ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ “ಕೆಜಿಎಫ್’, ಡಿಸೆಂಬರ್ 21 ರಂದು ತೆರೆ ಕಾಣುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈಗ ಹೊಸ ಸುದ್ದಿಯೆಂದರೆ, ದೇಶದೆಲ್ಲೆಡೆ ಸುಮಾರು ಎರಡು ಸಾವಿರ ಚಿತ್ರಮಂದಿರಗಳಲ್ಲಿ “ಕೆಜಿಎಫ್’ ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ಅಮೆರಿಕಾ, ಕೆನಡಾ, ಯುಕೆಯಲ್ಲೂ “ಕೆಜಿಎಫ್’ ತೆರೆಕಾಣುತ್ತಿದೆ. ಕನ್ನಡದಲ್ಲೇ ಸುಮಾರು 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ “ಕೆಜಿಎಫ್’ ಬಿಡುಗಡೆಯಾಗುತ್ತಿದ್ದು, ಹಿಂದಿ ಭಾಷೆಯಲ್ಲಿ ಭಾರತಾದ್ಯಂತ ಒಂದು ಸಾವಿರ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ವಿಶೇಷ.
ಈ ಕುರಿತು ವಿವರ ಕೊಡುವ ನಿರ್ಮಾಪಕ ವಿಜಯ್ ಕಿರಗಂದೂರ್, “ಸದ್ಯಕ್ಕೆ “ಕೆಜಿಎಫ್’ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿರುವುದು ನಿಜ. ಈವರೆಗೆ ನಾವು ವಿತರಣೆ ಹಕ್ಕುಗಳನ್ನು ನೀಡಿದ್ದೇವೆ ಹೊರತು, ಮಾರಾಟ ಮಾಡಿಲ್ಲ. ಈ ಚಿತ್ರ ಐದು ಭಾಷೆಯಲ್ಲಿ ತೆರೆಗೆ ಬರುತ್ತಿರುವುದರಿಂದ ಈಗಲೇ ಬಿಡುಗಡೆಯಾಗಲಿರುವ ಚಿತ್ರದ ಚಿತ್ರಮಂದಿರಗಳ ಸಂಖ್ಯೆಯನ್ನು ಹೇಳಲಾಗದು. ಆದರೂ, ಎಲ್ಲೆಡೆಯಿಂದಲೂ ಚಿತ್ರ ಬಿಡುಗಡೆ ಮಾಡುವಂತೆ ಕೇಳಲಾಗುತ್ತಿದೆ. ಈಗಾಗಲೇ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ’ ಎಂಬುದು ಅವರ ಮಾತು.
ಇನ್ನು, ಚಿತ್ರಮಂದಿರಗಳಲ್ಲಿ “ಕೆಜಿಎಫ್’ ವೀಕ್ಷಿಸುವ ವೇಳೆ ಯಾರಾದರೂ ಸಿನಿಮಾದ ದೃಶ್ಯಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ಯುಟ್ಯೂಬ್‌ನಲ್ಲಿ ಹರಿ ಬಿಡುವುದನ್ನು ಮಾಡಿದರೆ, ಆ ವಿರುದ್ಧ ಸೈಬರ್ ಕ್ರೈಮ್‌ಗೆ ದೂರು ನೀಡಲು ಚಿತ್ರತಂಡ ಮುಂದಾಗಲಿದೆ. ಅಷ್ಟೇ ಅಲ್ಲ, ಈಗಾಗಲೇ ಅದಕ್ಕೊಂದು ವಿಶೇಷ ತಂಡವನ್ನೂ ರಚಿಸಲಾಗಿದೆ. ನಿರೀಕ್ಷೆಯ ಚಿತ್ರ ಬಿಡುಗಡೆಯಾಗುತ್ತಿರುವ ಆ ಕುರಿತು ಮಾತನಾಡುವ ಯಶ್, “ಈ ಚಿತ್ರಕ್ಕೆ ನಾನು ನಾಯಕನಲ್ಲ. ಅದು ತಂತ್ರಜ್ಞರು.
ಎಲ್ಲಾ ತಂತ್ರಜ್ಞರು ಸಾಥ್ ನೀಡಿದ್ದರಿಂದಲೇ “ಕೆಜಿಎಫ್’ ಅದ್ಭುತವಾಗಿ ಮೂಡಿಬರಲು ಕಾರಣವಾಗಿದೆ’ ಎನ್ನುತ್ತಲೇ, ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬ ತಂತ್ರಜ್ಞರ ಹೆಸರು ಹೇಳುವ ಮೂಲಕ ಅವರಿಗೆ ಥ್ಯಾಂಕ್ಸ್ ಹೇಳಿದರು ಯಶ್. “ಕೆಜಿಎಫ್’ ಕನ್ನಡಿಗರ ಚಿತ್ರ. ಈ ಚಿತ್ರವನ್ನು ದೇಶದ ಎಲ್ಲಾ ಭಾಷೆಯ ಜನರು ನೋಡಬೇಕು. ಹಾಗೆಯೇ ನಮ್ಮ ಕನ್ನಡ ಚಿತ್ರರಂಗದತ್ತ ತಿರುಗಿ ನೋಡಬೇಕು ಎಂಬುದು ಆಸೆಯಾಗಿತ್ತು. ಈಗಾಗಲೇ ಅಂಥದ್ದೊಂದು ಮೋಡಿ ಮಾಡಿದೆ. ಪರಭಾಷೆಯ ಚಿತ್ರೋದ್ಯಮ ಮತ್ತು ಮಾದ್ಯಮಗಳು “ಕೆಜಿಎಫ್’ ಬಗ್ಗೆ ಕುತೂಹಲಗೊಂಡಿವೆ.
ಚಿತ್ರ ಐದು ಭಾಷೆಯಲ್ಲಿ ತೆರೆಕಾಣುತ್ತಿರುವುದರಿಂದ ಎರಡು ವರ್ಷದಲ್ಲಿ ಐದು ಚಿತ್ರದಲ್ಲಿ ನಟಿಸಿದಂತಹ ಅನುಭವ ನನಗಾಗಿದೆ. ಸದ್ಯಕ್ಕೆ “ಕಿರಾತಕ-2′ ನಡೆಯುತ್ತಿದೆ. ಅದಾದ ಬಳಿಕ “ಕೆಜಿಎಫ್ ಚಾಪ್ಟರ್-2′, ಆಮೇಲೆ “ರಾಣಾ’ ಚಿತ್ರಗಳಲ್ಲಿ ನಟಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಒಳ್ಳೆಯ ಕಥೆ ಹಾಗು ನಿರ್ಮಾಣ ಸಂಸ್ಥೆ ಇದ್ದಲ್ಲಿ ಯಾವುದೇ ಭಾಷೆಯಿದ್ದರೂ ನಟಿಸಲು ಅಭ್ಯಂತರವಿಲ್ಲ. ಇಲ್ಲಿಯವರೆಗೂ ಅಂತಹ ಯಾವುದೇ ಅವಕಾಶ ಬಂದಿಲ್ಲ’ ಎಂಬ ಸ್ಪಷ್ಟನೆ ಕೊಟ್ಟರು ಯಶ್. ನಾಯಕಿ ಶ್ರೀನಿಧಿಶೆಟ್ಟಿ ಕೂಡಾ ತಮ್ಮ ಅನುಭವ ಹಂಚಿಕೊಂಡರು.