್ತುವಾರಿ ವಹಿಸಿದ್ದರು. ಖಾಕಿ ಕಣ್ಗಾವಲಿನಲ್ಲಿ ವಿಧಾನಸೌಧದ ಆವರಣದಲ್ಲಿ ಜನ, ವಾಹನ ಸಂಚಾರವೂ ವಿರಳವಾಗಿದ್ದ ವಾತಾವರಣದಲ್ಲಿ ಸಾರ್ವಜನಿಕರಲ್ಲಿ ಭಯದ ಭಾವನೆ ಮೂಡಿಸುವಂತಿತ್ತು.
ಬಸ್‌ಗಳಲ್ಲಿ ಬಂದಿಳಿದ ಶಾಸಕರು: ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯು ಶಾಸಕರಿಗೆ ವಿಶೇಷ ಭದ್ರತೆ ಕಲ್ಪಿಸಲಾಗಿತ್ತು. ಶಾಸಕರು, ಪ್ರಮುಖರಿಗೆ ಪಶ್ಚಿಮ ದ್ವಾರದ ಕಡೆಯಿಂದ ಪ್ರವೇಶ ಕಲ್ಪಿಸಲಾಗಿತ್ತು. ಮೊದಲಿಗೆ ಬೆಳಗ್ಗೆ 10.35ರ ಹೊತ್ತಿಗೆ ಕಾಂಗ್ರೆಸ್ ಶಾಸಕರು ಮೂರು ಬಸ್‌ಗಳಲ್ಲಿ ಕೆಂಗಲ್ ಹನುಮಂತಯ್ಯ ಪ್ರವೇಶ ದ್ವಾರದ ಬಳಿಗೆ ಆಗಮಿಸಿದರು. ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಎಚ್.ಕೆ.ಪಾಟೀಲ್, ಕೃಷ್ಣ ಬೈರೇಗೌಡ, ಈಶ್ವರ ಖಂಡ್ರೆ ಸೇರಿದಂತೆ ಶಾಸಕರು ವಿಧಾನಸೌಧ ಪ್ರವೇಶಿಸಿದರು.
ಬೆಳಗ್ಗೆ 10.55ರ ಸುಮಾರಿಗೆ ಬಿಜೆಪಿ ಶಾಸಕರು ಮೂರು ಪ್ರತ್ಯೇಕ ಬಸ್‌ಗಳಲ್ಲಿ ವಿಧಾನಸೌಧಕ್ಕೆ ಆಗಮಿಸಿದರು. ಬಸ್‌ನ ಮೊದಲ ಆಸನದಲ್ಲೇ ಕುಳಿತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದ ಹಾಗೂ ಶಾಸಕರು ಸದನದ ಕಡೆಗೆ ತೆರಳಿದರು. ಬೆಳಗ್ಗೆ 11.05ರ ಹೊತ್ತಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಶಾಸಕರು ಒಂದೇ ಬಸ್‌ನಲ್ಲಿ ವಿಧಾನಸೌಧಕ್ಕೆ ಆಗಮಿಸಿದರು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ಪ್ರತ್ಯೇಕವಾಗಿ ಬಸ್‌ನಿಂದ ಇಳಿದು ವಿಧಾನಸೌಧದ ಮೆಟ್ಟಿಲೇರುವವರೆಗೆ ಎರಡೂ ಕಡೆ ಪೊಲೀಸರು, ಅಂಗರಕ್ಷಕರು ಸಾಲಾಗಿ ನಿಂತು ಭದ್ರತೆ ಕಲ್ಪಿಸಿದರು. ಜತೆಗೆ ಆಯಾ ಪಕ್ಷಗಳ ವಿಧಾನ ಪರಿಷತ್ ಸದಸ್ಯರು ಸಹ ಸರತಿಯಲ್ಲಿ ಶಾಸಕರು ಸದನಕ್ಕೆ ಹೋಗಲು ನೆರವಾದರು.