ಬೆಂಗಳೂರು: ಬೆಂಗಳೂರಿನಲ್ಲಿರುವ ಬೃಹತ್ ಮಾಲ್‌ಗಳ ಮಾದರಿಯಲ್ಲೇ ಶೀಘ್ರದಲ್ಲೇ ಖಾದಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ “ಖಾದಿ ಪ್ಲಾಜಾ’ಗಳು ತಲೆಯೆತ್ತಲಿವೆ. ಪ್ರಸಕ್ತ ಸಾಲಿನಲ್ಲಿ ತಲಾ ಹತ್ತು ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಸುಮಾರು ಎರಡು ಎಕರೆ ಜಾಗದಲ್ಲಿ ಬೃಹತ್ ಖಾದಿ ಪ್ಲಾಜಾ ನಿರ್ಮಿಸಲು ಉದ್ದೇಶಿಸಿದ್ದು, ಜಾಗದ ಹುಡುಕಾಟ ನಡೆದಿದೆ ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಲ್‌ಗಳ ಮಾದರಿಯಲ್ಲೇ ಈ ಪ್ಲಾಜಾಗಳು ಹೈಟೆಕ್ ಆಗಿರಲಿವೆ. ಯುವ ಸಮುದಾಯವನ್ನು ಸೆಳೆಯುವ ಆಕರ್ಷಕ ವಿನ್ಯಾಸವುಳ್ಳ ಖಾದಿ ಬಟ್ಟೆ ಸೇರಿದಂತೆ ವಿವಿಧ ಪ್ರಕಾರದ ಉತ್ಪನ್ನಗಳು ಈ ಪ್ಲಾಜಾದಲ್ಲಿ ದೊರೆಯಲಿವೆ. ಇವುಗಳ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮವಾಗಿ ಶೇ. 75 ಮತ್ತು ಶೇ. 25ರಷ್ಟು ಭರಿಸಲಿವೆ. ಒಟ್ಟಾರೆ ನಾಲ್ಕು ಖಾದಿ ಪ್ಲಾಜಾಗಳಿಗೆ ಮನವಿ ಮಾಡಲಾಗಿತ್ತು. ಈ ಪೈಕಿ ಎರಡಕ್ಕೆ ಸರ್ಕಾರ ಅನುಮತಿ ನೀಡಿದೆ. ಉಳಿದೆರಡನ್ನು ಮುಂದಿನ ವರ್ಷ ಮಂಜೂರು ಮಾಡಲಿದೆ. ಇದರಿಂದ ಖಾದಿ ಉತ್ಪನ್ನಗಳಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದು ಅವರು ಹೇಳಿದರು.
ಶೀಘ್ರ ಸಾಮೂಹಿಕ ಸೌಲಭ್ಯ ಕೇಂದ್ರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪ ಮುಖ್ಯ ಕಾರ್ಯನಿರ್ವಧಿಹಣಾಧಿಕಾರಿ (ಅಭಿವೃದ್ಧಿ) ಮಾತನಾಡಿ, ಪ್ಲಾಜಾ ಜತೆಗೆ ಖಾದಿಗೆ ಸಂಬಂಧಿಸಿದ ಸಾಮೂಹಿಕ ಸೌಲಭ್ಯ ಕೇಂದ್ರ ಕೂಡ ತೆರೆಯಲು ಉದ್ದೇಶಿಸಲಾಗಿದೆ. ಸರ್ಕಾರದಿಂದ ಇದಕ್ಕೆ ಈಗಾಗಲೇ ಒಪ್ಪಿಗೆ ದೊರಕಿದೆ. ಈ ಕೇಂದ್ರದಲ್ಲಿ ಡೈಯಿಂಗ್, ಪ್ರಿಂಟಿಂಗ್ ಸೇರಿದಂತೆ ವಿವಿಧ ಚಟುವಟಿಕೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಇದಲ್ಲದೆ, ಪ್ರತಿ ಜಿಲ್ಲಾ ಕೇಂದ್ರದಲ್ಲಿ ಖಾದಿ ಗ್ರಾಮೋದ್ಯೋಗ ಮಂಡಳಿ ಕಚೇರಿ ಸ್ಥಾಪಿಸಲಾಗುವುದು. ಇಲ್ಲಿ ಸ್ಥಳೀಯ ಖಾದಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುವುದು. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪೂರಕ ಸ್ಪಂದನೆ ಕೂಡ ದೊರಕಿದೆ ಎಂದು ಇದೇ ವೇಳೆ ತಿಳಿಸಿದರು. ದೇಶದಲ್ಲಿ 1,200 ಕೋಟಿ ರೂ.ಗಳಷ್ಟು ಖಾದಿ ಉತ್ಪನ್ನಗಳು ಉತ್ಪಾದನೆಯಾಗುತ್ತಿವೆ.
ಇದರಲ್ಲಿ ರಾಜ್ಯದ ಪಾಲು 110 ಕೋಟಿ ರೂ. ಇದೆ. ಇದನ್ನು ವಿಸ್ತರಿಸುವ ನಿಟ್ಟಿನಲ್ಲಿ ರಾಜ್ಯದ 140 ಖಾದಿ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅಲ್ಲದೆ, ವಿಶೇಷ ಘಟಕ ಯೋಜನೆ ಅಡಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಗುಡಿ ಕೈಗಾರಿಕೆ ಆರಂಭಿಸಲು ಕ್ರಮವಾಗಿ ಶೇ. 60 ಮತ್ತು ಶೇ. 50ರಷ್ಟು ಅನುದಾನ ಕಲ್ಪಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಅಭಿವೃದ್ಧಿ ಅಧಿಕಾರಿ (ಪಿಎಂಇಜಿಪಿ) ಅಣ್ಣಪ್ಪ, ಖಾದಿ ಅಭಿವೃದ್ಧಿ ಅಧಿಕಾರಿಗಳಾದ ಸಂಪತ್‌ಕುಮಾರ್, ರಾಜಣ್ಣ ಉಪಸ್ಥಿತರಿದ್ದರು.