Advertisement

ಕೆಜಿಎಫ್ ಪೊಲೀಸ್‌ ಘಟಕ ಸ್ಥಳಾಂತರಕ್ಕೆ ಯತ್ನ

03:14 PM Nov 19, 2021 | Team Udayavani |

ಕೆಜಿಎಫ್: ಹೊಸದಾಗಿ ಸೃಜನೆಗೊಂಡಿರುವ ವಿಜಯನಗರ ಜಿಲ್ಲೆಗೆ ಕರ್ನಾಟಕ ರಾಜ್ಯ ಪೊಲೀಸ್‌ ಇತಿಹಾಸದಲ್ಲೇ ವಿಶೇಷತೆಯನ್ನು ಪಡೆದಿರುವ ಕೆಜಿಎಫ್ ಪೊಲೀಸ್‌ ಘಟಕವನ್ನು ಸ್ಥಳಾಂತರಗೊಳಿ ಸಲು ಪ್ರಯತ್ನಗಳು ಮುಂದುವರಿದಿದೆ. ಅ.21ರಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಹುದ್ದೆಯು ಖಾಲೆ ಇದ್ದು, ಕೋಲಾರ ಎಸ್‌ಪಿ ಪ್ರಭಾರದಲ್ಲಿದ್ದಾರೆ.

Advertisement

ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ಹೊಸ ದಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಗೆ ಯಾವುದೇ ರೀತಿಯ ಆರ್ಥಿಕ ಹೊರೆಯಾಗದಂತೆ ಪೊಲೀಸ್‌ ಘಟಕವನ್ನು ಸೃಜನೆಮಾಡಲು ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಪ್ರಸ್ತಾವನೆಯಂತೆ ರಾಜ್ಯ ಸರ್ಕಾರವು ಆ.19ರಂದು ಹೊರಡಿಸಿದ ಆದೇಶ ದಂತೆ ಕೆಜಿಎಫ್ ಪೊಲೀಸ್‌ ವಿಶೇಷ ಜಿಲ್ಲೆಯ ಜಿಲ್ಲಾ ಮಟ್ಟದ ಸ್ಥಾನಮಾನವನ್ನು ಸಂಪೂರ್ಣ ಸ್ಥಳಾಂತರಿಸುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

ಸ್ಥಳಾಂತರಿಸುವ ಪ್ರಸ್ತಾವನೆ: ಎಸ್‌ಪಿ ಇಲಕ್ಕಿಯಾ ಕರುಣಾಕರನ್‌ ವರ್ಗಾವಣೆಯ ಬಳಿಕ ಕೆಜಿಎಫ್ಗೆ ಎಸ್‌ಪಿ ಯಾರೂ ನಿಯುಕ್ತಿಗೊಳ್ಳದೇ ಕೋಲಾರದ ಎಸ್‌ಪಿ ಡೆಕ್ಕಾ ಕಿಶೋರ್‌ಬಾಬು ಹೆಚ್ಚುವರಿ ಪ್ರಭಾರ ನೋಡಿಕೊಳ್ಳುತ್ತಿದ್ದಾರೆ. ಈಗಾಗಲೇ ವಿಜಯನಗರಕ್ಕೆ ಕೆಜಿಎಫ್ ಪೊಲೀಸ್‌ ಘಟಕವನ್ನು ಸ್ಥಳಾಂತರಿಸುವ ಪ್ರಸ್ತಾವನೆ ವಿರೋಧಿಸಿ ಕೆಜಿಎಫ್, ಬಂಗಾರಪೇಟೆ ತಾಲೂಕುಗಳಲ್ಲಿ ಭಾರೀ ಪ್ರತಿಭಟನೆ, ಬಂದ್‌ ನಡೆದಿದ್ದರಿಂದಾಗಿ ರಾಜ್ಯ ಸರ್ಕಾರವು ಸ್ಥಳಾಂತರಿಸುವ ಪ್ರಸ್ತಾವನೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿತ್ತು.

19ರಂದು ಆದೇಶ: ಮತ್ತೆ ಕೆಜಿಎಫ್ ಪೊಲೀಸ್‌ ಘಟಕದ ಸ್ಥಳಾಂತರದ ಪ್ರಸ್ತಾವನೆಯು ವ್ಯಾಪಕವಾಗಿ ನಡೆಯುತ್ತಿದೆ. ಕೆಜಿಎಫ್ ಪೊಲೀಸ್‌ ಜಿಲ್ಲೆಯಲ್ಲಿ 965 ಸಂಖ್ಯಾ ಬಲವುಳ್ಳ ಅಧಿಕಾರಿ, ಸಿಬ್ಬಂದಿ ಕಾರ್ಯನಿರ್ವ ಹಿಸುತ್ತಿದ್ದು, ಈ ಪೈಕಿ ಜಿಲ್ಲಾ ಪೊಲೀಸ್‌ ಕಚೇರಿಯ ಲಿಪಿಕ ಮತ್ತು ಕಾರ್ಯಕಾರಿ ಸಿಬ್ಬಂದಿ 40, ಡಿಎಆರ್‌ನ ಎಲ್ಲಾ 248 ಅಧಿಕಾರಿ, ಸಿಬ್ಬಂದಿ ಸ್ಥಳಾಂತರಿಸಲು ಆ.19 ರಂದು ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.

ಕೆಜಿಎಫ್ನಲ್ಲೇ ಸ್ಥಳಾವಕಾಶ: ಉಳಿದಂತೆ ಎಲ್ಲಾ ಒಂಬತ್ತು ಪೊಲೀಸ್‌ ಠಾಣೆಗಳ, ನಾಲ್ಕು ವೃತ್ತ ಕಚೇರಿ ಗಳ ಸಿವಿಲ್‌ ಸಿಬ್ಬಂದಿ ಕೋಲಾರ ಜಿಲ್ಲೆಗೆ ಸೇರ್ಪಡೆ ಮಾಡಲಿದ್ದು, ಕೆಜಿಎಫ್ನಲ್ಲಿ ಉಪವಿಭಾಗ ಕಚೇರಿ ಯು ಮಾತ್ರ ಕಾರ್ಯ ನಿರ್ವಹಿಸಲಿದೆ. ಕೆಜಿಎಫ್ ಡಿಎ ಆರ್‌ ಘಟಕದ ಅಧಿಕಾರಿ ಸಿಬ್ಬಂದಿಗೆ ಕೆಜಿಎಫ್ನಲ್ಲೇ ಸ್ಥಳಾವಕಾಶ ಕಲ್ಪಿಸಲು ಪ್ರಯತ್ನಗಳು ನಡೆಯುತ್ತಿದೆ.

Advertisement

ಸಿಬ್ಬಂದಿಗೆ ಸ್ಥಳಾವಕಾಶ: ಕೆಜಿಎಫ್ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಕೆಎಸ್‌ಐಎಸ್‌ಎಫ್ ಘಟಕ ಪ್ರಾರಂಭಿಸಿ ಅದರಲ್ಲಿ 71 ಮಂದಿಗೆ, ಡಿಎಆರ್‌ನಲ್ಲಿ ಪೊಲೀಸ್‌ ತರಬೇತಿ ಪ್ರಾರಂಭಿಸಿ ಅದರಲ್ಲಿ 40 ಮಂದಿಗೆ, ವಿಜಯ ನಗರ ಜಿಲ್ಲೆಗೆ ತೆರಳಲು ಆಸಕ್ತಿವುಳ್ಳ 67 ಮಂದಿ ಮತ್ತು ಉಳಿದ 70 ಮಂದಿಗೆ ಕೋಲಾರ ಘಟಕದ ಡಿಎಆರ್‌ ನಲ್ಲಿ ಹಂಚಿಕೆ ಮಾಡಿ, ಒಟ್ಟಾರೆ ಕೆಜಿಎಫ್ ಡಿಎಆರ್‌ ಮಂಜೂರಾತಿ ಬಲವನ್ನು ವಿಜಯನಗರ ಜಿಲ್ಲೆಗೆ ಸ್ಥಳಾಂತರ ಮಾಡಲು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರ ಕಚೇರಿಯಲ್ಲಿ ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ.

ಸಿಇಎನ್‌ ಕ್ರೈಂಪೊಲೀಸ್‌ ಠಾಣೆ ಸ್ಥಳಾಂತರ?: ಜಿಲ್ಲಾ ಪೊಲೀಸ್‌ ಕಚೇರಿಯ ಲಿಪಿಕ ಮತ್ತು ಕಾರ್ಯಕಾರಿ ಸಿಬ್ಬಂದಿ 40 ಮಂದಿ ಸೇರಿ, ಕೆಜಿಎಫ್ನ ಡಿಎಆರ್‌, ನಿಸ್ತಂತು ಘಟಕ, ಇಆರ್‌ಎಸ್‌ಎಸ್‌, ಡಿಎಸ್‌ಬಿ, ಡಿಸಿಐಬಿ, ಡಿಸಿಆರ್‌ಬಿ, ಡಿಎಸ್‌ಎ ಘಟಕಗಳ ಸಹಿತ ಸಿಇಎನ್‌ ಕ್ರೈಂಪೊಲೀಸ್‌ ಠಾಣೆಯನ್ನು ವಿಜಯನಗರ ಜಿಲ್ಲೆಗೆ ಸ್ಥಳಾಂತರಿಸಲು ಸಿದ್ಧತೆಗಳು ಮಾಡಲಾಗುತ್ತಿದೆ.

ಡಿ.31ರೊಳಗಾಗಿ ಎಲ್ಲಾ ಪ್ರಕ್ರಿಯೆಗಳು ಪೂರ್ಣ ಗೊಳ್ಳಲಿವೆ ಎಂದು ಹೇಳಲಾಗುತ್ತಿದೆ. ಐತಿಹಾಸಿಕ ಕೆಜಿಎಫ್ ಪೊಲೀಸ್‌ ಜಿಲ್ಲೆಯ ಸ್ಥಾನ ಮಾನವನ್ನು ಪ್ರಸ್ತುತ ವಿಜಯನಗರ ಜಿಲ್ಲೆಗೆ ಆರ್ಥಿಕ ಹೊರೆಯ ಕಾರಣದಿಂದಾಗಿ ರಾಜ್ಯ ಸರ್ಕಾರವು ಸ್ಥಳಾಂತರಿಸಲು ಮುಂದಾಗಿದ್ದು, ಮುಂದಿನ ದಿನ ಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ, ಅಪರಾಧಗಳ ಸಂಖ್ಯೆ ಹೆಚ್ಚಳ, ರೌಡಿಗಳ ಅಟ್ಟಹಾಸ ಹೆಚ್ಚಾಗು ವುದರಲ್ಲಿ ಸಂಶಯವಿಲ್ಲ.

– ಬಿ.ಆರ್‌.ಗೋಪಿನಾಥ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next