Advertisement

ಖಡಕ್‌ ಗೌಡ್ರ ರಗಡ್‌ ಎಂಟ್ರಿ!

08:28 AM Aug 12, 2019 | Suhan S |

ಅವನ ಹೆಸರು ಕೆಂಪೇಗೌಡ. ಪೊಲೀಸ್‌ ಸರ್ಕಲ್ ಇನ್ಸ್‌ಪೆಕ್ಟರ್‌. ಇಲಾಖೆಗೆ ಸೇರಿದ 7-8 ವರ್ಷಗಳಲ್ಲಿ 15-16 ಕಡೆ ಟ್ರಾನ್ಸ್‌ಫ‌ರ್‌. ಅದಕ್ಕೆ ಕಾರಣ ‘ಕೆಂಪೇಗೌಡ’ನ ಯಾರಿಗೂ ಕ್ಯಾರೆ ಎನ್ನದ ಗುಣ ಮತ್ತವನ ಪ್ರಾಮಾಣಿಕ ಕೆಲಸ. ಪೊಲೀಸ್‌ ಇಲಾಖೆಯಲ್ಲಿ ‘ಕೆಂಪೇಗೌಡ’ ಅಂದ್ರೆ ಸಿಂಗಂ ಅನ್ನೋದು ವಾಡಿಕೆ ಮಾತು. ಕೆಲವರ ಪಾಲಿಗೆ ‘ಕೆಂಪೇಗೌಡ’ ಹೀರೋ, ಇನ್ನು ಕೆಲವರ ಪಾಲಿಗೆ ಕನಸಿನಲ್ಲೂ ಬಂದು ಕಾಡುವ ವಿಲನ್‌. ತನ್ನ ವೃತ್ತಿಯಲ್ಲಿ ಕ್ಷಣಕ್ಷಣಕ್ಕೂ ಸವಾಲುಗಳನ್ನು ಮೆಟ್ಟಿ ಮುಂದೆ ಹೋಗುವ ‘ಕೆಂಪೇಗೌಡ’ ಅಂತಿಮವಾಗಿ ತನ್ನ ಗುರಿ ಸೇರುತ್ತಾನಾ? ಅಥವಾ ವ್ಯವಸ್ಥೆಯೊಂದಿಗೆ ರಾಜಿಯಾಗಿ ಆರಾಮಾಗಿರುತ್ತಾನಾ? ಇದೆಲ್ಲವನ್ನು ನೋಡಬೇಕಾದರೆ ಈ ವಾರ ತೆರೆಗೆ ಬಂದಿರುವ ‘ಕೆಂಪೇಗೌಡ 2’ ಚಿತ್ರವನ್ನು ನೋಡಬಹುದು.

Advertisement

‘ಕೆಂಪೇಗೌಡ 2’ ಚಿತ್ರದ ಕಥೆಯಲ್ಲಿ ತೀರಾ ಹೊಸದೇನನ್ನೂ ನಿರೀಕ್ಷಿಸುವಂತಿಲ್ಲ. ಪ್ರಾಮಾಣಿಕ ಪೊಲೀಸ್‌ ಅಧಿಕಾರಿ ವ್ಯವಸ್ಥೆಯಲ್ಲಿ ಏನೇನು ಸವಾಲುಗಳನ್ನು ಎದುರಿಸುತ್ತಾನೆ ಅನ್ನೋ ಸಂಗತಿಯೇ ಈ ಚಿತ್ರದಲ್ಲೂ ಇದೆ. ಆದರೆ ಅದನ್ನು ಹೇಗೆ ಎದುರಿಸುತ್ತಾನೆ ಅನ್ನೋದೆ ಚಿತ್ರದ ವಿಶೇಷ. ಕಥೆಯಲ್ಲಿಯೇ ಬರುವ ಒಂದಷ್ಟು ಅನಿರೀಕ್ಷಿತ ತಿರುವುಗಳು ಪ್ರೇಕ್ಷಕರನ್ನು, ಶಿವಾಜಿನಗರ ಪೊಲೀಸ್‌ ಸ್ಟೇಷನ್‌ನಿಂದ ಹಿಡಿದು ದೇಶ-ವಿದೇಶಗಳಲ್ಲಿ ಸುತ್ತಿಸಿ ಕೊನೆಗೆ ವಿಧಾನಸೌಧ, ಮಂಗಳೂರು ಬಂದರಿನವರೆಗೆ ಕರೆದುಕೊಂಡು ಹೋಗುತ್ತದೆ. ಚಿತ್ರದ ಕಥೆಯ ಎಳೆಯಲ್ಲಿ ಇನ್ನಷ್ಟು ಹೊಸತನ ಹುಡುವ ಪ್ರಯತ್ನ ಮಾಡಿದ್ದರೆ, ‘ಕೆಂಪೇಗೌಡ’ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದ.

ಇನ್ನು ‘ಕೆಂಪೇಗೌಡ 2’ ಚಿತ್ರದಲ್ಲಿ ‘ಕೆಂಪೇಗೌಡ’ನಾಗಿ ಕೋಮಲ್ ಅವರದ್ದು ಅತ್ಯಂತ ಗಂಭೀರ ಅಭಿನಯ. ಪೊಲೀಸ್‌ ಅಧಿಕಾರಿಯ ಪಾತ್ರಕ್ಕೆ ಕೋಮಲ್ ಜೀವ ತುಂಬಿ ಅಭಿನಯಿಸಿದ್ದಾರೆ. ತಮ್ಮ ದೇಹವನ್ನು ಫಿಟ್ ಆ್ಯಂಡ್‌ ಫೈನ್‌ ಮಾಡಿಕೊಂಡಿರುವ ಕೋಮಲ್ ಚಿತ್ರದಲ್ಲಿ ಖಡಕ್‌ ಆ್ಯಕ್ಷನ್‌, ಮಾಸ್‌ ಡೈಲಾಗ್ಸ್‌ನಿಂದ ಅಲ್ಲಲ್ಲಿ ಶಿಳ್ಳೆ-ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಆದರೆ, ಕನ್ನಡದಲ್ಲಿ ಕಾಮಿಡಿ ಕಿಂಗ್‌ ಎಂದೇ ಖ್ಯಾತರಾಗಿದ್ದ ಕೋಮಲ್ ಅವರ ಇಡೀ ಚಿತ್ರದಲ್ಲಿ ಒಂಚೂರು ಕಾಮಿಡಿ ಇಲ್ಲ ಎನ್ನೋದು ಅವರ ಅಭಿಮಾನಿಗಳು ಅರಗಿಸಿಕೊಳ್ಳೋದು ಸ್ವಲ್ಪ ಕಷ್ಟವಾಗಬಹುದು. ಆದರೆ ‘ಕೆಂಪೇಗೌಡ 2’ ಮೂಲಕ ಹೊಸ ಇಮೇಜ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ಕೋಮಲ್ ಹಾಕಿರುವ ಪರಿಶ್ರಮ ಚಿತ್ರದಲ್ಲಿ ಎದ್ದು ಕಾಣುತ್ತದೆ. ಪ್ರಯತ್ನ ಮೆಚ್ಚಲೇಬೇಕು. ಉಳಿದಂತೆ ಚಿತ್ರದಲ್ಲಿ ಒಂದು ಹಾಡಿಗೆ ಹೆಜ್ಜೆ ಹಾಕಿ, ಒಂದೆರಡು ಕಡೆ ಕಾಣಿಸಿಕೊಳ್ಳುವುದನ್ನು ಬಿಟ್ಟರೆ ನಾಯಕಿಗೆ ಹೆಚ್ಚು ಕೆಲಸವಿಲ್ಲ. ಖಳನಾಯಕನಾಗಿ ಮಾಜಿ ಕ್ರಿಕೆಟಿಗ ಶ್ರೀಶಾಂತ್‌ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಇತರೆ ಕಲಾವಿದರದ್ದು ಅಚ್ಚುಕಟ್ಟಾದ ಅಭಿನಯ ಎನ್ನಬಹುದು.

ಚಿತ್ರದ ಹಾಡುಗಳು ಅಷ್ಟಾಗಿ ಪ್ರೇಕ್ಷಕರ ಕಿವಿಯಲ್ಲಿ ಉಳಿಯು ವುದಿಲ್ಲ. ಚಿತ್ರದ ಛಾಯಾಗ್ರಹಣ, ಸಂಕಲನ ಕಾರ್ಯ ಪರವಾಗಿಲ್ಲ ಎನ್ನುವಂತಿದೆ. ಅದ್ಧೂರಿ ಲೊಕೇಶನ್ಸ್‌, ಭರ್ಜರಿ ಆ್ಯಕ್ಷನ್ಸ್‌, ಮಾಸ್‌ ಡೈಲಾಗ್ಸ್‌, ಕೋಮಲ್ ಅಭಿನಯ ಇವಿಷ್ಟು ‘ಕೆಂಪೇಗೌಡ 2’ನ ಅಸಲಿ ಜೀವಾಳ. ಒಟ್ಟಿನಲ್ಲಿ ಇಲ್ಲಿಯವರೆಗೆ ಕೋಮಲ್ ಅವರ ಕಾಮಿಡಿ ಕಮಾಲ್ ನೋಡಿದ್ದ ಪ್ರೇಕ್ಷಕರು ಅವರ ಆ್ಯಕ್ಷನ್‌ ಗೆಟಪ್‌ ಹೇಗಿರಲಿದೆ ಅನ್ನೋದು ನೋಡಬೇಕೆಂದಿದ್ದರೆ, ‘ಕೆಂಪೇಗೌಡ 2’ ಚಿತ್ರವನ್ನು ಒಮ್ಮೆ ನೋಡಲು ಅಡ್ಡಿ ಇಲ್ಲ.

 

Advertisement

● ಜಿ.ಎಸ್‌. ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next