Advertisement

ನಾಳೆಯಿಂದ ಬಳ್ಳಾರಿಯಲ್ಲಿ ಖಾದಿ ಉತ್ಸವ

04:52 PM Aug 13, 2018 | |

ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣ ರಸ್ತೆಯ ವಾಲ್ಮೀಕಿ ಭವನದ ಎದುರು ಆ.14 ರಿಂದ 28ರ ವರೆಗೆ 15 ದಿನಗಳ ಕಾಲ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟದ ಖಾದಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮೋದ್ಯೋಗದ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ತಿಳಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯರಲ್ಲಿ ಗುಡಿ ಕೈಗಾರಿಕೆ ಸ್ಥಾಪಿಸುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸುವ ಸಲುವಾಗಿ ಈ ಖಾದಿ ಗ್ರಾಮೋದ್ಯೋಗ ವಸ್ತು ಪ್ರದರ್ಶನ
ಆಯೋಜಿಸಲಾಗುತ್ತಿದೆ. ವಸ್ತು ಪ್ರದರ್ಶನದಲ್ಲಿ ಒಟ್ಟು 75 ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ.

ಇದರಲ್ಲಿ 40 ಮಳಿಗೆಗಳು ಖಾದಿ ಗ್ರಾಮೋದ್ಯಗಕ್ಕೆ ಮೀಸಲಿರಿಸಲಾಗಿದ್ದು, ಪ್ರತಿ ಮಳಿಗೆಗೆ 12 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ. ಇನ್ನುಳಿದ 35 ಮಳಿಗೆಗಳನ್ನು ಗ್ರಾಮೀಣ ಭಾಗದ ಗುಡಿಕೈಗಾರಿಕೆಗೆ ಮೀಸಲಿಡಲಾಗಿದ್ದು, ಪ್ರತಿ ಮಳಿಗೆಗೆ 10 ಸಾವಿರ ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದವರು ತಿಳಿಸಿದರು.

ಪ್ರದರ್ಶನದಲ್ಲಿ ಕೇವಲ ಬಳ್ಳಾರಿ ಜಿಲ್ಲೆಯ ಖಾದಿ ಮತ್ತು ಗುಡಿ ಕೈಗಾರಿಕೆಗಳ ಮಳಿಗೆಗಳು ಆಗಮಿಸದೆ, ನೆರೆಹೊರೆಯ ಜಿಲ್ಲೆ, ರಾಜ್ಯ ಮತ್ತು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಖಾದಿ ಹಾಗೂ ಗುಡಿ ಕೈಗಾರಿಕೆ ವ್ಯಾಪಾರಿಗಳು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯ ಸರ್ಕಾರ ನೀಡಿರುವ 25 ಲಕ್ಷ ರೂ. ಅನುದಾನದಲ್ಲಿ ಖಾದಿ ಗ್ರಾಮೋದ್ಯೋಗ ಆಯೋಜಿಸಲಾಗುತ್ತಿದೆ. 15 ದಿನಗಳ ಕಾಲ ನಡೆಯಲಿರುವ ಗ್ರಾಮೋದ್ಯೋಗ ಮೇಳದಲ್ಲಿ ಸುಮಾರು 1 ಕೋಟಿ ರೂ.ಗೂ ಅ ಕವಹಿವಾಟು ನಡೆಯುವ ನಿರೀಕ್ಷೆ ಹೊಂದಲಾಗಿದೆ ಎಂದರು.

ಮೇಳದಲ್ಲಿ ಕೈಯಲ್ಲಿ ನೇಯ್ದ, ಕೈಯಿಂದ ನೂಲಿದ ಖಾದಿ ಮತ್ತು ರೇಷ್ಮೆ ವಸ್ತ್ರಗಳಿಗೆ ಸಂಬಂಧಿಸಿದ್ದ ಉತ್ಪನ್ನಗಳನ್ನು ಮಾತ್ರ ಪ್ರದರ್ಶಿಸಲಾಗುತ್ತದೆ. ಪ್ರತಿ ವಸ್ತ್ರಗಳಿಗೆ ನಿಗದಿತ ಬೆಲೆಗಿಂತ ಶೇ.35 ರಷ್ಟು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ದೊರೆಯಲಿದೆ. ಕಡಿತಗೊಳಿಸಿದ್ದ ಶೇ. 35 ರಷ್ಟು ದರವನ್ನು ಗ್ರಾಹಕರ ಪರವಾಗಿ ಸರ್ಕಾರ ವ್ಯಾಪಾರಿಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

Advertisement

ಗುಡಿ ಕೈಗಾರಿಕೆಗಳಲ್ಲಿ ರೆಡಿಮೇಡ್‌ ವಸ್ತ್ರಗಳು, ಲಿಡ್‌ಕರ್‌, ಅಗರ್‌ಬತ್ತಿ, ಅಪ್ಪಳ ತಯಾರಿಕೆ, ವ್ಯಾನಿಟಿ ಬ್ಯಾಗ್‌ ಸಿದ್ಧ ಪಡಿಸುವುದು ಇನ್ನಿತರೆ ಗುಡಿಕೈಗಾರಿಕೆಗಳ ವಸ್ತುಗಳನ್ನು ಪ್ರದರ್ಶಿಸಲಾಗುತ್ತದೆ. ಮೇಳದಿಂದ ಖಾದಿ ವ್ಯಾಪಾರಿಗಳು ಮತ್ತು ಗ್ರಾಹಕರ ನಡುವೆ ನೇರ ವಹಿವಾಟು ಸಂಪರ್ಕ ಬೆಳೆಯಲಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಲಿದೆ ಎಂದರು.
 
ಖಾದಿ ಗ್ರಾಮೋದ್ಯೋಗ ಉತ್ಸವವನ್ನು ಜಿಲ್ಲಾಮಟ್ಟ, ವಲಯಮಟ್ಟ, ರಾಜ್ಯಮಟ್ಟ ಎಂದು ಮೂರು ವಿಭಾಗದಲ್ಲಿ ಆಯೋಜಿಸಲಾಗುತ್ತದೆ. ಪ್ರಸಕ್ತ 2018-19ನೇ ಸಾಲಿನ ಮೊದಲ ರಾಜ್ಯಮಟ್ಟದ ಖಾದಿ ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟವನ್ನು ಬಳ್ಳಾರಿಯಲ್ಲಿ ಆ.14 ರಿಂದ ಚಾಲನೆ ಪಡೆದುಕೊಳ್ಳಲಿದೆ. ಬಳಿಕ ಸೆಪ್ಟೆಂಬರ್‌ ತಿಂಗಳಲ್ಲಿ ಕಲಬುರ್ಗಿ, ಅಕ್ಟೋಬರ್‌ ತಿಂಗಳಲ್ಲಿ ಮೈಸೂರು, ವಿಜಯಪುರ, ಡಿಸೆಂಬರ್‌ ತಿಂಗಳಲ್ಲಿ ತುಮಕೂರು, ಬೆಂಗಳೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ವಲಯ ಮಟ್ಟದ ಖಾದಿ ಗ್ರಾಮೋದ್ಯೋಗ ಮೇಳವನ್ನು ಆಯೋಜಿಸಲಾಗುತ್ತದೆ ಎಂದವರು ತಿಳಿಸಿದರು.

ಮೇಳವನ್ನು ಆ.14 ರಂದು ಬೆಳಗ್ಗೆ 11ಕ್ಕೆ ಸಣ್ಣ ಕೈಗಾರಿಕೆ ಸಚಿವ ಎಸ್‌.ಆರ್‌. ಶ್ರೀನಿವಾಸ್‌ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಮಳಿಗೆಗಳಿಗೆ ಚಾಲನೆ ನೀಡುವರು. ಜಿಪಂ ಅಧ್ಯಕ್ಷೆ ಸಿ. ಭಾರತಿ ತಿಮ್ಮಾರೆಡ್ಡಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವರು. ಶಾಸಕ ಜಿ. ಸೋಮಶೇಖರರೆಡ್ಡಿ ಅಧ್ಯಕ್ಷತೆ ವಹಿಸುವರು. ಡಿಸಿ ರಾಮ್‌ ಪ್ರಸಾತ್‌ ಮನೋಹರ್‌, ಜಿಪಂ ಸಿಇಒ ಡಾ| ಕೆ.ವಿ.ರಾಜೇಂದ್ರ, ಎಸ್‌ಪಿ ಅರುಣ್‌ ರಂಗರಾಜನ್‌ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳ ಶಾಸಕರು, ಪಾಲಿಕೆ ಮೇಯರ್‌, ಸದಸ್ಯರು ಇತರರು ಉಪಸ್ಥಿತರಿರುವರು.

ಮಂಡಳಿಯ ಉಪಮುಖ್ಯ ಕಾರ್ಯದರ್ಶಿ ಸೋಮನಾಥ್‌, ಜಿಲ್ಲಾಖಾದಿ ಮತ್ತು ಗ್ರಾಮೋದ್ಯೋಗದ ಅಧಿಕಾರಿ ಗೋವಿಂದಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next