ಕಲಬುರಗಿ: ಜಿಲ್ಲೆಯ ಗಡಿ ಗ್ರಾಮ ಆಳಂದ ತಾಲೂಕಿನ ಖಜೂರಿಯಲ್ಲಿ ಮನೆಯೊಂದಕ್ಕೆ ನುಗ್ಗಿ ವೃದ್ಧೆಯನ್ನು ಕೊಚ್ಚಿ ಹಾಗೂ ಮನೆಯಲ್ಲಿದ್ದ ಐವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ್ದ ಅಂತಾರಾಜ್ಯ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಏಪ್ರಿಲ್ 28ರಂದು ಖಜೂರಿ ಗ್ರಾಮದ ಸಿದ್ಧರಾಮ ಬಂಡೆ ಅವರ ಮನೆಗೆ ನುಗ್ಗಿದ ದರೋಡೆಕೋರರು ಸೋನುಬಾಯಿ ಎನ್ನುವ ವೃದ್ಧೆಗೆ ಚಾಕು ಹಾಗೂ ರಾಡುಗಳಿಂದ ಹೊಡೆದು ಕೊಲೆ ಮಾಡಿ, ಮನೆಯಲ್ಲಿದ್ದ ಸುಜಾತಾ, ಶ್ರೀದೇವಿ, ಸಿದ್ಧರಾಮ ಬಂಡೆ ಹಾಗೂ ಇಬ್ಬರು ಮಕ್ಕಳನ್ನು ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ 13 ತೊಲಿ ಬಂಗಾರ ದರೋಡೆ ಮಾಡಿದ್ದರು. ಇದಾದ ಒಂದು ವಾರದ ನಂತರ ಇದೇ ಮನೆ ಮತ್ತೂಮ್ಮೆ ಕಳ್ಳತನವಾಗಿತ್ತು. ಹೀಗಾಗಿ ಪೊಲೀಸ್‌ರಿಗೆ ಈ ಪ್ರಕರಣ ಸವಾಲಾಗಿತ್ತು. ಈಗ ಪತ್ತೆ ಹಚ್ಚಲಾಗಿದೆ. ಈಗಾಗಲೇ ಕಲಬುರಗಿ ಅಲ್ಲದೇ ನೆರೆಯ
ಮಹಾರಾಷ್ಟ್ರದಲ್ಲೂ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿ ಒಮ್ಮೆಯೂ ಬಂಧನಕ್ಕೆ ಒಳಗಾಗದ ಕುಖ್ಯಾತ ಕಲಬುರಗಿ ತಾಲೂಕಿನ ಮೇಳಕುಂದಾ (ಬಿ) ಗ್ರಾಮದ ಸಮ್ಯಾ ಅಲಿಯಾಸ್ ಶಮೀರ ರೇಲಪೂತ ಅಲಿಯಾಸ್ ಬಾಬು ಕಾಳೆ ಬಂಧಿತ ಪ್ರಮುಖ ಆರೋಪಿ. ಅದರಂತೆ ಮೇಳಕುಂದಾ ಗ್ರಾಮದ ರಾಹುಲ್ ಕಾರಜೋಳ ಬೋಸ್ಲೆ, ಆಳಂದ ತಾಲೂಕಿನ ಬೀರಪ್ಪ ಅಂದಪ್ಪ ತಡಲಗಿ ಬಂಧಿತ ಇನ್ನಿಬ್ಬರು ಆರೋಪಿಗಳು.
ಆರೋಪಿಗಳನ್ನು ಆಳಂದ ತಾಲೂಕಿನ ದೇವಂತಗಿ ಗ್ರಾಮದಲ್ಲಿ ಬಂಧಿಸಿ ಸುಮಾರು 9ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಈಶಾನ್ಯ ವಲಯ ಐಜಿಪಿ ಅಲೋಕಕುಮಾರ ಸುದ್ದಿಗಾರರಿಗೆ ತಿಳಿಸಿದರು.
ಪ್ರಮುಖ ಆರೋಪಿ ಸಮ್ಯಾ ಅಲಿಯಾಸ್ ಶಮೀರ್ ಎನ್ನುವಾತ ನಿಂಬರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿದ್ದಪ್ಪ ಬೋಸ್ಲೆ ಎಂಬಾತನ ಕೊಲೆ ಮಾಡಿದ್ದಲ್ಲದೆ ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರವಿ ಪವಾರ ಎನ್ನುವಾತನನ್ನು ಕೊಲೆ ಮಾಡಿದ್ದ. ಅಲ್ಲದೇ ಮಹಾರಾಷ್ಟ್ರದ ಕುರುಡವಾಡಿ ರೈಲ್ವೇ ಪೊಲೀಸ್‌ರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಪ್ರಮುಖ ಆರೋಪಿಯೂ ಆಗಿದ್ದಾನೆ. ಇಷ್ಟೆಲ್ಲ ಕುಖ್ಯಾತಿ ಹೊಂದಿದ್ದರೂ ಪೊಲೀಸ್‌ರ ಕೈಗೆ ಸಿಕ್ಕಿರಲಿಲ್ಲ. ಈಗ ಬಂಧನವಾಗಿದ್ದಾನೆ. ಇನ್ನೂ ಮೂವರು ಆರೋಪಿಗಳನ್ನು ಬಂಧಿಸಬೇಕಾಗಿದೆ. ಕಾರ್ಯಾಚರಣೆ ನಡೆದಿದೆ ಎಂದು ವಿವರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಹೆಚ್ಚುವರಿ ಎಸ್ಪಿ ಜಯಪ್ರಕಾಶ, ಡಿಎಸ್ಪಿ ಗಜಕೋಶ ಹಾಗೂ ಮುಂತಾದವರಿದ್ದರು.
20 ಸಾವಿರ ರೂ. ಬಹುಮಾನ: ತನಿಖೆ ನಡೆಸಿ ಕುಖ್ಯಾತ ಆರೋಪಿಗಳನ್ನು ಬಂಧಿಸಿದ್ದಕ್ಕೆ ತನಿಖಾ ತಂಡಕ್ಕೆ ಈಶಾನ್ಯ ವಲಯ ಐಜಿಪಿ 20 ಸಾವಿರ ರೂ. ಬಹುಮಾನ ಘೋಷಿಸಿ, ಅಭಿನಂದನೆ ಸಲ್ಲಿಸಿದರು. ಆಳಂದ ಡಿಎಸ್ಪಿ ಪಿ.ಡಿ.ಗಜಕೋಶ, ಸಿಪಿಐ ಸೋಮಲಿಂಗ ಕಿರದಳ್ಳಿ, ಪಿಎಸ್‌ಐಗಳಾದ ಸುರೇಶ ಬಾಬು, ಉದ್ದಂಡಪ್ಪ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡ ರಚಿಸಲಾಗಿತ್ತು.
ಬಯಲಿಗೆ ಬಂದದ್ದು ಹೇಗೆ?
ಆಳಂದ ತಾಲೂಕಿನ ಜಿಡಗಾ ಮಠ ಕಳ್ಳತನವಾಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧನವಾದ ನಂತರ ಕೂಲಂಕುಷವಾಗಿ ತನಿಖೆ ನಡೆಸಿದಾಗ ಬಂಗಾರವನ್ನು ಬೀರಪ್ಪ ಹತ್ತಿರ ಮಾರಾಟ ಮಾಡುತ್ತಿದ್ದರು ಎಂಬುದು ಪತ್ತೆಯಾಗಿದೆ. ಇದನ್ನೇ ಆಧಾರವಾಗಿ ಇಟ್ಟುಕೊಂಡು ತನಿಖೆ ನಡೆಸಿ ಕಾರ್ಯಾಚರಣೆ ಕೈಗೊಂಡಾಗ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದೆ.